ಪಿಎಸ್‌ಐ ಹಗರಣ: ಕಂತುಗಳಲ್ಲಿ ಆರೋಪಪಟ್ಟಿ ಸಲ್ಲಿಕೆಗೆ ಆಕ್ಷೇಪ
ಬೆಂಗಳೂರು, ಜೂನ್ 02: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾರಿ ಹಗರಣದ ಸಂಬಂಧ ಕಂತುಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡುತ್ತಿರುವುದಕ್ಕೆ ಆಕ್ಷೇಪ ಎತ್ತಿಲಾಗಿದೆ. ಹಾಗಾಗಿ ಇದೀಗ ಪ್ರಕರಣದ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಆರೋಪಿ, ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಜಾಮೀನು ಅರ್ಜಿ ವಿಚಾರಣೆಯನ್ನು ಸಹ ಮುಂದೂಡಿಕೆ ಮಾಡಲಾಗಿದೆ.
ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಪರ ವಕೀಲರು ಹೈಕೋರ್ಟ್‌ನಲ್ಲಿ, ಪ್ರಾಸಿಕ್ಯೂಷನ್ ವಿಚಾರಣಾ ನ್ಯಾಯಾಲಯಕ್ಕೆ ಒಂದು, ಎರಡು, ಮೂರು, ನಾಲ್ಕು ಹೀಗೆ ಕಂತು ಕಂತುಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದು. ಇದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 173ಕ್ಕೆ ವಿರುದ್ಧವಾದ ನಡವಳಿಕೆ ಎಂದು ಹೇಳಿದ್ದಾರೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಮೃತ್ ಪೌಲ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕೋರ್ಟ್ ಕಲಾಪದ ಅವಧಿ ಮೀರಿದ ಕಾರಣ ನ್ಯಾಯಪೀಠವು ವಿಚಾರಣೆಯನ್ನು ಇದೇ ಜೂನ್ 8ಕ್ಕೆ ಮುಂದೂಡಿತು.
ವಕೀಲರ ವಾದವೇನು?; ವಿಚಾರಣೆ ವೇಳೆ ಅಮ್ರಿತ್ ಪೌಲ್ ಪರ ವಾದ ಮಂಡಿಸಿದ ಹಿರಿಯ ವಕೀಲರು, ಅರ್ಜಿದಾರರು ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ವಿಚಾರಣಾ ನ್ಯಾಯಾಲಯವು ಅವರ ವಿರುದ್ಧದ ಯಾವುದೇ ಅಪರಾಧಗಳನ್ನು ಸಂಜ್ಞೇಯ ಎಂದು ಪರಿಗಣಿಸದೇ ಇರುವ ಕಾರಣ ಅವರ ಬಂಧನ ಕಾನೂನು ಬಾಹಿರವಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಂತು ಕಂತುಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಾಸಿಕ್ಯೂಷನ್ ನಡವಳಿಕೆಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗಷ್ಟೇ ಖಂಡಿಸಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದ ಅವರು, ಕಲಂ 167(2)ರ ಅಡಿಯಲ್ಲಿ ಆರೋಪಿಗಳ ಹಕ್ಕುಗಳಿಗೆ ವಿರುದ್ಧವಾಗಿ ನಡೆಯುವ ಈ ಅಭ್ಯಾಸವನ್ನು ನಿಲ್ಲಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
"ಕರ್ನಾಟಕ ಶಿಕ್ಷಣ ಕಾಯ್ದೆಯಡಿ ನಕಲು ಮಾಡುವುದು ಅತ್ಯಂತ ದುರ್ಬಲ ಅಪರಾಧ ಎನಿಸಿದೆ. ಹೀಗಾಗಿ, ಈ ಪ್ರಕರಣದಲ್ಲಿ ಗಂಭೀರವಾದದ್ದೇನೂ ಇಲ್ಲ ಎಂದು ಅಂದಾಜಿಸಲಾಗಿದೆ. ಅಂತೆಯೇ, ಆರಂಭಿಕವಾಗಿ ಪ್ರಕರಣದ ಅಪರಾಧಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ದಾಖಲಿಸಿದ್ದು, ನಂತರ ಇದಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನೂ ಹೊಸೆಯಲಾಗುತ್ತಿದೆ. ಇದರಿಂದ ಪ್ರಾಸಿಕ್ಯೂಷನ್ ತನ್ನ ವಿಶೇಷ ಅಧಿಕಾರ ವ್ಯಾಪ್ತಿ ಮೀರುತ್ತಿದೆ" ಎಂದು ವಾದ ಮಂಡಿಸಿದರು.
ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮ್ರಿತ್ ಪೌಲ್, ಹಗರಣದ 35ನೇ ಆರೋಪಿಯಾಗಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಕಾರಾಗೃಹದಲ್ಲಿದ್ದಾರೆ.












Click it and Unblock the Notifications