PSI Recruitment Scam; 52 ಅಭ್ಯರ್ಥಿಗಳು ಶಾಶ್ವತ ಡಿಬಾರ್!

ಬೆಂಗಳೂರು, ಜೂನ್ 22; ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭಾರೀ ಸದ್ದು ಮಾಡಿದ್ದು ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆ ಹಗರಣ. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಈಗ ಮಹತ್ವದ ಬೆಳವಣಿಗೆ ನಡೆದಿದ್ದು 52 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ.

ಪೊಲೀಸ್ ಇಲಾಖೆ ನೇಮಕಾತಿ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ಅಕ್ರಮವೆಸಗಿ ಅಪರಾಧ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆಯು ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

PSI Recruitment Scam

ಈ ಆದೇಶಕ್ಕೆ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು ಇವರ ಪತ್ರ 8/12/2022, 18/01/2023 ಮತ್ತು ಕಛೇರಿಯ ಕಾರಣ ಕೇಳುವ ಸೂಚನಾ ಪತ್ರವನ್ನು ಉಲ್ಲೇಖಿಸಲಾಗಿದೆ. ಸರ್ಕಾರ ಲಿಖಿತ ಪರೀಕ್ಷೆಯನ್ನೇ ರದ್ದುಗೊಳಿಸಿತ್ತು. ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಕೆಲವು ಅಭ್ಯರ್ಥಿಗಳು ಮೇಲ್ಮನವಿ ಸಹ ಸಲ್ಲಿಸಿದ್ದಾರೆ.

ಆದೇಶದ ವಿವರಗಳು; ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 (ಪುರುಷ & ಮಹಿಳಾ) ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 03/10/2021 ರಂದು ಬೆಳಗ್ಗೆ 11 ರಿಂದ 12.30 ರವರೆಗೆ ಪತ್ರಿಕೆ-1ನ್ನು ಹಾಗೂ ಮಧ್ಯಾಹ್ನ 3 ರಿಂದ 4.30 ರವರೆಗೆ ಪತ್ರಿಕೆ-2ರ ಲಿಖಿತ ಪರೀಕ್ಷೆಗಳನ್ನು ರಾಜ್ಯದ 7 ಕೇಂದ್ರಗಳಾದ ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಕಲಬುರಗಿ ನಗರ, ತುಮಕೂರು ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಡೆಸಲಾಗಿರುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಸದರಿ ಲಿಖಿತ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ನೇಮಕಾತಿಯ ಲಿಖಿತ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಸಿಐಡಿ ಘಟಕಕ್ಕೆ ಆದೇಶಿಸಿರುತ್ತದೆ. ಅದರಂತೆ ಸಿಐಡಿ ಕಛೇರಿಯಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 ಹುದ್ದೆಗಳ ಲಿಖಿತ ಪರೀಕ್ಷೆಗಳಲ್ಲಿ ಅಕ್ರಮವೆಸಗಿರುವ ಈ ಕೆಳಕಂಡ 52 ಆರೋಪಿಗಳನ್ನು ವಿಚಾರಣೆ ಮಾಡಿ, ಸದರಿಯವರುಗಳ ವಿರುದ್ಧ ಬೆಂಗಳೂರು ನಗರ, ಕಲಬುರಗಿ ನಗರ, ಹುಬ್ಬಳ್ಳಿ-ಧಾರವಾಡ ನಗರ ಹಾಗೂ ತುಮಕೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಮೊಕದ್ದಮೆಗಳನ್ನು ದಾಖಲಿಸಿ ಬಂಧನ ಮಾಡಲಾಗಿರುತ್ತದೆ ಎಂದು ಆದೇಶ ಹೇಳಿದೆ.

ಸಿಐಡಿ ಘಟಕದಿಂದ ಕೈಗೊಂಡಿರುವ ತನಿಖೆಯಲ್ಲಿ ಆರೋಪಿಗಳಲ್ಲಿ ಕೆಲವರು ಲಿಖಿತ ಪರೀಕ್ಷೆಯ ಪತ್ರಿಕೆ-1 ಅನ್ನು ಬರೆಯುವ ಸಂದರ್ಭದಲ್ಲಿ ಬ್ಲೂಟೂತ್‌ ಹಾಗೂ ಇತರೆ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಉಪಯೋಗಿಸಿ ಅಕ್ರಮವಾಗಿ ಪರೀಕ್ಷೆ ಬರೆದಿರುವುದು ಕಂಡು ಬಂದಿರುತ್ತದೆ ಹಾಗೂ ಇನ್ನು ಕೆಲವು ಅಭ್ಯರ್ಥಿಗಳು ಅನುಚಿತ ಮಾರ್ಗವನ್ನು ಅನುಸರಿಸಿ ಓ.ಎಂ.ಆರ್.ಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿಸಿಕೊಂಡಿರುವುದು ಕಂಡು ಬಂದಿರುತ್ತದೆ ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.

ಈ ರೀತಿಯಾಗಿ ಲಿಖಿತ ಪರೀಕ್ಷೆಗಳನ್ನು ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಬರೆದಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಕಲಬುರಗಿ ನಗರ, ಹುಬ್ಬಳ್ಳಿ-ಧಾರವಾಡ ನಗರ ಮತ್ತು ತುಮಕೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಿ ವಿಚಾರಣೆ ಮಾಡಿದ ನಂತರ ದೋಷಾರೋಪಣಾ ಪಟ್ಟಿಗಳನ್ನು ತಯಾರಿಸಿ ಸಿಐಡಿ ಘಟಕದ ತನಿಖಾಧಿಕಾರಿಗಳಿಂದ ನ್ಯಾಯಾಲಯಗಳಿಗೆ ಸಲ್ಲಿಸಲಾಗಿರುತ್ತದೆ.

ಲಿಖಿತ ಪರೀಕ್ಷೆಗಳಲ್ಲಿ ಅಕ್ರಮವೆಸಗಿರುವ 52 ಆರೋಪಿಗಳ ವಿರುದ್ಧ ಬೆಂಗಳೂರು ನಗರ, ಕಲಬುರಗಿ ನಗರ, ಹುಬ್ಬಳ್ಳಿ-ಧಾರವಾಡ ನಗರ ಹಾಗೂ ತುಮಕೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಮೊಕದ್ದಮೆಗಳನ್ನು ದಾಖಲಿಸಿ ದಸ್ತಗಿರಿ ಮಾಡಲಾಗಿರುವ ಹಿನ್ನೆಲೆಯಲ್ಲಿ ಕಾರಣ ಕೇಳುವ ಸೂಚನಾ ಪತ್ರವನ್ನು ಕಳುಹಿಸಲಾಗಿರುತ್ತದೆ. ನಂತರ ಸದರಿ ಅಭ್ಯರ್ಥಿಗಳು ಕಾರಣ ಕೇಳುವ ಸೂಚನಾ ಪತ್ರಕ್ಕೆ ಸಮಜಾಯಿಷಿಯನ್ನು ನೀಡಿರುತ್ತಾರೆ.

1977ರ ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳಲ್ಲಿ ನಿಯಮ-20 ರಲ್ಲಿ ನಮೂದಿಸಿರುವ ದುರ್ನಡತೆಯನ್ನು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) 545 ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆ ಮಾಚಿರುವನೆಂದು ಅಥವಾ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾದ ಪರೀಕ್ಷೆಯಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಕಂಡುಬಂದಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಪರೀಕ್ಷಾ ಕೊಠಡಿಯಲ್ಲಿ ದುರ್ವರ್ತಿರಸುತ್ತಿರುವನೆಂದು, ತಪ್ಪಿತಸ್ಥನೆಂದು ಕಂಡುಬಂದಲ್ಲಿ ಅಥವಾ ಒಂದು ಕೇಂದ್ರದಲ್ಲಿ ದೈಹಿಕ ಪರೀಕ್ಷೆಗಳಿಗೆ ಹಾಜರಾಗಿರುವ ವಿಷಯವನ್ನು ಮರೆಮಾಡಿ ಮತ್ತೊಂದು ಕೇಂದ್ರದಲ್ಲಿ ದೈಹಿಕ ಪರೀಕ್ಷೆಗೆ ಹಾಜರಾದರೆ ಹಾಗೂ ನೇಮಕಾತಿ ಸಮಿತಿಯಿಂದ ನೀಡಲಾದ ಯಾವುದೇ ಸೂಚನೆಗಳನ್ನು ಉಲ್ಲಂಘಿಸುತ್ತಿರುವನೆಂದು ಅಥವಾ ಅವನು/ ಅವಳು ನೇಮಕಾತಿಯ ಸಂದರ್ಭದಲ್ಲಿ ಯಾವುದೇ ಇತರೆ ಆಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡಬಂದಲ್ಲಿ ಅಭ್ಯರ್ಥಿಯು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ. ನೇಮಕಾತಿ ಸಮಿತಿ ನಡೆಸುವ ಯಾವುದೇ ಪರೀಕ್ಷೆಗೆ ಪ್ರವೇಶ ಪಡೆಯುವುದರಿಂದ ಅಥವಾ ಯಾವುದೇ ಹುದ್ದೆಯ ಆಯ್ಕೆಗೆ ಖಾಯಂ ಆಗಿ ಡಿಬಾರ್ ಮಾಡಲಾಗುವುದು ಎಂದು ಎಚ್ಚರಿಸಲಾಗಿರುತ್ತದೆ.

ಅಧಿಸೂಚನೆಯಲ್ಲಿನ ನಿಬಂಧನೆಗಳನ್ನು ಪರಿಶೀಲಿಸಿ ಮತ್ತು ಆರೋಪಿಗಳು ನೀಡಿರುವ ಸಮಜಾಯಿಷಿಗಳನ್ನು ಪರಿಶೀಲಿಸಿ, ನೇಮಕಾತಿ ಕಛೇರಿಯ ಮುಖ್ಯಸ್ಥರಾದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್‌ (ನೇಮಕಾತಿ), ಬೆಂಗಳೂರು ಈ ಆದೇಶ ನೀಡಿರುತ್ತಾರೆ. 545 ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 03/10/2021 ರಂದು ನಡೆದ ಸ್ವರ್ಧಾತ್ಮಕ ಲಿಖಿತ ಪರೀಕ್ಷೆಗಳನ್ನು 52 ಅಭ್ಯರ್ಥಿಗಳು ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಬರೆದಿರುವ ಹಿನ್ನೆಲೆಯಲ್ಲಿ ಸದರಿಯವರುಗಳ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್.) ದಾಖಲಿಸಿ, ದೋಷಾರೋಪಣಾ ಪಟ್ಟಿಗಳನ್ನು ಸಿಐಡಿ ಘಟಕದ ತನಿಖಾಧಿಕಾರಿಗಳು ಮಾನ್ಯ ನ್ಯಾಯಾಲಯಗಳಿಗೆ ಸಲ್ಲಿಸಿರುತ್ತಾರೆ.

ಆದ್ದರಿಂದ 52 ಅಭ್ಯರ್ಥಿಗಳ ವಿರುದ್ಧ ದಾಖಲಾಗಿರುವ ಅಪರಾಧ ಮೊಕದ್ದಮೆಯ ಹಿನ್ನಲೆಯಲ್ಲಿ ಸದರಿಯವರು ಪೊಲೀಸ್ ಇಲಾಖೆಯು ನಡೆಸುವ ಎಲ್ಲಾ ವೃಂದದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಇತರೆ ಹುದ್ದೆಗಳ ನೇಮಕಾತಿಗಳಲ್ಲಿ ಶಾಶ್ವತವಾಗಿ ಭಾಗವಹಿಸಲು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+