ವಕ್ಫ್ ಬೋರ್ಡ್ ಆಸ್ತಿ ಸಂರಕ್ಷಣೆಗೆ ಅನುದಾನ, ಷರತ್ತುಗಳು
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ಸರ್ಕಾರ ರಾಜ್ಯದ 14 ಜಿಲ್ಲೆಗಳಲ್ಲಿರುವ ವಕ್ಫ್ ಬೋರ್ಡ್‌ನ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಅನುದಾನವನ್ನು ಬಿಡುಗಡೆ ಮಾಡಿದೆ. ಅನುದಾನ ಬಳಕೆಗೆ ಷರತ್ತುಗಳನ್ನು ಸಹ ವಿಧಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಮುಕ್ತಾರ್ ಪಾಷ ಹೆಚ್. ಜಿ. ಸರ್ಕಾರದ ಅಧೀನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಮತ್ತು ವಕ್ಫ್ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.

ಆದೇಶ ರಾಜ್ಯದ 14 ಜಿಲ್ಲೆಗಳ 40 ವಕ್ಫ್ ಸಂಸ್ಥೆಗಳ ಸಂರಕ್ಷಣೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರಿ ಆದೇಶ 23/8/1979, ಸರ್ಕಾರಿ ಆದೇಶ 3/1/2023 ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇವರ ಪತ್ರವನ್ನು ಉಲ್ಲೇಖಿಸಲಾಗಿದೆ.
ಸರ್ಕಾರಿ ಆದೇಶದಲ್ಲಿ ರಾಜ್ಯದಲ್ಲಿನ ವಕ್ಫ್ ಸಂಸ್ಥೆಗಳಿಗೆ Grant-in Aid Code ಅನ್ನು ಆಗಸ್ಟ್ 1979 ಹಾಗೂ ಫೆಬ್ರವರಿ 2020 ರಲ್ಲಿ ಜಾರಿಗೊಳಸಲಾಗಿದೆ. 2017-18ನೇ ಸಾಲಿನಲ್ಲಿ ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಸರ್ಕಾರದ ಆದೇಶ ದಿನಾಂಕ 28/08/2017ರಲ್ಲಿ ರೂ. 234.50 ಲಕ್ಷ ಮತ್ತು ಸರ್ಕಾರದ ಆದೇಶ ದಿನಾಂಕ 16/02/2018ರಲ್ಲಿ ರೂ. 231.00 ಲಕ್ಷಗಳಂತೆ ಒಟ್ಟು ರೂ. 465.50 ಲಕ್ಷಗಳ ಅನುದಾನವನ್ನು ರದ್ದುಗೊಳಿಸಿ ಹಿಂಪಡೆಯಲಾಗಿದೆ.
ರಾಜ್ಯದ ವಕ್ಫ್ ಸಂಸ್ಥೆಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಪ್ರಸ್ತಾವನೆಗಳು ಸ್ವೀಕೃತವಾಗಿದ್ದು, ಸದರಿ ವಕ್ಫ್ ಸಂಸ್ಥೆಗಳಿಗೆ ಸಹಾಯಾನುದಾನ ಬಿಡುಗಡೆಗೊಳಿಸಬಹುದೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇವರು ಶಿಫಾರಸ್ಸು ಮಾಡಿರುತ್ತಾರೆ. ಅದರಂತೆ ಪರಿಶೀಲಿಸಿ ಈ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಆದೇಶ ದಿನಾಂಕ 03/01/2023ರಲ್ಲಿ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಒಟ್ಟು ರೂ. 465.50 ಲಕ್ಷಗಳ ಅನುದಾನವನ್ನು ರದ್ದುಗೊಳಿಸಿ ಹಿಂಪಡೆಯಲಾಗಿರುವ ಹಿನ್ನೆಲೆಯಲ್ಲಿ, ಈ ಅನುದಾನದ ಪೈಕಿ ರಾಜ್ಯದ 14 ಜಿಲ್ಲೆಗಳ 40 ವಕ್ಫ್ ಸಂಸ್ಥೆಗಳ ಸಂರಕ್ಷಣೆಗಾಗಿ ರೂ. 445.00 ಲಕ್ಷಗಳ ಅನುದಾನವನ್ನು ಷರತ್ತುಗಳಿಗೆ ಒಳಪಟ್ಟು ಮಂಜೂರು ಮಾಡಲಾಗಿದೆ.
ಷರತ್ತುಗಳು
* ಈ ವೆಚ್ಚವನ್ನು MWD 21 WGA 2022, ದಿನಾಂಕ 03/01/2023ರಲ್ಲಿ ಹಿಂಪಡೆಯಲಾಗಿರುವ ಅನುದಾನದಿಂದಲೇ ಭರಿಸತಕ್ಕದ್ದು.
* ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು Grant-in-Aid ನಲ್ಲಿರುವ ಸೂಚನೆಗಳನ್ನು ವಕ್ಫ್ ಸಂಸ್ಥೆಗಳಿಗೆ ಹಣ ಬಿಡುಗಡೆಗೊಳಸುವ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
* ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಸ್ಥಳೀಯ AEE ಅಭಿಯಂತರರೊಂದಿಗೆ ಖುದ್ದಾಗಿ ಸಂಸ್ಥೆಗಳ ಸ್ಥಳ ತನಿಖೆ ನಡೆಸಿ, ತದನಂತರ ಅನದಾನವನ್ನು ಬಿಡುಗಡೆ ಮಾಡತಕ್ಕದ್ದು ಹಾಗೂ ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡತಕ್ಕದ್ದು.
* ರೂ. 5 ಲಕ್ಷಕ್ಕಿಂತ ಹೆಚ್ಚು ಅನುದಾನ ಮಂಜೂರು ಮಾಡಲಾಗಿರುವ ವಕ್ಫ್ ಸಂಸ್ಥೆಗಳಿಗೆ ಮೊದಲನೇ ಕಂತಿನ ರೂ. 5 ಲಕ್ಷಗಳನ್ನು ಪ್ರಥಮ ಕಂತಿನಲ್ಲಿ ಬಿಡುಗಡೆ ಮಾಡಿ ಇನ್ನುಳಿದ ಮೊತ್ತವನ್ನು ಎರಡನೇ ಕಂತಿನಲ್ಲಿ ಬಿಡುಗಡೆ ಮಾಡತಕ್ಕದ್ದು. 2ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಮೊದಲು ಕಾಮಗಾರಿಯ ಪ್ರಗತಿಯನ್ನು ಕಡ್ಡಾಯವಾಗಿ ಪರಿಶೀಲಿಸಿ ಪ್ರಗತಿಯಾದಲ್ಲಿ ಹಣ ಬಳಕೆ ಪ್ರಮಾಣ ಪತ್ರ ಪಡೆದ ನಂತರ ಮಾತ್ರ ಅನುದಾನ ಬಿಡುಗಡೆ ಮಾಡತಕ್ಕದ್ದು.
* ರೂ. 5 ಲಕ್ಷಕ್ಕಿಂತ ಕಡಿಮೆ ಅನುದಾನ ಮಂಜೂರಾಗಿರುವ ವಕ್ಫ್ ಸಂಸ್ಥೆಗಳಿಗೆ ಅನುದಾನವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡತಕ್ಕದ್ದು.
* ಸದರಿ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಹಣ ಬಿಡುಗಡೆಗೊಳಿಸಲಾಗಿದೆಯೋ ಆ ಉದ್ದೇಶಕ್ಕಾಗಿ ಬಳಕೆಯಾಗಿರುವ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಸಂಸ್ಥೆಗಳು ಕಡ್ಡಾಯವಾಗಿ ಕಳುಹಿಸತಕ್ಕದ್ದು.












Click it and Unblock the Notifications