ಸಿಹಿ ಸುದ್ದಿ: ಎಸ್‌ಸ್ಸಿ ಎಸ್‌ಸ್ಟಿ ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಬಿಜೆಪಿ
ಬೆಂಗಳೂರು, ಮಾರ್ಚ್ 24: ವಿಪಕ್ಷ ನಾಯಕರಿಂದ ವ್ಯಾಪಕ ಟೀಕೆಗಳು, ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರಾಜ್ಯ ಬಿಜೆಪಿ ಎಚ್ಚೆತ್ತುಕೊಂಡಿದೆ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಅಂತಿಮ ರೂಪ ದೊರೆಯುತ್ತಿದೆ.
ಕರ್ನಾಟಕ ರಾಜ್ಯ ಆಡಿತಾರೂಢ ಬಿಜೆಪಿಯು ಎಸ್‌ಸಿ ಎಸ್‌ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಆ ಬಗ್ಗೆ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಈ ಕುರಿತು ಮಾಹಿತಿ ಹೊರ ಬೀಳುತ್ತಿದ್ದಂತೆ ವಿಪಕ್ಷಗಳು ಕೆಂಡ ಕಾರಿದವು. ಬಿಜೆಪಿಯದ್ದು ಬೋಗಸ್ ಕಾಯ್ದೆ, ಸುಳ್ಳು ಹೇಳಿ ದಲಿತರನ್ನು ಯಾಮಾರಿಸುತ್ತಿದೆ ಎಂದು ವಿಪಕ್ಷಗಳೀಂದ ಬಿಜೆಪಿ ತೀವ್ರ ಮುಖಭಂಗ ಎದುರಿಸಬೇಕಾಯಿತು.

ಇವೆಲ್ಲದ್ದಕ್ಕೂ ಉತ್ತರವೆಂಬಂತೆ ಬಿಜೆಪಿ ಗುರುವಾರ ರಾತ್ರಿ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಳದ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ತಿಳಿಸಿದ್ದಾರೆ. ಈ ಸಂಬಂಧ ಅವರು ಅಧಿಕೃತ ರಾಜ್ಯ ಪತ್ರಿಕೆ ಹೊರಡಿಸಿದ್ದಾರೆ.
ಬಿಜೆಪಿ ಅಧಿಕೃತ ಮಾಹಿತಿಯಲ್ಲಿ ಏನಿದೆ?
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಜಾರಿಗೆ ತಂದಿರುವ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ 2022 ನ್ನು ಸಂವಿಧಾನದ 9 ನೇ ಶೆಡ್ಯೂಲ್ ನಲ್ಲಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಅವರು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ ಎಂದು ಮುಖ್ಯಮತ್ರಿಗಳು ಹೇಳಿದರು.

ಈ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಾಯ್ದೆ 2022 ಅನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಯವರಿಗೆ ಮೀಸಲಾತಿ ಪ್ರಮಾಣ ಶೇಕಡಾ 15 ರಿಂದ ಶೇಕಡಾ 17ಕ್ಕೆ ಏರಿಕೆ ಆಗಲಿದೆ. ಜೊತೆಗೆ ಪರಿಶಿಷ್ಟ ಪಂಗಡದವರಿಗೆ (ST) ಶೇಕಡಾ 3ರಿಂದ ಶೇಕಡಾ 7ಕ್ಕೆ ಹೆಚ್ಚಾಗುತ್ತದೆ.
ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆಯನ್ನು ಸಂವಿಧಾನದ 9ನೆ ಶೆಡ್ಯೂಲ್ ಗೆ ಸೇರಿಸುವ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅವಕಾಶ ವಂಚಿತ ಸಮುದಾಯಗಳ ಕುರಿತು ನಮ್ಮ ಸರ್ಕಾರದ ಬದ್ಧತೆಗೆ ಇದು ನಿದರ್ಶನ ವಾಗಿದೆ ಎಂದು ವಿಪಕ್ಷಗಳ ಆರೋಪ, ಟೀಕೆಗಳಿಗೆ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.
ವಿಪಕ್ಷಗಳಿಗೆ ಬಿಜೆಪಿ ನೀಡಿದ ಖಡಕ್ ಉತ್ತರ
ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಳದ ಬಗ್ಗೆ ನಮಗಿರುವ ಬದ್ಧತೆಯನ್ನು ಪ್ರಶ್ನಿಸುತ್ತಿರುವವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲೇಬೇಕು. ಶೋಷಿತ ವರ್ಗಗಳು 40 ವರ್ಷಗಳಿಂದ ನಿಮ್ಮೆದುರು ಆಸೆ, ನಿರೀಕ್ಷೆ, ಭರವಸೆಗಳಿಂದ ಕೈಯೊಡ್ಡಿ ನಿಂತಿದ್ದವು.
ಬಾಯಿ ಮಾತಿನ ಭರವಸೆ ಕೊಟ್ಟು-ಕೊಟ್ಟು ಓಟು ಒತ್ತಿಸಿಕೊಂಡವರು ನೀವು, ಯಾವ ಭರವಸೆ ಕೊಡದಿದ್ದರೂ ಮೀಸಲಾತಿ ಹೆಚ್ಚಳ ಮಾಡಿ ಅವರ ಬದುಕಿಗೆ ಬೆಳಕಾದವರು ನಾವು (ಬಿಜೆಪಿ). ಹೆಚ್ಚಿಸಲಾಗಿರುವ ಮೀಸಲಾತಿಯ ಲಾಭಗಳನ್ನು ಈಗಾಗಲೇ ಶೋಷಿತ ಸಮುದಾಯಗಳು ಪಡೆಯುತ್ತಿವೆ ಎಂದು ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅವಕಾಶ ವಂಚಿತ ಸಮುದಾಯಗಳ ಕುರಿತು ನಮ್ಮ ಸರ್ಕಾರದ ಬದ್ಧತೆಗೆ ಇದು ನಿದರ್ಶನವಾಗಿದೆ. ಉಳಿದ ಸಾಂವಿಧಾನಿಕ ಪ್ರಕ್ರಿಯೆಗಳು ಜಾರಿಯಲ್ಲಿವೆ. ಜನ ಜಾಣರಿದ್ದಾರೆ. ನಿಮ್ಮ ಆರೋಪಗಳು ಕಂಠ ಶೋಷಣೆಗೆ ಮಾತ್ರ ಎಂದು ಅವರು ಗುಡುಗಿದರು.












Click it and Unblock the Notifications