ಕೋಲಾರದ ಬಳಿ ಹೈಟೆಕ್ ಕೈಗಾರಿಕಾ ಪಾರ್ಕ್: ₹10,000 ಕೋಟಿ ಹೂಡಿಕೆ: ಸರ್ಕಾರ
ಬೆಂಗಳೂರು, ಜುಲೈ 18: ಚಿನ್ನದ ಗಣಿ ಜಿಲ್ಲೆಯಾಗಿರುವ ಕೋಲಾರ ಜಿಲ್ಲೆಯ ವೇಮಗಲ್ ಸಮೀಪದ ಬಾವನಹಳ್ಳಿಯಲ್ಲಿ ಗುರುತಿಸಲಾಗಿರುವ 720 ಎಕರೆ ಪ್ರದೇಶದಲ್ಲಿ ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೊಳಿಸುವ ಪ್ರಸ್ತಾವ ಸದ್ಯ ರಾಜ್ಯ ಸರ್ಕಾರದ ಮುಂದೆ ಸಲ್ಲಿಕೆ ಆಗಿದೆ.
ಹೌದು, ವಿದೇಶಿ ಕಂಪನಿಯಾದ ಜಪಾನಿನ 'ಮರುಬೇನಿ ಕಾರ್ಪೊರೇಷನ್' ಮುಖ್ಯಸ್ಥರ ಉನ್ನತ ಮಟ್ಟದ ನಿಯೋಗವು ಸದರಿ ಪ್ರಸ್ತಾವನೆ ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಮಂಗಳವಾರ ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಕಂಪನಿಯ ಅಹವಾಲು ಸ್ವೀಕರಿಸಿದ ಸಚಿವ ಎಂ.ಬಿ ಪಾಟೀಲ್ ಅವರು, ಮರುಬೇನಿ ಕಾರ್ಪೊರೇಷನ್ ಪ್ರಸ್ತುತಪಡಿಸಿರುವ ಪ್ರಸ್ತಾವನೆ ಆಕರ್ಷಕವಾಗಿದೆ. ಇದನ್ನು ವಿವರವಾಗಿ ಅಧ್ಯಯನ ಮಾಡಿ, ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
8,000 ಕೋಟಿ ರೂ. ಹೂಡಿಕೆ: 40,000 ಉದ್ಯೋಗ ಸೃಷ್ಟಿ
ಕಂಪನಿಯು ತನ್ನ ಪ್ರಾತ್ಯಕ್ಷಿಕೆ ತೋರಿಸಿ, ಉದ್ದೇಶಿತ ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ನೇರವಾಗಿ 2,800 ಕೋಟಿ ರೂ. ಹೂಡಿಕೆ ಮಾಡಲಾಗುವುದು. ನಂತರ ಅಲ್ಲಿನ ಕೈಗಾರಿಕಾ ನಿವೇಶನಗಳನ್ನು ಆಸಕ್ತ ಉದ್ದಿಮೆಗಳಿಗೆ ಹಂಚಲಾಗುವುದು. ಆ ಹಂತದಲ್ಲಿ ನೇರ ವಿದೇಶಿ ಹೂಡಿಕೆ ಮೂಲಕ ಇನ್ನೂ 8,000 ಕೋಟಿ ರೂ. ಇಲ್ಲಿಗೆ ಹರಿದು ಬರಲಿದೆ. ಜತೆಗೆ ಇಲ್ಲಿ 40 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಈ ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿ ಆದರೆ ಕರ್ನಾಟಕದ ಆರ್ಥಿಕತೆಗೆ ವರ್ಷಕ್ಕೆ 2 ಬಿಲಿಯನ್ ಡಾಲರ್ ಸೇರ್ಪಡೆಯಾಗಲಿದೆ. ತಮ್ಮ ದೇಶದ (ಜಪಾನ್) ಆರ್ಥಿಕ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಉದ್ದೇಶಿತ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದ ಕಾರ್ಯಸಾಧ್ಯತಾ ವರದಿಯನ್ನು ಅಂಗೀಕರಿಸಿದೆ ಎಂದು ನಿಯೋಗ ವಿವರಿಸಿತು.
ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಾರುಬೇನಿ ಕಾರ್ಪೊರೇಷನ್ ಈಗಾಗಲೇ ಚೀನಾ, ಫಿಲಿಪ್ಪೀನ್ಸ್, ಥಾಯ್ಲೆಂಡ್‌ಗಳಲ್ಲಿ ಇಂತಹ ಹೈಟೆಕ್ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಿದೆ. ಜೊತೆಗೆ ಇಂಡೋನೇಷ್ಯಾ, ಮ್ಯಾನ್ಮಾರ್, ವಿಯಟ್ನಾಂ ಮುಂತಾದ ದೇಶಗಳಲ್ಲಿ ಇಂತಹ ಕೈಗಾರಿಕಾ ಪ್ರದೇಶಗಳನ್ನು ಕಂಪನಿಯು ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿಸಿತು.
ಪ್ರಸ್ತಾವನೆ ಬಗ್ಗೆ ಚರ್ಚಿಸಿ ಸರ್ಕಾರ ನಿರ್ಧಾರ?
ಕಂಪನಿಯು ಮುಖ್ಯವಾಗಿ ಸಾಮಾಜಿಕ ಮೂಲಸೌಲಭ್ಯ, ಆರೋಗ್ಯ ಮತ್ತು ವೈದ್ಯಕೀಯ, ವೆಲ್‌ನೆಸ್ ತರಹದ ವಲಯಗಳಿಗೆ ಆದ್ಯತೆ ನೀಡುತ್ತದೆ. ಇವುಗಳ ಅಡಿಯಲ್ಲಿ ಡಿಜಿಟಲ್ ಸ್ಟ್ರಾಟೆಜಿ, ಇನ್ನೋವೇಶನ್ ಸ್ಟ್ರಾಟೆಜಿ, ಸ್ಮಾರ್ಟ್ ಸಿಟಿ, ಡಿಕಾರ್ಬನೈಸೇಶನ್, ಫಾರ್ಮಾ ಮುಂತಾದವನ್ನು ಗುರುತಿಸಲಾಗಿದೆ. ಅಲ್ಲದೆ, ಉದ್ದೇಶಿತ ಯೋಜನೆಯ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಮತ್ತು KIADB ಜತೆ ನಿರಂತರವಾಗಿ ಚರ್ಚಿಸಲಾಗುತ್ತಿದೆ ಎಂದು ಅದು ಮನದಟ್ಟು ಮಾಡಿಕೊಟ್ಟಿತು.
ಮಾರುಬೇನಿ ಕಾರ್ಪೊರೇಷನ್ ನಿಯೋಗದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಶಿರೋಜೋನೊ ಕಾಜೌಕಿ, ಮಾರುಬೇನಿ ಇಂಡಿಯಾ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕ ತಕಾಯಿಕಾ ಯೋಶಿದಾ ಹಾಗೂ ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸೋಮವಾರಷ್ಟೇ ಫಾಕ್ಸ್‌ಕಾನ್ ಭೇಟಿ: 8,800 ಕೋಟಿ ಹೂಡಿಕೆ ಚರ್ಚೆ
ಸೋಮವಾರ ಬೆಂಗಳೂರಿನಲ್ಲಿ ಐಫೋನ್ ತಯಾರಿಕಾ ಕಂಪನಿಯಾಗಿರುವ ಫಾಕ್ಸ್‌ಕಾನ್ ಸಂಸ್ಥೆಯ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವರ ಸಮ್ಮುಖದಲ್ಲಿ ಬೇಟಿ ಮಾಡಿತು.
ಈ ಬೇಟಿ ವೇಳೆ ಬೆಂಗಳೂರಿನ ದೇವಹಳ್ಳಿಯಲ್ಲಿ ಆಫಲ್ ಐಪೋನ್ ತಯಾರಿಕಾ ಘಟಕ ಸ್ಥಾಪಿಸಲಾಗುವುದು. ಇದಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಪ್ಲಾಂಟ್ ಸ್ಥಾಪನೆ, ಅದಕ್ಕೆ ಅಗತ್ಯವಾದ ಬಂಡವಾಳ ಕುರಿತು ಸಿದ್ದರಾಮಯ್ಯನವರ ಜೊತೆಗೆ ಚರ್ಚಿಸಿತು. ಪ್ಲಾಂಟ್‌ಗಾಗಿ ಒಟ್ಟು ರೂ 8,800 ಕೋಟಿ ಹೂಡಿಕೆ ಮಾಡಲಿದ್ದೇವೆ. ಇದರಿಂದ ರಾಜ್ಯದಲ್ಲಿ 14 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ.
ಐಫೋನಿನ ಹೊಸಗಿನ ಭಾಗ, ಹೊರ ಕವಚ ಇನ್ನಿತರ ತಾಂತ್ರಿಕ ಬಿಡಿಭಾಗಗಳನ್ನು ಎಫ್ಐಐ ಘಟಕ ತಯಾರಿಸಲಿದೆ. ದೇವನಹಳ್ಳಿ ಬಳಿಯ ಉದ್ದೇಶಿತ ಐಫೋನ್ ತಯಾರಿಕಾ ಘಟಕವು 'ಎಂಡ್ ಅಸೆಂಬ್ಲಿ' ಘಟಕವಾಗಲಿದೆ. ತುಮಕೂರಿನ ಬಿಡಿಭಾಗಗಳ ತಯಾರಿಕಾ ಘಟಕ ಅದಕ್ಕೆ ಪೂರಕವಾಗಿರಲಿದೆ ಎಂದು ಫಾಕ್ಸ್‌ಕಾನ್ ಮಾಹಿತಿ ನೀಡಿತು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ.ಪಾಟೀಲ್ ಅವರು, ಸೆಮಿ ಕಂಡಕ್ಟರ್ ಹಾಗೂ ಇನ್ನಿತರ ಉದ್ಯಮಗಳನ್ನು ಬೇಕಾದರೂ ನೀವು ಮಾಡಿದರೂ ನಾವು ಅದಕ್ಕೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications