ಪ್ರಿಯಾಂಕ್ ಖರ್ಗೆ, ಪ್ರಿಯಾಂಕಾ ಗಾಂಧಿ; ಮಾಜಿ ಸಚಿವರ ಪೋಸ್ಟ್ ವೈರಲ್!
ಬೆಂಗಳೂರು, ಜುಲೈ 17; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ 'ಶ್ಯಾಡೋ ಸಿಎಂ' ಎಂಬ ಪದ ಬಹಳವಾಗಿ ಕೇಳಿ ಬರುತ್ತಿದೆ. ಅದರಲ್ಲೂ ಪ್ರತಿಪಕ್ಷ ಬಿಜೆಪಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಗುರಿಯಾಗಿಸಿಕೊಂಡು ಈ ಟ್ವೀಟ್ ಮಾಡುತ್ತಿದೆ.
ಮಾಜಿ ಸಚಿವ ಬಿಜೆಪಿ ನಾಯಕ ಜೆ. ಸಿ. ಮಾಧುಸ್ವಾಮಿ ಶ್ಯಾಡೋ ಸಿಎಂ ಬಗ್ಗೆ ಸೋಮವಾರ ಹಾಕಿರುವ ಪೋಸ್ಟ್ ಒಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಹರಿದಾಡುತ್ತಿದ್ದು, ಹಲವಾರು ಜನರು ಕಮೆಂಟ್ ಸಹ ಹಾಕಿದ್ದಾರೆ.

ಜೆ. ಸಿ. ಮಾಧುಸ್ವಾಮಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯ ಸಂಪುಟದಲ್ಲಿನ ಅತಿ ಕಿರಿ ವಯಸ್ಸಿನ ಸಚಿವರು.
ಶ್ಯಾಡೋ ಸಿಎಂ ಆರೋಪ; ಜೆ. ಸಿ. ಮಾಧುಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ಯಾಡೋ ಸಿಎಂ ಆರೋಪವನ್ನು ಮಾಡಿದ್ದಾರೆ. #ATMSarkara ಹ್ಯಾಷ್ ಟ್ಯಾಗ್ ಬಳಕೆ ಮಾಡಿರುವ ಅವರು, 'ದ ಶ್ಯಾಡೋ ಸಿಎಂ ಯತೀಂದ್ರ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಪ್ರಿಯಾಂಕ್ ಖರ್ಗೆ ಕೈಯಾಡಿಸುತ್ತಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪೋಸ್ಟ್‌ಗೆ ಅವರು ವಿವರಣೆಯನ್ನು ಸಹ ನೀಡಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನ ಕೊನೆಯಲ್ಲಿ, 'ಕಾಂಗ್ರೆಸ್ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಂತೆ ಕಾಣುತ್ತಿದೆ' ಎಂದು ಬರೆದಿದ್ದಾರೆ. ಈ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮಾಧುಸ್ವಾಮಿ ಪೋಸ್ಟ್‌ನಲ್ಲಿ
* ಹಣಕಾಸು: ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯರವರು, ವಿನಾಕಾರಣ ಉತ್ತರ ನೀಡುವುದು ಪ್ರಿಯಾಂಕ್ ಖರ್ಗೆ..!
* ಬೆಂಗಳೂರು ನಗರಾಭಿವೃದ್ಧಿ: ಸಚಿವ ಡಿ. ಕೆ. ಶಿವಕುಮಾರ್, ಚೆಸ್ ಆಡುತ್ತಿರುವುದು ಪ್ರಿಯಾಂಕ್ ಖರ್ಗೆ..!
* ಗೃಹ ಇಲಾಖೆ: ಸಚಿವ ಖಾತೆ ಡಾ. ಜಿ. ಪರಮೇಶ್ವರ್, ಅಧಿಕಾರ ಚಲಾಯಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
* ಕಾನೂನು ಮತ್ತು ಸಂಸದೀಯ ವ್ಯವಹಾರ: ಸಚಿವ ಎಚ್ ಕೆ ಪಾಟೀಲ್, ಅನಧಿಕೃತ ನಿರ್ವಹಣೆ ಪ್ರಿಯಾಂಕ್ ಖರ್ಗೆ..!
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ನಾಮಕಾವಸ್ಥೆ ದಿನೇಶ್ ಗುಂಡೂರಾವ್, ಮದ್ದು ಚುಚ್ಚುತ್ತಿರುವುದು ಪ್ರಿಯಾಂಕ್ ಖರ್ಗೆ..!
* ಸಮಾಜ ಕಲ್ಯಾಣ: ತೋರಿಕೆಗಾಗಿ ಹೆಚ್. ಸಿ. ಮಹದೇವಪ್ಪ, ಕೈಯಾಡಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
* ಕಂದಾಯ: ಹೇಳಿಕೊಳ್ಳಲು ಕೃಷ್ಣಭೈರೇಗೌಡ, ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ..!
ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಎಲ್ಲಾ ಇಲಾಖೆಯಲ್ಲಿಯೂ ಹಸ್ತಕ್ಷೇಪವನ್ನು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಬಿಜೆಪಿ ಸರಣಿ ಟ್ವೀಟ್; ಈ ಬಾರಿಯ ಚುನಾವಣೆಯಲ್ಲಿ ವರುಣದಿಂದ ಸಿದ್ದರಾಮಯ್ಯ ಅವರು ಕಣಕ್ಕಿಳಿಯಲು ಕ್ಷೇತ್ರ ಬಿಟ್ಟುಕೊಟ್ಟ ಯತೀಂದ್ರ ಸಿದ್ದರಾಮಯ್ಯ ವಿರುದ್ಧ 'ಶ್ಯಾಡೋ ಸಿಎಂ' ಎಂಬ ಗಂಭೀರ ಆರೋಪವನ್ನು ಪ್ರತಿಪಕ್ಷ ಬಿಜೆಪಿ ಮಾಡುತ್ತಿದೆ. ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪಕ್ಷ ದೂರಿದೆ. ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದೆ.
ಒಂದು ಟ್ವೀಟ್‌ನಲ್ಲಿ ಬಿಜೆಪಿ, 'ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ ಸಿದ್ದರಾಮಯ್ಯ ಅವರು, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ. ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ. 2024 ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ' ಎಂದು ದೂರಿದೆ.
ಬಿಜೆಪಿ ಮತ್ತೊಂದು ಪೋಸ್ಟ್‌ನಲ್ಲಿ, 'ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ #ATMSarkara ದ ಶ್ಯಾಡೋ ಸಿಎಂ ಯತೀಂದ್ರರ "ಪ್ರಾಕ್ಸಿ ಕ್ಯಾಬಿನೆಟ್"..!
* ಡಿಸಿಎಂ ಡಿ. ಕೆ. ಶಿವಕುಮಾರ್‌ರವರ, Proxy DCM ಸಹೋದರ ಡಿಕೆ ಸುರೇಶ್!
* ಸಚಿವ ಡಾ. ಹೆಚ್. ಸಿ. ಮಹದೇವಪ್ಪರವರ, Proxy Minister ಪುತ್ರ ಸುನೀಲ್ ಬೋಸ್..!
* ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ವರ, Proxy Minister ಸಹೋದರ ಚೆನ್ನರಾಜ್ ಹಟ್ಟಿಹೊಳಿ..!
* ಸಚಿವ ಕೆ. ಜೆ. ಜಾರ್ಜ್‌ರವರ, Proxy Minister ಪುತ್ರ ರಾಣಾ ಜಾರ್ಜ್..!
* ಸಚಿವ ಡಾ. ಪರಮೇಶ್ವರ್‌ರವರ, Proxy Minister ಪ್ರಿಯಾಂಕ್ ಖರ್ಗೆ..!
* ಸಚಿವ ಈಶ್ವರ್ ಖಂಡ್ರೆರವರ, Proxy Minister ಪುತ್ರ ಸಾಗರ್ ಖಂಡ್ರೆ..!
ತುಘಲಕ್ ಸರ್ಕಾರದ ಪಾಳೇಗಾರಿಕೆಯಲ್ಲಿ ಇನ್ನೂ ಹಲವು ಸಚಿವರು, ಶಾಸಕರ ಸಹೋದರರು, ಸಂಬಂಧಿಕರ ಪ್ರಾಕ್ಸಿಗಳು ಶೀಘ್ರದಲ್ಲೇ ಹೊರ ಬರಲಿವೆ..! ಎಂದು ಆರೋಪಿಸಿದೆ.












Click it and Unblock the Notifications