ಕೋವಿಡ್ ರೋಗಿಗಳಿಗೆ 1.58 ಕೋಟಿ ಹಿಂದಿರುಗಿಸಿ: ಸುಧಾಕರ್
ಬೆಂಗಳೂರು ಆಗಸ್ಟ್ 21: ಕೋವಿಡ್ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ರೋಗಿಗಳಿಂದ ಪಡೆದ ಹಣ ಮರಳಿ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ರೋಗಿಗಳಿಂದ ಹೆಚ್ಚುವರಿ ಹಣ ಪಡೆದ ರಾಜ್ಯದ 577 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಇಲಾಖೆಗೆ ಬಂದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿದ ಇಲಾಖೆ ಆ ನಿಟ್ಟಿನಲ್ಲಿ ನೋಟಿಸ್ ಜಾರಿಗೊಳಿಸಿ ಇಲಾಖೆ ಕ್ರಮ ಕೈಗೊಂಡಿದೆ.
ಈ ಬಗ್ಗೆ ದೂರುಗಳು ಸಲ್ಲಿಕೆಯಾದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಡಾ. ಕೆ. ಸುಧಾಕರ್ ಸೂಚಿಸಿದದ್ದರು. ಅದರಂತೆ ಇಲಾಖೆಯುಕೋವಿಡ್ ರೋಗಿಗಳಿಂದ ಶುಲ್ಕ ಪಡೆಯುವುದರ ಜೊತೆಗೆ, ಸರ್ಕಾರದಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ವಹಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. 577 ಆಸ್ಪತ್ರೆಗಳು 403 ರೋಗಿಗಳ ಕುಟುಂಬಗಳಿಗೆ 1,58,22,359 ರೂ. ಹಣವನ್ನು ಮರಳಿ ನೀಡಬೇಕು ಎಂದು ಈಗಾಗಲೇ ತಿಳಿಸಿದೆ.
ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್, "ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ರೆಫರಲ್ ಆಧಾರದಲ್ಲಿ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೆಯೇ ಕ್ರಮ ವಹಿಸಲಾಗಿತ್ತು. ಕೋವಿಡ್ ರೋಗಿಗಳ ಕುಟುಂಬಕ್ಕೆ ನೆರವಾಗುವ ಸದುದ್ದೇಶದಿಂದ ಸರ್ಕಾರ ಈ ಪ್ರಯೋಜನವನ್ನು ನೀಡುತ್ತಿದೆ" ಎಂದರು.
"ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಭರಿಸಲಾಗುತ್ತದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಶುಲ್ಕ ವಸೂಲಿ ಮಾಡುವುದರ ಜೊತೆಗೆ, ಟ್ರಸ್ಟ್‌ನಿಂದಲೂ ಹಣ ಪಡೆದುಕೊಂಡಿರುವ ಖಂಡನೀಯ, ಸರ್ಕಾರ ಇದನ್ನು ಸಹಿಸುವುದಿಲ್ಲ" ಎಂದರು.

ಜಿಲ್ಲಾ ಮಟ್ಟದ ಸಮಿತಿಗೂ ದೂರು ವರ್ಗಾವಣೆ; "ಸಾರ್ವಜನಿಕರಿಂದ ಈ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಅವುಗಳನ್ನು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಲಾಗಿದೆ. ಅದರಂತೆ ಈವರೆಗೆ 577 ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಾಗೂ ಸರ್ಕಾರಿಂದಲೂ ಹಣ ಪಡೆದಿರುವುದು ಗೊತ್ತಾಗಿದೆ. ಈವರೆಗೆ ಒಟ್ಟು 18.87 ಕೋಟಿ ರೂ. ಹಣವನ್ನು ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ ಪಡೆದಿರುವುದು ತಿಳಿದುಬಂದಿದೆ. ಈ ಪೈಕಿ ಈಗಾಗಲೇ 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಲಾಗುತ್ತಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ಪರಿಶೀಲನೆಗಾಗಿ ದೂರುಗಳನ್ನು ಜಿಲ್ಲಾ ಮಟ್ಟದ ಕುಂದು ಕೊರತೆ ಸಮಿತಿಗೆ ವರ್ಗಾಯಿಸಲಾಗಿದೆ" ಎಂದು ಸುಧಾಕರ್ ವಿವರಿಸಿದರು.
ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ; "ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರದಿಂದಲೇ ಭರಿಸಲಾಗಿದೆ. ಮೊದಲನೇ ಅಲೆಯಲ್ಲಿ, 2020 ರ ಮಾರ್ಚ್‌ನಿಂದ 2021ರ ಮಾರ್ಚ್‌ವರೆಗೆ 391.26 ಕೋಟಿ ರೂ. ಎರಡನೇ ಅಲೆಯಲ್ಲಿ, 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 376.76 ಕೋಟಿ ರೂ. ಹಾಗೂ ಮೂರನೇ ಅಲೆಯ ಸಂದರ್ಭದಲ್ಲಿ 2022ರ ಜನವರಿಯಿಂದ ಮಾರ್ಚ್‌ವರೆಗೆ 11.80 ಕೋಟಿ ರೂ. ಹಣವನ್ನು ಸರ್ಕಾರವೇ ಪಾವತಿಸಿದೆ.
ಹೀಗಿದ್ದರು ಹೆಚ್ಚುವರಿ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ದ ನೋಟಿಸ್ ಮೂಲಕ ಸರ್ಕಾರ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದೆ. ರೋಗಿಗಳಿಗೆ ಹಣ ಹಿಂದಿರುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ" ಎಂದರು.












Click it and Unblock the Notifications