ಇಸ್ರೇಲ್ ಪ್ರಧಾನಿ ಜೊತೆ ಮೋದಿ ಕರ್ನಾಟಕ ಭೇಟಿ ರದ್ದು
ಬೆಂಗಳೂರು, ಮಾರ್ಚ್ 29; ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಕರ್ನಾಟಕ ಭೇಟಿ ರದ್ದಾಗಿದೆ. ಏಪ್ರಿಲ್ 5ರಂದು ಉಭಯ ನಾಯಕರು ರಾಜ್ಯಕ್ಕೆ ಆಗಮಿಸಬೇಕಿತ್ತು.
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೋವಿಡ್ ಸೋಂಕಿ ತಗುಲಿರುವ ಕಾರಣ ಅವರ ಭಾರತ ಭೇಟಿ ರದ್ದಾಗಿದೆ. ಆದ್ದರಿಂದ ನಫ್ತಾಲಿ ಬೆನೆಟ್ ಜೊತೆಗಿನ ಮೋದಿ ಕರ್ನಾಟಕ ಪ್ರವಾಸವೂ ರದ್ದುಗೊಂಡಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದೆ. ಏಪ್ರಿಲ್ 5ರಂದು ನಫ್ತಾಲಿ ಬೆನೆಟ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಬೇಕಿತ್ತು.

ನರೇಂದ್ರ ಮೋದಿ ಬೆಂಗಳೂರಿನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಬೇಕಿತ್ತು. ಬೆಂಗಳೂರು ನಗರದ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ ಮಾಡಬೇಕಿತ್ತು.
ಹಿಂದೆಯೂ ರದ್ದಾಗಿತ್ತು; ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನಾ ಕಾರ್ಯಕ್ರಮ 2021ರ ಡಿಸೆಂಬರ್ 6ರಂದು ಮೊದಲು ನಿಗದಿಯಾಗಿತ್ತು. ಆಗಲೂ ಉದ್ಘಾಟನೆಗೆ ನರೇಂದ್ರ ಮೋದಿ ಆಗಮಿಸಬೇಕಿತ್ತು. ಆದರೆ ಆ ಕಾರ್ಯಕ್ರಮ ರದ್ದಾಗಿತ್ತು.
ಬೆಂಗಳೂರು ಸಬ್ ಅರ್ಬನ್ ರೈಲು; ಬೆಂಗಳೂರು ನಗರದ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಬೇಕಿತ್ತು.
ಸಬ್ ಅರ್ಬನ್ ರೈಲು ಯೋಜನೆಯನ್ನು ನಾಲ್ಕು ವಿಭಾಗವಾಗಿ ವಿಂಗಡನೆ ಮಾಡಲಾಗಿದೆ. 2ನೇ ಕಾರಿಡಾರ್ ಯೋಜನೆಯ ಟೆಂಡರ್ ಕರೆಯಲಾಗಿದೆ. ಇದದ ಕಾಮಗಾರಿಯನ್ನು ಮೊದಲು ಆರಂಭಿಸಲಾಗುತ್ತದೆ.
ಬೆಂಗಳೂರು ಉಪ ನಗರ ರೈಲು ಯೋಜನೆ ಕಾರಿಡಾರ್ -2 ಚಿಕ್ಕಬಣಾವರ-ಬೈಯಪ್ಪನಹಳ್ಳಿ ಮಾರ್ಗದಲ್ಲಿ (25.01 ಕಿ. ಮೀ) ಚಿಕ್ಕಬಣಾವರ, ಶೆಟ್ಟಿಹಳ್ಳಿ, ಜಾಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ನಾಗವಾರ, ಬಾಣಸವಾಡಿ, ಬೈಯಪ್ಪನಹಳ್ಳಿ ನಿಲ್ದಾಣಗಳಿವೆ.
ಭಾರತ ಭೇಟಿ ರದ್ದು; ಸೋಮವಾರ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೋವಿಡ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಏಪ್ರಿಲ್ 3ರ ಭಾರತ ಭೇಟಿಯನ್ನು ಅವರು ರದ್ದುಗೊಳಿಸಿದ್ದಾರೆ. ಕಳೆದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಅವರು ಭಾರತ ಪ್ರವಾಸ ಕೈಗೊಂಡಿದ್ದರು.
ಅಮಿತ್ ಶಾ, ರಾಹುಲ್ ಗಾಂಧಿ ಪ್ರವಾಸ; ಕರ್ನಾಟಕಕ್ಕೆ ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ. ಮಾರ್ಚ್ 31ರಂದು ರಾಹುಲ್ ಗಾಂಧಿ ಆಗಮಿಸಲಿದ್ದು, ಏಪ್ರಿಲ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
ಏಪ್ರಿಲ್ 1ರಂದು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಏಪ್ರಿಲ್ 1ರಂದು ಆಗಮಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿದ್ದು ಮಾರ್ಚ್ 31ರಂದು ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.
ರಾಹುಲ್ ಗಾಂಧಿ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ಸಹ ನಡೆಸಲಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಭೇಟಿ ಮಹತ್ವ ಪಡೆದಿದೆ.
ನಳಿನ್ ಕುಮಾರ್ ಕಟೀಲ್ ಸಭೆ; ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ನಾಯಕರ ಸಭೆ ನಡೆಸಿದರು. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications