86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪೂರ್ವ ಸಿದ್ಧತೆಗಳಿಗೆ ಚಾಲನೆ: ಜೋಶಿ
ಬೆಂಗಳೂರು ಅಕ್ಟೋಬರ್ 06: ಹಾವೇರಿಯಲ್ಲಿ ನಡೆಯಲಿರುವ 86ನೇ 'ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ' ವಿಚಾರವಾಗಿ ಉಂಟಾಗಿದ್ದ ಸಣ್ಣಪುಟ್ಟ ಗೊಂದಲಗಳು ಅಂತ್ಯಗೊಂಡಿವೆ. ಕನ್ನಡ ಜಾತ್ರೆಯ ಕಾರ್ಯಕಲಾಪಗಳಿಗೆ ಸಂಪೂರ್ಣ ಚಾಲನೆ ದೊರೆತಿದ್ದು, ಸಿದ್ಧತೆಗಳು ಆರಂಭಗೊಳ್ಳಲಿವೆ ಎಂದು ಸಿಕ್ಕಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಸಮ್ಮೇಳನ ಕುರಿತು ಗುರುವಾರ ಹಾವೇರಿ ಜಿಲ್ಲೆಯ ಉಸ್ತವಾರಿ ಸಚಿವ ಶಿವರಾಮ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಜತೆ ಸೌಹಾರ್ಧಯುತ ಮಾತುಕತೆ ನಡೆದಿದೆ. ಈ ಬಳಿಕ ಪ್ರಕಟಣೆ ಹೊರಡಿಸಿರುವ ಮಹೇಶ್ ಜೋಶಿ, ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಐತಿಹಾಸಿಕವಾಗಿ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಯಾವುದೇ ಅಡ್ಡಿ ಆತಂಕಗಳು ಉಂಟಾಗುವುದಿಲ್ಲ ಎಂದು ಹೀಗೆಂದು ರಾಜ್ಯ ಸರ್ಕಾರದ ಪರವಾಗಿ ಸಚಿವರು ತಿಳಿಸಿದ್ದಾರೆ ಎಂದು ಹೇಳಿದರು.
ಸರ್ಕಾರ ಕನ್ನಡ ಕೈಂಕರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಸದಾ ನಿಂತುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತು ಕೆಲವು ದಿನಗಳಿಂದ ಉಂಟಾಗಿದ್ದ ಅನಿಶ್ಚಿತೆಗೆ ಈಗ ಸಂಪೂರ್ಣ ತೆರೆ ಬಿದ್ದಿದೆ. ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇದೆ ಎಂದಾಗಲೂ ಈ ಬಗ್ಗೆ ಸಿದ್ಧತೆಗಳಿಗೆ ಚಾಲನೆ ದೊರೆತಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು.

ಅ.12ರಂದು ಪೂರ್ವಭಾವಿ ಸಭೆ
ಇದೇ ತಿಂಗಳ 12ರಂದು ಬುಧವಾರ ಸಂಜೆ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಯಲ್ಲಿ ಸರ್ಕಾರ ಪರವಾಗಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್, ರಾಜ್ಯ ಪದಾಧಿಕಾರಿಗಳು, ಹಾವೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ಐತಿಹಾಸಿಕವಾಗಿ ನಡೆಯಬೇಕು. ಈ ಉದ್ದೇಶದೊಂದಿಗೆ ಅ.17 ರಂದು ಹಾವೇರಿಯಲ್ಲಿ ಜಿಲ್ಲಾಡಳಿತದ ಜತೆಗೆ ಉಭಯ ಸಚಿವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಹಾವೇರಿ ಜಿಲ್ಲೆಯ ಪದಾಧಿಕಾರಿಗಳು, ಸಾಹಿತಿಗಳು, ಸ್ಥಳೀಯ ಮುಖಂಡರ ಜತೆ ಸಭೆ ನಡೆಯಲಿದೆ. ಸ್ಥಳ ಪರಿಶೀಲನೆ ನಡೆಸಲಾಗುವುದು. ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಬೆಂಬಲವಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಜೋಶಿ ತಿಳಿಸಿದರು.

ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ 2022
ಕನ್ನಡ ನಾಡು ನುಡಿಯ ಬಗ್ಗೆ ಗೌರವ ಹೊಂದಿರುವ ಮುಖ್ಯಮಂತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಒತ್ತಾಸೆಯಾಗಿದ್ದ 'ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ- 2022ಅನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದ್ದಾರೆ. ಈ ಮೂಲಕ ಶಿಕ್ಷಣ, ಉದ್ಯೋಗ, ನ್ಯಾಯಾಂಗ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸರ್ಕಾರ ಸನ್ನದ್ಧವಾಗಿದೆ. ಇದು ಸ್ವಾಗತಾರ್ಹ ಎಂದು ಮಹೇಶ ಜೋಶಿ ಹೇಳಿದ್ದಾರೆ.












Click it and Unblock the Notifications