Karnataka Rains: ಮೇ ತಿಂಗಳಲ್ಲಿ ರಾಜ್ಯದಲ್ಲಿ ಸುರಿದಿದ್ದು ದಾಖಲೆ ಮಳೆ, ಕರಾವಳಿಯಲ್ಲೂ ಹೊಸ ರೆಕಾರ್ಡ್
ಬೆಂಗಳೂರು, ಜೂನ್ 02: ಕರ್ನಾಟಕದಾದ್ಯಂತ ಈ ಬಾರಿ ಸಂಪೂರ್ಣ ಬೇಸಿಗೆ ಅನುಭವವೇ ಆಗಲಿಲ್ಲ. ಬೇಸಿಗೆಯಲ್ಲೂ ಪೂರ್ವ ಮುಂಗಾರು ಅಬ್ಬರ ನೋಡುವಂತಾಗಿದೆ ಎಂದವರೇ ಹೆಚ್ಚು. ಅದು ನಿಜ ಕೂಡ. ಫೆಬ್ರವರಿ, ಮಾರ್ಚ್ ನಂತರ ಪೂರ್ವ ಮುಂಗಾರು ಮಳೆ ಹೆಚ್ಚು ಸಕ್ರಿಯವಾಗಿತ್ತು. ಮೇ ತಿಂಗಳಲ್ಲಿ ಸುರಿದ ಮಳೆ ದಶಕಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ಹಳೆಯ ವಾಡಿಕೆಗಿಂತ ಗರಿಷ್ಠ ಮಳೆ ದಾಖಲಾತಿಯಲ್ಲಿ ಹೊಸ ದಾಖಲೆ ಬರೆದಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲೂ ಶೇ. 142 ರಷ್ಟು ಅಧಿಕ ಮಳೆ ಆಗಿದೆ.
ಪ್ರತಿ ವರ್ಷ ಮೇ ತಿಂಗಳಲ್ಲಿ ಅಧಿಕ ಬಿಸಿಲು ಕಂಡು ಬರುತ್ತಿದೆ. ಮಳೆಗಾಲ ಆರಂಭವಾದರೆ ಸಾಕು ಎಂಬಂತಹ ಸ್ಥಿತಿ ಇರುತ್ತಿತ್ತು. ಆದರೆ 2025ರ ಮೇ ತಿಂಗಳು ಸಾಕಷ್ಟು ಮಳೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮೇ ನಲ್ಲಿ ವಾಡಿಕೆ 74 ಮಿಲಿ ಮೀಟರ್ ಆಗಬೇಕು. ಈ ವರ್ಷ 245 ಮಿಲಿ ಮೀಟರ್ ಮಳೆ ಆಗಿದೆ. 2024ರಲ್ಲಿ 185 ಮಿಲಿ ಮೀಟರ್ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಈ ಸದರಿ ವರ್ಷ ಬಿಟ್ಟರೆ, ಸುಮಾರು ಎಂಟು ದಶಕದ ಹಿಂದೆ ಇಂತಹ ಮಳೆ ಆಗಿತ್ತು..

ಕರಾವಳಿಯಲ್ಲಿ ಮಳೆಯ ಹೊಸ ರೆಕಾರ್ಡ್
ಕರ್ನಾಟಕ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿಯ ಭಾಗದಲ್ಲಿ ಈ ವರ್ಷ ಮೇ ನಲ್ಲಿ ವಾಡಿಕೆ 118 ಮಿಲಿ ಮೀಟರ್ ವಾಡಿಕೆ ಮಳೆ ಆಗಬೇಕು. ಆದರೆ ವಾಡಿಕೆಗಿಂತ 763 ಮಿಲಿ ಮೀಟರ್ ಮಳೆ ಆಗಿದೆ. ಇಂತಹ ಅಧಿಕ ಮಳೆ ಒಂದು ಶತಮಾನದ ಹಿಂದೆ ಮೇ ನಲ್ಲಿ ಆಗಿದ್ದು, ಬಿಟ್ಟರೆ ನಂತರ 2025ರಲ್ಲಿಯೇ ಆಗಿದೆ.
ಇನ್ನೂ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ 48 ಮಿಲಿ ಮೀಟರ್ ಮಳೆಗಿಂತ 170 ಮಿಲಿ ಮೀಟರ್‌ಗೂ ಅಧಿಕ ಮಳೆ ದಾಖಲಾಗಿದೆ. ಈ ಮೂಲಕ ಒಣಹವೆ ಕಾಣುತ್ತಿದ್ದ ಗದಗ, ಬೆಳಗಾವಿ, ಹಾವೇರಿ, ವಿಜಯಪುರ, ಧಾರವಾಡ, ಕೊಪ್ಪಳ, ಬೀದರ್, ಕಲಬುರಗಿ ಸೇರಿದಂತೆ ಇತರ ಒಳನಾಡು ಜಿಲ್ಲೆಗಳಲ್ಲೂ ಸಹ ಮೇ ನಲ್ಲಿ ಅನಿರೀಕ್ಷಿತ ವ್ಯಾಪಕ ಮಳೆ ಆದಂತಾಗಿದೆ.
ಮೇ ತಿಂಗಳಲ್ಲಿ ಸುರಿದ ಪೂರ್ವ ಮುಂಗಾರು ಮಳೆಯು ಮುಂಗಾರು ಹಂಗಾಮು ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ. ಈಗಾಗಲೇ ಲಕ್ಷಾಂತರ ಹೆಕ್ಟರ್ ಭೂಮಿಯಲ್ಲಿ ಮೆಕ್ಕೆಜೋಳ, ಹತ್ತಿ, ಬೆಂಡಿ, ಕಡಲೆ, ಸೋಯಾಬಿನ್ ಸೇರಿದಂತೆ ಖಾರಿಫ್ ಬೆಳೆಗಳನ್ನು ಬಿತ್ತಲಾಗಿದೆ. ಜೂನ್ ಮಧ್ಯ ಭಾಗದ ಹೊತ್ತಿಗೆ ರಾಜ್ಯದಲ್ಲಿ ನಿರೀಕ್ಷೆ ಬಿತ್ತನೆ ಆಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಬೆಂಗಳೂರಿಗೆ ಮೇ ತಿಂಗಳಲ್ಲಿ ದಾಖಲೆಯ ಮಳೆ
ಇನ್ನೂ ಬೆಂಗಳೂರು ನಗರ ವ್ಯಾಪ್ತಿಯ ಮಳೆ ನೋಡುವುದಾದರೆ ಮೇ ನಲ್ಲಿ ವಾಡಿಕೆ 97.5 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಈ ಬಾರಿ ವಾಡಿಕೆಗಿಂತ ಶೇಕಡಾ 142ರಷ್ಟು ಅಂದರೆ 236 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಪೂರ್ವ ಮುಂಗಾರು ಮಳೆ ವರದಿಯ ಅಂಕಿ ಸಂಖ್ಯೆಗಳು ಮಾಹಿತಿ ನೀಡಿವೆ. ಮೇ ತಿಂಗಳ ಕೊನೆ ಕೊನೆಗೆ ಬೆಂಗಳೂರಲ್ಲಿ ಸುರಿದ ಮಳಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಸದ್ಯ ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲಿ ಅಬ್ಬರಿಸಿದ್ದು, ಈಗ ಕೊಂಚ ವಿರಾಮ ನೀಡಿದಂತಿದೆ.












Click it and Unblock the Notifications