Prajwal Revanna: ಚುನಾವಣಾ ಬಿಸಿಯನ್ನು ತಣ್ಣಗಾಗಿಸಿದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ
ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿವೆ. ಈಗಾಗಲೇ 14 ಲೋಕಸಭಾ ಕ್ಷೇತ್ರದಲ್ಲಿ ಮತದಾನದ ನಡೆದಿದೆ. ಈಗ ಎಲ್ಲರ ಚಿತ್ತ ಎರಡನೇ ಹಂತದ ಮತದಾನದತ್ತ ನೆಟ್ಟಿದೆ. ಆದರೆ ಈಗ ರಾಜಕೀಯ ವಲಯದಲ್ಲಿ ಚರ್ಚೆ ಯಾಗಬೇಕಿದ್ದ ಹಲವು ಅಂಶಗಳನ್ನು ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ತಣ್ಣಗಾಗಿಸಿದೆ.
ಏಪ್ರಿಲ್ 26ಕ್ಕೂ ಮೊದಲೇ ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹರಿದಾಡುತ್ತಿದ್ದವು. ಆದರೆ ಚುನಾವಣೆಗಳು ಮುಗಿದ ಬಳಿಕ ಈ ಸುದ್ದಿಗೆ ಹೆಚ್ಚು ಪ್ರಚಾರ ಸಿಕ್ಕಿತು. ಮುಂದೇನು ಆಗುತ್ತದೇ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಸುಸೂತ್ರವಾಗಿ 14 ಲೋಕಸಭಾ ಕ್ಷೇತ್ರಗಳು ಮುಗಿದಿದ್ದು, ಇನ್ನು ಉಳಿದ ಚುನಾವಣೆಗಳ ಮೇಲೆ ಈ ಸುದ್ದಿ ತನ್ನ ಪ್ರಭಾವ ಬೀರಿದೆ.

ತಣ್ಣಗಾದ ಕೆಸರೆರಚಾಟ
ಮತದಾರರನ್ನು ತನ್ನ ಕೆಲಸಗಳ ಮೂಲಕ ಅಟ್ರ್ಯಾಕ್ಟ್ ಮಾಡುಲು ಉಭಯ ರಾಷ್ಟ್ರೀಯ ಪಕ್ಷಗಳು ಸಜ್ಜಾಗಿದ್ದವು. ಇದಕ್ಕೆ ಕರ್ನಾಟಕದಲ್ಲಿ ವೇದಿಕೆ ಸಹ ಉತ್ತಮವಾಗಿ ನಿರ್ಮಿಸಲಾಗಿತ್ತು. ಕಳೆದ ಚುನಾವಣೆಯಲ್ಲಿ ಅನುಸರಿಸಿದ ಜಾಹೀರಾತು ಅಭಿಯಾನವನ್ನು ಕಾಂಗ್ರೆಸ್ ಮತ್ತೊಮ್ಮೆ ಶುರುಮಾಡಿತು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಚೊಂಬನ್ನೆ ನೀಡಿದೆ ಎಂದು ಬಿಂಬಿಸುವ ರೀತಿಯಲ್ಲಿ ಪ್ರಕಟಿಸಲಾದ ಜಾಹೀರಾತು, ವಿರೋಧಿಗಳನ್ನು ಕೆರಳಿಸಿತು. ಇದಕ್ಕೆ ಪ್ರತಿಯಾಗಿ ಚಿಕ್ಕಬಳ್ಳಾಪುರದಲ್ಲಿ ಎಚ್‌ಡಿ ದೇವೇಗೌಡ, 2014ರಲ್ಲಿ ಕಾಂಗ್ರೆಸ್ ಮೋದಿಗೆ ಖಾಲಿ ಚೊಂಬನ್ನು ನೀಡಿದ್ದರು. ಆದರೆ ಮೋದಿ ಇದನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.

ಹೀಗೇ ದಿನವೂ ರಾಜಕೀಯ ದಾಳಗಳನ್ನು ಎರಡೂ ಪಕ್ಷಗಳು ತಮ್ಮ ತಮ್ಮ ಸಿದ್ಧಾಂತದ ಅಡಿಯಲ್ಲಿ ಬಿಂಬಿಸುತ್ತಾ ಸಾಗಿದವು. ಆದರೆ, ವಿಡಿಯೋ ಬರುತ್ತಿದ್ದಂತೆ ಪ್ರಚಾರದ ಒರಸೆ ಚೇಂಜ್ ಆಗಿದೆ. ವಿರೋಧಿಗಳಿಗೆ ಪೆನ್ ಡ್ರೈವ್ ಪ್ರಕರಣ ಭರ್ಜರಿ ಆಹಾರವಾಗಿದೆ.
ಪ್ರಜ್ವಲ್ ಹೆಸರಿನಿಂದಲೇ ರಾಜಕಾರಣ
ಅಂದಹಾಗೆ ಮಾಧ್ಯಮದವರ ಮುಂದೆ ರಾಜಕೀಯ ಮುಖಂಡರು ಬಂದರೆ ಸಾಮಾನ್ಯವಾಗಿ, ನಿಮ್ಮ ರಣ ತಂತ್ರ ಹೇಗೆ ಇರುತ್ತದೆ. ಪ್ರಚಾರದ ಬಗ್ಗೆ ಪ್ರಶ್ನೆ, ವಿರೋಧಿಗಳು ನೀಡಿದ್ದ ಹೇಳಿಕೆಗೆ ರಿಯಾಕ್ಷನ್ ಪಡೆಯುವುದು ಸಾಮಾನ್ಯ. ಆದರೆ ಈ ಬಾರಿಯ ಚುನಾವಣೆಯಲ್ಲಿ ಇದರ ಸ್ವರೂಪವೇ ಬದಲಾಗಿದೆ. ಈಗೇನಿದ್ದರೂ ಪ್ರಜ್ವಲ್ ರೇವಣ್ಣ ಅವರ ಪ್ರಶ್ನೆಗಳೇ ರಾಜಕೀಯ ನಾಯಕರ ಮುಂದೆ ಬೌನ್ಸರ್ ರೀತಿ ಬರುತ್ತಿವೆ.

ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಎಂಬುದೇ ನಿಧಾನವಾಗಿದ್ದು, ಈ ಬಗ್ಗೆ ಸಹ ರಾಜಕಾರಣಿಗಳಿಗೆ ಯಾವುದೇ ಇಂಟ್ರಸ್ಟ್ ಇಲ್ಲವೇ ಇಲ್ಲ. ಬದಲಿಗೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನೇ ರಾಜಕೀಯ ದಾಳವನ್ನಾಗಿ ಬಳಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಎರಡನೇ ಹಂತದ ಮತದಾನ (ಮೇ 7) ನಡೆಯಬೇಕಿದೆ. ಆದರೆ ಈ ಸಮಯವನ್ನು ರಾಜಕೀಯ ಪಕ್ಷಗಳು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ ಎಂದು ಮತದಾರ ಹಿಡಿಶಾಪ ಹಾಕುತ್ತಿದ್ದಾನೆ.
ಪ್ರಜ್ಷಲ್ ರೇವಣ್ಣ ಪ್ರಕರಣ ನಿಜಕ್ಕೂ ದೊಡ್ಡ ಪ್ರಕರಣವೇ. ಆದರೆ ಒಂದು ಕ್ಷೇತ್ರದ ಅಭಿವೃದ್ಧಿ ಹಾಗೂ ಅದರ ಬೆಳವಣಿಗೆಯನ್ನು ಬದಿಗೊತ್ತಿ ಇದನ್ನೇ ಹೈಲೇಟ್ ಮಾಡುತ್ತಿರುವುದು ಎಷ್ಟು ಸರಿ ಎಂದು ಮತದಾರ ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಪ್ರಚಾರ ಮಾಡಲು ಬಂದರೆ ಸಾಕು ಎಲ್ಲ ಮಾಧ್ಯಮಗಳು ಅವರ ಕಾರ್ಯಕ್ರಮವನ್ನೇ ನೇರ ಪ್ರಸಾರ ಮಾಡುತ್ತಿದ್ದರು. ಆದರೆ ಮೊನ್ನೆ ಮೋದಿ ಬಂದು ಪ್ರಚಾರ ಭಾಷಣ ಮಾಡಿದರೂ, ಅದನ್ನು ಕವರ್ ಮಾಡದ ಮಾಧ್ಯಮಗಳು ಪ್ರಜ್ವಲ್ ಪ್ರಕರಣದ ಹಿಂದೆ ಬಿದ್ದಿದ್ದವು. ಇದರಿಂದಲೇ ಪೆನ್ ಡ್ರೈವ್ ಪ್ರಕರಣ ಎಷ್ಟು ದೊಡ್ಡ ಸುದ್ದಿ ಮಾಡುತ್ತಿದೆ ಎಂದು ಅಂದಾಜಿಸಬಹುದಾಗಿದೆ.












Click it and Unblock the Notifications