ಪ್ರಜ್ವಲ್ ರೇವಣ್ಣ ಜೂನ್ 10ರ ತನಕ ಎಸ್ಐಟಿ ವಶಕ್ಕೆ
ಬೆಂಗಳೂರು, ಜೂನ್ 06; ಹಾಸನದ ಮಾಜಿ ಸಂಸದ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ ವಿಸ್ತರಣೆ ಮಾಡಲಾಗಿದೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಎಸ್‌ಐಟಿ ಬಂಧಿಸಿದೆ.
ಬೆಂಗಳೂರಿನ ವಿಶೇಷ ಕೋರ್ಟ್‌ಗೆ ಗುರುವಾರ ಎಸ್‌ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಹಾಜರುಪಡಿಸಿದ್ದರು. ಎಸ್‌ಐಟಿ ಪರವಾಗಿ ವಾದ ಮಂಡಿಸಿದ ಎಸ್‌ಪಿಪಿ ಅಶೋಕ್ ನಾಯಕ್ ಪ್ರಜ್ವಲ್ ರೇವಣ್ಣ ಕಸ್ಟಡಿ ಅವಧಿ ವಿಸ್ತರಣೆಗೆ ಮನವಿ ಮಾಡಿದರು.

ಎಸ್‌ಐಟಿ ವಾದವನ್ನು ಪುರಸ್ಕರಿಸಿದ ಕೋರ್ಟ್ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದ ಅವಧಿಯನ್ನು ಜೂನ್ 10ರ ತನಕ ವಿಸ್ತರಣೆ ಮಾಡಿತು.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮೂರು ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರ ತಂಡದ ವರದಿಗಾಗಿ ಕಾಯುತ್ತಿದ್ದಾರೆ.
ಸಂಸ್ಥೆಯ 4 ತಜ್ಞ ವೈದ್ಯರನ್ನು ಒಳಗೊಂಡ ತಂಡ ಬುಧವಾರ 6 ಗಂಟೆಗಳ ಕಾಲ ಪ್ರಜ್ವಲ್ ರೇವಣ್ಣ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಗಳಲ್ಲಿ ಪುರುಷತ್ವ ಪರೀಕ್ಷೆಯೂ ಸೇರಿದೆ. ಈ ಪರೀಕ್ಷೆಗಳ ವರದಿಗಳು ಬರುವ ತನಕ ಎಸ್‌ಐಟಿ ಕಸ್ಟಡಿ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು.
ಏಪ್ರಿಲ್ 26ರಂದು ಲೋಕಸಭೆ ಚುನಾವಣೆ 2024ರ ಮತದಾನ ಮಾಡಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವರು ಮೇ 31ರಂದು ರಾಜ್ಯಕ್ಕೆ ವಾಪಸ್ ಆಗಿದ್ದರು. ಆಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದರು.
ಬಳಿಕ ಅವರನ್ನು ಜೂನ್ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಪ್ರಜ್ವಲ್ ರೇವಣ್ಣರನ್ನು ಜೂನ್ 6ರ ತನಕ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಇಂದು ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ಕೋರ್ಟಗೆ ಹಾಜರುಪಡಿಸಿದ್ದರು.
ಪ್ರಜ್ವಲ್ ರೇವಣ್ಣ 2024ರ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಜೂನ್ 4ರಂದು ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ 6,72,988 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಜ್ವಲ್ ರೇವಣ್ಣ 6,30,339 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಹಾಸನದ ಸರ್ಕಾರಿ ಅತಿಥಿ ಗೃಹ, ಹೊಳೆನರಸೀಪುರದ ನಿವಾಸದಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿ, ಅದರ ವಿಡಿಯೋ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಈ ಆರೋಪದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ ಪ್ರಜ್ವಲ್ ರೇವಣ್ಣರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವುದು ಬಾಕಿ ಇದೆ.
ಎಸ್‌ಐಟಿ ಪೊಲೀಸರು ಸ್ಥಳ ಮಹಜರು ನಡೆಸಲು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿ ಎಂದು ಕಾಯುತ್ತಿದ್ದರು. ಈಗ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಸೋಲು ಕಂಡಿದ್ದಾರೆ. ಆದ್ದರಿಂದ ಅವರನ್ನು ಹಾಸನಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವುದು ಸುಲಭವಾಗಲಿದೆ.
ಕೆ. ಆರ್. ನಗರ ಠಾಣೆಯಲ್ಲಿ ದಾಖಲಾದ ಮಹಿಳೆ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಆರೋಪಿ. ಈ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ವಿಚಾರಣೆ ನಡೆಸಬೇಕಿದೆ. ಆದರೆ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ, ಅಲ್ಲದೇ ನಿರೀಕ್ಷಣಾ ಜಾಮೀನು ಪಡೆಯಲು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications