Prajwal Revanna case: 'ನಾನು ನಂಬರ್ ಬ್ಲಾಕ್ ಮಾಡಿದರೆ ಇನ್ನೊಂದು ನಂಬರ್‌ನಿಂದ ಕರೆ ಮಾಡುತ್ತಿದ್ದ ಪ್ರಜ್ವಲ್ ರೇವಣ್ಣ'
ಹಾಸನ ಜೂನ್ 28: ಅತ್ಯಾಚಾರ ಆರೋಪದ ಮೇಲೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರೆದಿದ್ದು ಬಗೆದಷ್ಟು ವಿಚಾರಗಳು ಬಯಲಾಗುತ್ತಿವೆ.
ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲಾ... ಎರಡಲ್ಲಾ... ಒರೋಬ್ಬರಿ 15 ಸಿಮ್ ಕಾರ್ಡ್ ಇತ್ತೆಂದು ಹೇಳಲಾಗಿದೆ. ಒಂದು ನಂಬರ್ ಬ್ಲಾಕ್ ಮಾಡಿದರೆ ಮತ್ತೊಂದು ನಂಬರ್‌ನಿಂದ ಪ್ರಜ್ವಲ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆಯೊಬ್ಬರು ದೂರಿನಲ್ಲಿ ವಿವರಿಸಿದ್ದಾರೆ.

ಒಂದು ನಂಬರ್ ಬ್ಲಾಕ್ ಮಾಡಿದರೆ ಇನ್ನೊಂದು ನಂಬರ್‌ನಿಂದ ಕರೆ ಮಾಡಿ ಬೆತ್ತಲಾಗುವಂತೆ ಪ್ರಜ್ವಲ್ ರೇವಣ್ಣ ಅವರು ಹಿಂಸೆ ನೀಡುತ್ತಿದ್ದರಂತೆ. ಮನೆ ಕೆಲಸಕ್ಕೆ ಬರುವ ಹೆಣ್ಣು ಮಕ್ಕಳೇ ಆತನ ಟಾರ್ಗೇಟ್ ಆಗಿದ್ದರು. ಮಕ್ಕಳಿಗೆ ಕೆಲಸ ಕೊಡಿಸಿ ಎಂದು ಕೇಳಿಕೊಂಡು ಬರುತ್ತಿದ್ದವರನ್ನು ಗುರಿಯಾಗಿಸಿಕೊಳ್ಳುತ್ತಿದ್ದರಂತೆ ಪ್ರಜ್ವಲ್ ರೇವಣ್ಣ. ವಿನಾಕಾರಣ ಅವರಿಗೆ ಪದೇ ಪದೇ ಕರೆ ಮಾಡಿ ಮಾತನಾಡುತ್ತಿದ್ದರಂತೆ.
ಅವರೊಂದಿಗೆ ಸಲುಗೆಯಿಂದ ಮಾತನಾಡಿ ನಂತರ ಅವರಿಗೆ ಬೆತ್ತಲಾಗಲು ಬೆದರಿಕೆ ಹಾಕುತ್ತಿದ್ದರಂತೆ. ಆತನ ಬೆದರಿಕೆಗೆ ಹೆದರಿ ನಗ್ನರಾದರೆ ಅವರ ಫೋಟೋಗಳನ್ನ ಇಟ್ಟುಕೊಂಡು ಪದೇ ಪದೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಜ್ವಲ್ ಬೆದರಿಕೆಗೆ ಹೆದರಿ ತಾನೂ ಕೂಡ ನಗ್ನರಾಗಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಪುತ್ರ ಎಚ್‌ಡಿ ರೇವಣ್ಣರ ಮಗ ಪ್ರಜ್ವಲ್ ರೇವಣ್ಣ ಅವರ ಮೇಲೆ ಹಲವಾರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರನ್ನೂ ಬಂಧಿಸಲಾಗಿತ್ತು.

ಇನ್ನೂ ಎಚ್‌ಡಿ ರೇವಣ್ಣ ಅವರ ಮತ್ತೋರ್ವ ಪುತ್ರ ಸೂರಜ್ ರೇವಣ್ಣ ಅವರನ್ನೂ ಅಸಹಜ ಲೈಂಗಿಕ ಕಿರುಕುಳದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ. ಹೀಗೆ ಇಡೀ ಕುಟುಂಬವೇ ಆರೋಪಗಳ ಕತ್ತಿಯನ್ನು ತಲೆಯ ಮೇಲೆ ಹೊತ್ತು ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಎಚ್‌ಡಿ ರೇವಣ್ಣ ಕುಟುಂಬಸ್ಥರ ಪ್ರಕರಣಗಳು ಜೆಡಿಎಸ್ ಪಕ್ಷಕ್ಕೂ ಕಪ್ಪು ಚುಕ್ಕೆಯಂತಾಗಿವೆ. ಇದರಿಂದ ಪಕ್ಷ ಅವರಿಂದ ಅಂತರ ಕಾಯ್ದುಕೊಂಡಿದೆ.
ಹೊರಬರಲು ಪ್ರಜ್ವಲ್ ಪ್ರಯತ್ನ ವಿಫಲ
ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬುಧವಾರ ವಜಾಗೊಳಿಸಿದೆ. ಏಪ್ರಿಲ್ 28 ರಂದು ಪ್ರಜ್ವಲ್ ರೇವಣ್ಣ ವಿರುದ್ದ ಹೊಳೆನರಸೀಪುರದಲ್ಲಿ ಮೊದಲು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಅತ್ಯಾಚಾರ ಎಸಗಿದ ಪ್ರಕರಣವೂ ದಾಖಲಾಗಿದ್ದವು. ಒಂದು ತಿಂಗಳಿಗೂ ಅಧಿಕ ಕಾಲ ವಿದೇಶದಲ್ಲಿಯೇ ಇದ್ದ ಪ್ರಜ್ವಲ್ ರೇವಣ್ಣ ಆನಂತರ ವಿಶೇಷ ತನಿಖಾ ತಂಡದ ಎದುರು ಶರಣಾಗಿದ್ದರು.












Click it and Unblock the Notifications