ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕರ ಕೈವಾಡವಿದೆ ಎಂದ ಕುಮಾರಸ್ವಾಮಿ: ಡಿ ಕೆ ಶಿವಕುಮಾರ್ ಏನಂದ್ರು?
ಯಾದಗಿರಿ, ಮೇ 01: ಹಾಸನದಲ್ಲಿ ಭಾರೀ ಸದ್ದು ಮಾಡಿರುವ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕರ ಕೈವಾಡವಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪ ಮಾಡಿದ್ದಾರೆ. ಈ ಕುರಿತು ಡಿ ಕೆ ಬ್ರದರ್ಸ್ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಬುಧವಾರ ಯಾದಗಿರಿಯ ದೇವತ್ಕಲ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವವಿದ್ದರೆ ಮೊದಲು ಸಂತ್ರಸ್ತರ ಮನೆಗೆ ಹೋಗಿ ಆ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೇವರಾಜೇ ಗೌಡ ಈ ಪೆನ್ ಡ್ರೈವ್ ವಿಚಾರವಾಗಿ ಯಾರನ್ನೆಲ್ಲಾ ಭೇಟಿ ಮಾಡಿದ್ದರು ಎಂದು ನಮ್ಮ ವಕ್ತಾರರು ವಿವರಿಸಿದ್ದಾರೆ. ಈ ವಿಚಾರವಾಗಿ ದೇವರಾಜೇ ಗೌಡ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು, ಅಲ್ಲದೇ ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿಸಿದ್ದರು. ನಾವು ಈ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿದ್ದರೆ ಬೇರೆ ರೀತಿಯೇ ಮಾಡಬಹುದಾಗಿತ್ತು. ನಮಗೆ ಅದರ ಅಗತ್ಯವಿಲ್ಲ. ಈ ವಿಚಾರಗಳ ಬಗ್ಗೆ ನಾನು ಸುಮ್ಮನೆ ಕೂರುವುದಿಲ್ಲ, ಈ ವಿಚಾರವಾಗಿ ಮುಂದೆ ಮಾತನಾಡುತ್ತೇನೆ ಎಂದರು.
ಸೂರಜ್ ರೇವಣ್ಣ ನಿಮ್ಮನ್ನು ಭೇಟಿ ಮಾಡಿದ್ದರೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಸೂರಜ್ ರೇವಣ್ಣ ನಮ್ಮನ್ನು ಭೇಟಿ ಮಾಡಿದ್ದರು. ಅವರು ಯಾವ ಕಾರಣಕ್ಕೆ ಭೇಟಿಯಾಗಿದ್ದರು ಎಂದು ಅವರನ್ನೇ ಕೇಳಿ ಎಂದು ತಿಳಿಸಿದರು.












Click it and Unblock the Notifications