Prajwal Revanna Case: ದಳಪತಿಗಳಿಗೆ ಮತ್ತೊಂದು ಶಾಕ್ ಜೆಡಿಎಸ್ ಶಾಸಕರು ಕೈ ಸಂಪರ್ಕದಲ್ಲಿ..?
ಬೆಂಗಳೂರು, ಮೇ 05: ಹಾಸನ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಹೀಗಾಗಿ ಜೆಡಿಎಸ್ ಪಕ್ಷದ 12 ಜನ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿದ ಅವರು, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಎಂತಹವರಾದರೂ ಈ ವಿಚಾರದಲ್ಲಿ ಹತಾಶರಾಗಿರುತ್ತಾರೆ. ಅವರ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ.

ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಮಾಡುವ ಸಮಯದಿಂದಲೂ ಅವರ ಕುಟುಂಬದವರ ಹೇಳಿಕೆಗಳನ್ನು ಗಮನಿಸಿಕೊಂಡು ಬನ್ನಿ. ಅವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು.
ಪೆನ್ ಡ್ರೈವ್ ವಿಚಾರದಲ್ಲಿ ಕುಮಾರಸ್ವಾಮಿ ಆಗಾಗ್ಗೆ ನಿಲುವು ಬದಲಿಸುತ್ತಿರುವುದು ಏಕೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಪೆನ್ ಡ್ರೈವ್ ಅವರ ಕುಟುಂಬದ ವಿಚಾರ. ಆದರೆ ಕುಮಾರಸ್ವಾಮಿ ಮಾತು ಆಗಾಗ್ಗೆ ಬದಲಾಗುತ್ತಲೇ ಬಂದಿದೆ. ಬೇಕಿದ್ದರೆ ಕಳೆದ ವಿಧಾನಸಭೆ ಚುನಾವಣೆಯಿಂದ ಈಚೆಗೆ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ನೋಡಿಕೊಂಡು ಬನ್ನಿ. ಈಗ ಪೆನ್ ಡ್ರೈವ್ ಪ್ರಕರಣದಲ್ಲೂ ಕುಮಾರಸ್ವಾಮಿ ಅವರು ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ನಿಲುವು ಬದಲಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರೇ, "ಉಪ್ಪು ತಿಂದವರು ನೀರು ಕುಡಿಯಬೇಕು, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ" ಎಂದು ಹೇಳಿದ್ದಾರೆ. ಹಿಂದೆ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದೂ ಅವರೇ. ಪ್ರಜ್ವಲ್ ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅವರು ಕ್ಷಮೆ ಕೇಳಿದ್ದು ಅವರೇ. ಆದರೆ ಕುಮಾರಸ್ವಾಮಿ ಈಗ ತಮ್ಮ ನಿಲುವು ಬದಲಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಪ್ರಿಯಾಂಕಾ ಗಾಂಧಿ ಅವರು ಶುಕ್ರವಾರ ದಾವಣಗೆರೆ ಹಾಗೂ ಗದಗದಲ್ಲಿ ಪ್ರಚಾರ ಮಾಡಲಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ದಕ್ಷಿಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟದ ಭಾಗಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದಕ್ಕೆ ಐದೂ ಸೀಟು ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಖರಿ ಜನರಿಗೆ ಮೆಚ್ಚುಗೆಯಾಗಿದೆ. ಹಳ್ಳಿ ಮಟ್ಟದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಲೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಒಕ್ಕಲಿಗರ ನಾಯಕತ್ವಕ್ಕಾಗಿ ಇಂತಹ ಪ್ರಕರಣಗಳು ಆಚೆ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಸಿದ ಅವರು, ಇದೆಲ್ಲವೂ ಬಿಜೆಪಿ ಸೃಷ್ಟಿಸಿರುವ ಚರ್ಚೆಗಳು. ನನಗೆ ಯಾವುದೇ ನಾಯಕತ್ವ ಬೇಡ. ಕಾಂಗ್ರೆಸ್ ಪಕ್ಷ ನಾಲ್ಕು ವರ್ಷಗಳ ಹಿಂದೆಯೇ ರಾಜ್ಯದ ಅಧ್ಯಕ್ಷನಾಗಿ ಮಾಡಿದೆ. ನಾನು ಕಾಂಗ್ರೆಸ್ ಅಧ್ಯಕ್ಷ . ಬಿಜೆಪಿಗರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಿದ್ದಾರೆ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ಆ ಸಮಾಜಕ್ಕೆ ರಕ್ಷಣೆ ಕೊಡುವ ಜವಾಬ್ದಾರಿ ಇದೆ. ಈ ಸಮುದಾಯದ ಜನರ ಸ್ವಾಭಿಮಾನ, ಗೌರವ ಉಳಿಸಲು ನಾನು ಅವರ ಸೇವೆ ಮಾಡುತ್ತೇನೆ. ಅದು ನನ್ನ ಧರ್ಮ. ಉಳಿದಂತೆ ನನಗೆ ನಾಯಕತ್ವದ ಪಟ್ಟ ಬೇಡ ಎಂದರು.












Click it and Unblock the Notifications