ಪ್ರತಾಪ್ ಜೊತೆ ಜೈಲಲ್ಲೇ ಅಶ್ಲೀಲ ಚಿತ್ರ ನೋಡ್ತಿದ್ದ ಪ್ರಜ್ವಲ್ ರೇವಣ್ಣ, ಈ ಸಹ ಕೈದಿ ಯಾರು?
ಬೆಂಗಳೂರು: ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೊತೆಗೆ ಪ್ರತಾಪ್ ರಾಯ್ ಎಂಬ ವಿಚಾರಣಾಧೀನ ಕೈದಿಯ ಹೆಸರೂ ಕೇಳಿಬಂದಿದೆ.
ವರದಿಗಳ ಪ್ರಕಾರ, ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್ ಒಂದೇ ಬ್ಯಾರಕ್‌ನಲ್ಲಿದ್ದರು. ಪ್ರತಾಪ್ ರಾಯ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ಇದ್ದು, ಅವರು ವಿಚಾರಣಾಧೀನ ಕೈದಿಯಾಗಿದ್ದಾರೆ. ಕೆಲವು ವರದಿಗಳಲ್ಲಿ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಸಹಾಯ ಮಾಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ತಪಾಸಣೆ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಿಂದ ಮೊಬೈಲ್, ಚಾರ್ಜರ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಪ್ರತಾಪ್ ರೈ ಅವರನ್ನು ಆರೋಪಿ ಸಂಖ್ಯೆ 1 ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಆರೋಪಿ ಸಂಖ್ಯೆ 2 ಎಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ.
ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಹಾಗೂ ಸಹ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಾಗೆಯೇ ವಿಶೇಷ ಭದ್ರತಾ ವಿಭಾಗದಿಂದ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಪ್ರಜ್ವಲ್ ಅವರನ್ನು ಕಾರಾಗೃಹ ಅಧಿಕಾರಿಗಳು ಎತ್ತಂಗಡಿ ಮಾಡಿದ್ದಾರೆ.
ಪ್ರಜ್ವಲ್ ಅವರ ಸೆಲ್‌ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಂ, ನೆಟ್‌ಪ್ಲಿಕ್ಸ್, ಪ್ರೈಮ್ ವಿಡಿಯೋಮುಂತಾದ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಆಗಿರುವುದು ಪತ್ತೆಯಾಗಿದೆ. ಆದರೆ ಅವುಗಳ ಪಾಸ್‌ವರ್ಡ್ ಪ್ರೊಟೆಕ್ಟ್ ಆಗಿವೆ. ಪಾಸ್‌ವರ್ಡ್ ಕೇಳಿದಾಗ ಆ ಇಬ್ಬರು ಕೈದಿಗಳು ತಮಗೆ ತಿಳಿದಿರುವುದಿಲ್ಲ ಎಂದಿದ್ದಾರೆ.
ಪೆನ್‌ಡ್ರೈವ್-ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ
ಇನ್ನು ಸೆಲ್‌ನಲ್ಲಿ ಸಿಕ್ಕಿದ ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳಿದ್ದವು ಎಂದು ತಿಳಿದು ಬಂದಿದೆ. ಜೈಲಿನ ಟಿವಿಗೆ ಪೆನ್ ಡ್ರೈವ್ ಕನೆಕ್ಟ್ ಮಾಡಿ ಸಿನಿಮಾ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ ಆ ಪೆನ್ ಡ್ರೈವ್‌ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿದ್ದವು. ಅದೇ ರೀತಿ ಮೊಬೈಲ್‌ನಲ್ಲಿ 'ಜಿಂಗ್ರಾ' ಹೆಸರಿನ ಗೇಮಿಂಗ್ ಆ್ಯಪ್‌ನಲ್ಲಿ ಕೆಲ ಅಶ್ಲೀಲ ವಿಡಿಯೋಗಳು ಡೌನ್ ಲೋಡ್ ಆಗಿದ್ದವು. ಹಾಸಿಗೆ ಕೆಳಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿ ಯರು ಒಳ ಉಡುಪು ಧರಿಸಿ ತೆಗೆಸಿದ್ದ ಚಿತ್ರಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.
ವೈರಲ್ ವಿಡಿಯೋದಿಂದ ಮತ್ತಷ್ಟು ಚರ್ಚೆ
ಇದರ ಬೆನ್ನಲ್ಲೇ, ಜೈಲಿನೊಳಗೆ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಮಾತನಾಡುತ್ತಿರುವಂತೆ ಕಾಣುವ 17 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಬೈಲ್ ಪತ್ತೆಯಾದ ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ವಿಭಾಗದಿಂದ ಸಾಮಾನ್ಯ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಜೈಲು ನಿಯಮಾನುಸಾರ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದ್ದು, ಜೈಲಿನ ಗ್ರಂಥಾಲಯದಲ್ಲಿ ಕೆಲಸವನ್ನೂ ವಹಿಸಲಾಗಿದೆ ಎಂದು ವರದಿಯಾಗಿದೆ.
ಜೈಲು ಅಧಿಕಾರಿಗಳ ವಿರುದ್ಧವೂ ಕ್ರಮ
ಪ್ರಕರಣ ಬೆಳಕಿಗೆ ಬಂದ ಬಳಿಕ ಜೈಲು ಆಡಳಿತದ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ಅವರನ್ನು ಅಮಾನತುಗೊಳಿಸಲಾಗಿದ್ದು, ಜೈಲು ಅಧೀಕ್ಷಕ ಅಂಶುಕುಮಾರ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಹೀಗಾಗಿ, ಪ್ರಜ್ವಲ್ ರೇವಣ್ಣ ಜೊತೆ ಒಂದೇ ಬ್ಯಾರಕ್‌ನಲ್ಲಿದ್ದ ಪ್ರತಾಪ್ ರಾಯ್ ಯಾರು, ಮೊಬೈಲ್ ಜೈಲಿನೊಳಗೆ ಹೇಗೆ ಬಂತು ಮತ್ತು ಅದನ್ನು ಯಾರು ಬಳಸುತ್ತಿದ್ದರು ಎಂಬುದೇ ಈಗ ತನಿಖೆಯ ಪ್ರಮುಖ ಪ್ರಶ್ನೆಗಳಾಗಿವೆ.


Click it and Unblock the Notifications
