Prajwal Revanna Case: 12 ಜನರ ನೊಂದ ಮಹಿಳೆಯರು ಈಗ ಎಲ್ಲಿದ್ದಾರೆ ಗೊತ್ತಾ? ಕುಮಾರಸ್ವಾಮಿ ಬಿಚ್ಚಿಟ್ಟ ಸತ್ಯ ಇಲ್ಲಿದೆ
ಬೆಂಗಳೂರು, ಮೇ 08: ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿದ್ದಾರೆ. 12 ಜನರ ನೊಂದ ಮಹಿಳೆಯರು ಎನ್ನಲಾದ ಮಹಿಳೆಯರನ್ನು ಕುಮಾರಕೃಪಾದಲ್ಲಿ ಇಟ್ಟಿದ್ದಾರೆ. ಎಲ್ಲಾ ಸಂಚು ಮಾಡಿ ಈಗ ಅನುಕಂಪ ತೋರಿಸ್ತಾ ಇದ್ದೀರಿ ಅಲ್ಲವೇ ಶಿವಕುಮಾರ್? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ನಿಮ್ಮ ಯೋಗ್ಯತೆಗೆ ಈಗ ಯಾಕೆ ಅನುಕಂಪ? ಪೆನ್ ಡ್ರೈವ್ ಲೀಕ್ ಮಾಡುವಾಗ ಆ ಮಹಿಳೆಯರ ಮುಖ ತೋರಿಸಿದ್ದೀರಿ. ಅವರ ಮಾನ ಮರ್ಯಾದೆಯನ್ನು ಹಾದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ. ಈಗ ನೋಡಿದರೆ ಅವರ ಬಗ್ಗೆ ಅನುಕಂಪ ತೋರಿಸುತ್ತಿರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಿಡ್ನಾಪ್ ಪ್ರಕರಣದಲ್ಲಿ ಏನೇನು ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ನೊಂದ ಮಹಿಳೆ ರಾಜಗೋಪಾಲ್ ಎಂಬುವರ ತೋಟದ ಮನೆಯಲ್ಲಿ ಸಿಕ್ಕಿದರಾ? ಅಥವಾ ಅವರ ಸಂಬಂಧಿಕರ ಮನೆಯಲ್ಲಿ ಸಿಕ್ಕಿದರಾ? ಎಸ್ ಐಟಿ ಅಧಿಕಾರಿಗಳು ಹೇಳಬೇಕು. ಆ ಮಹಿಳೆ ಸಿಕ್ಕಿದ್ದು ಅವರ ಸಂಬಂಧಿಕರ ಮನೆಯಲ್ಲಿ. ಹುಣಸೂರಿನ ಪವಿತ್ರಾ ಎಂಬುವವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ರೇವಣ್ಣ ವಿಚಾರದಲ್ಲಿ ಮಾತ್ರ ನಾನು ಹೋರಾಟ ಮಾಡುತ್ತೇನೆ. ನಮ್ಮ ಪಕ್ಷದ ಶಾಸಕ, ನನ್ನ ಸಹೋದರನಾದ್ದರಿಂದ ರೇವಣ್ಣ ಅವರ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲರ್ ಎಂದಿರುವ ಡಿಸಿಎಂ ಡಿಕೆಶಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ವ್ಯಕ್ತಿ ನೀನು ಎಂದು ಕಿಡಿಕಾರಿದರು.
ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್ ಡ್ರೈವ್ ಗಳನ್ನು ಹಾದಿಬೀದಿಯಲ್ಲಿ ಸುರಿದಿರುವ ಕಿಡಿಗೇಡಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು. ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂಥದು ಎಂದು ಎಲ್ಲರಿಗೂ ಗೊತ್ತಿದೆ. ವಕೀಲರಾದ ದೇವರಾಜೇಗೌಡ ಜತೆ ಯಾಕಪ್ಪ ಮಾತಾನಾಡಿದೆ ನೀನು? ನಿನಗೇನಿತ್ತು ಅವರ ಹತ್ತಿರ ಕೆಲಸ ಡಿ.ಕೆ.ಶಿವಕುಮಾರ್? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಬ್ಲಾಕ್ ಮೇಲರ್ ಅಲ್ಲ. ಐದು ಜನರನ್ನು ಇಟ್ಟಕೊಂಡಿದ್ದೀನಿ ಅಂತ ಹೇಳಿದ್ದೀಯಾ ಅಲ್ಲವೇ ನೀನು? ನಿಮ್ಮ ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ? ಡಾ.ಜಿ.ಪರಮೇಶ್ವರ ಅವರೇ ನಿಮಗೆ ಬೆನ್ನು ಮೂಳೆ ಇದೆಯಾ? ನನ್ನನ್ನು ಹಿಟ್ ಅಂಡ್ ರನ್ ಅಂತಾರೆ.. ಹಾಗಾದರೆ ನಿಮ್ಮದೇನು? ನಿಮ್ಮ ಎಸ್ ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಎನ್ನುವುದು ಇದೆಯಾ? ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ಕಾರು ಚಾಲಕ ಕಾರ್ತಿಕ್ ನ ಖಾಸಗಿ ಚಾನೆಲ್ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡ್ತಾ ಇದ್ದಾರೆ. ಮಿಸ್ಟರ್ ಪರಮೇಶ್ವರ್ ತಾವು ಏನ್ ಮಾಡ್ತಾ ಇದ್ದೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. 14 ವರ್ಷದ ರೇವಣ್ಣ ಮನೆಯಲ್ಲಿ ಕೆಲಸದಲ್ಲಿ ಇದ್ದವನು ಇವನು. ಪ್ರಜ್ವಲ್ ನಡವಳಿಕೆ ಗೊತ್ತಿದ್ದ ಮೇಲೆ ಕೆಲಸ ಬಿಡಬೇಕಿತ್ತು ಅಲ್ಲವೇ? ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ ಅವನು. ಬಂಡೆ ರಕ್ಷಣೆ ಕೊಡುತ್ತದೆ ಎಂದು ಕಾರ್ತಿಕ್ ಅಂದುಕೊಂಡಿದ್ದಾನೆ. ಅವನು ಗಿರಿನಗರದಲ್ಲೇ ಇದ್ದಾನಂತೆ. ಬಹುಶಃ ಅವನಿಗೆ ಟ್ರೈನಿಂಗ್ ಕೊಡ್ತಾ ಇದ್ದಾರೆ ಎಂದು ಅವರು ಆರೋಪ ಮಾಡಿದರು.
ನವೀನ್ ಗೌಡ, ಕಾರ್ತಿಕ್ ಹಾಗೂ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಇವರು ಮೂರು ಜನರು ಎಷ್ಟು ಆಪ್ತರು, ಇವರ ಸಂಬಂಧ ಎಂಥದ್ದು, ಇವರ ಪೋಟೋಗಲೆಲ್ಲ ಎಲ್ಲಾ ಕಡೆ ವೈರಲ್ ಆಗಿವೆ. ಇದೆಲ್ಲಾ ಎಸ್ ಐಟಿ ಕಣ್ಣಿಗೆ ಬಿದ್ದಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.












Click it and Unblock the Notifications