219ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಕುವೆಂಪು ಅವರ ಪುತ್ರನಿಗೆ ಮನ್ನಣೆ! Lalbagh Flower Show
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಇಡೀ ಜಗತ್ತಿನಲ್ಲೇ ಹೆಸರು ಮಾಡಿದ್ದು, ಕನ್ನಡಿಗರ ನಾಡಿನ ಈ ವಿಶೇಷತೆ ಕಂಡು ಇಡೀ ಪ್ರಪಂಚದ ಜನರು ಬೆರಗಾಗುತ್ತಾರೆ. ಲಕ್ಷಾಂತರ ಜನರು ಬಂದು ಈ ವಿಸ್ಮಯ ಕಣ್ತುಂಬಿಕೊಳ್ಳುವ ಜೊತೆಗೆ ಭರ್ಜರಿ ಆದಾಯ ಕೂಡ ನಿರೀಕ್ಷೆ ಮಾಡಲಾಗುತ್ತದೆ. ಹೀಗಿದ್ದಾಗ ಮತ್ತೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಶುರುವಾಗುತ್ತಿದ್ದು, ಗಣರಾಜ್ಯೋತ್ಸವ ಸಂಭ್ರಮದಲ್ಲಿ ಜನರು ಈಗ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಅದರಲ್ಲೂ 219ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಕುವೆಂಪು ಅವರ ಪುತ್ರನಿಗೆ ಮನ್ನಣೆ ಸಿಗಲಿದೆ.
ಹೌದು, ರಾಷ್ಟ್ರಕವಿ ಕುವೆಂಪು ಅವರ ಪುತ್ರ ಮತ್ತು ಕನ್ನಡ ನಾಡಿನಲ್ಲಿ ಅತಿಹೆಚ್ಚು ಓದುಗರ ಬಳಗ ಸೆಳೆದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಮಿಂಚಲಿದ್ದಾರೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಬಗ್ಗೆ 'ತೇಜಸ್ವಿ ವಿಸ್ಮಯ' ಈ ಬಾರಿ ಪ್ರದರ್ಶನದ ಮುಖ್ಯ ವಿಷಯವಾಗಿದ್ದು, ಗಾಜಿನ ಮನೆಯಲ್ಲಿ ತೇಜಸ್ವಿ ಅವರ ನೆಚ್ಚಿನ ಕಾಡಿನ ಮಾದರಿಯ ನಿರ್ಮಾಣ ಆಗುತ್ತಿದೆ. ಸುಮಾರು 3 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ, ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ
1) ಜನವರಿ 14 ಬುಧವಾರ ಶುರುವಾಗುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಸುಮಾರು 13 ದಿನಗಳ ಕಾಲ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು, ಫೋಟೋ ಕ್ಲಿಕ್ ಮಾಡುವ ಮೂಲಕ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
2) ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಬಗ್ಗೆ ತೇಜಸ್ವಿ ವಿಸ್ಮಯ ಈ ಬಾರಿ ಪ್ರದರ್ಶನದ ಮುಖ್ಯ ವಿಷಯವಾಗಿದ್ದು, ಫಲಪುಷ್ಪ ಪ್ರದರ್ಶನ ನಡೆಯುವ ಗಾಜಿನ ಮನೆ ಪ್ರವೇಶ ದ್ವಾರದ ಅಕ್ಕಪಕ್ಕ ಹಾರುವ ಓತಿ ಮತ್ತು ಆನೆಯ ಬೃಹತ್ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ. ಮತ್ತು ಗಾಜಿನ ಮನೆ ಕೇಂದ್ರ ಭಾಗದಲ್ಲಿ ಬೃಹತ್ ಬೆಟ್ಟ ಹಾಗೂ ಜಲಪಾತ ಪರಿಸರ ಮಾದರಿ ಇರಲಿದೆ. ಹಾಗೇ ಬೆಟ್ಟದ ತಪ್ಪಲಿನಲ್ಲಿ, ತೇಜಸ್ವಿ ಅವರ ನಿರುತ್ತರ ಮನೆಯ ಪುಷ್ಪ ಮಾದರಿ ಇರಲಿದ್ದು, ಅಲ್ಲೇ ತೇಜಸ್ವಿ ಅವರು ಹಾಗು ರಾಜೇಶ್ವರಿ ಅವರ ಪ್ರತಿಮೆಗಳು ಅನಾವರಣ ಆಗಲಿದೆ.
3) ಕನ್ನಡ ನಾಡು ಕಂಡ ಅದ್ಭುತ ಸಾಹಿತಿ, ಬರಹಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ದೊಡ್ಡ ಪರಿಸರ ಪ್ರೇಮಿ. ಹೀಗಾಗಿ ಅವರ ಅಷ್ಟೂ ಪರಿಸರದ ನೆನಪುಗಳ ಜೊತೆಗೆ, ತೇಜಸ್ವಿ ಅವರು ಬಳಸುತ್ತಿದ್ದ ಸ್ಕೂಟರ್, ಕರ್ವಾಲೋ ಕಾದಂಬರಿಯ ಪಾತ್ರ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ಹಾರುವ ಓತಿ, ಮಿಡತೆ, ಜೇನು ಹುಳ, ಜೀರುಂಡೆ, ಕೀಟ & ಪುಷ್ಪ ಮಾದರಿ ಈಗಾಗಲೇ ಸಿದ್ಧವಾಗಿದೆ. ಈ ಮೂಲಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳಿಗೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಸಖತ್ ಖುಷಿ ನೀಡಲಿದೆ.
4) 2026 ಗಣರಾಜ್ಯೋತ್ಸವ ಪ್ರಯುಕ್ತ ಆಯೋಜನೆ ಮಾಡುತ್ತಿರುವ ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ಮತ್ತೊಂದು ವಿಶೇಷತೆ ಏನೆಂದರೆ, ತೋಟಗಾರಿಕೆ ಇಲಾಖೆಯಿಂದ ಆಯೋಜಿಸುತ್ತಿರುವ 219ನೇ ಪ್ರದರ್ಶನ ಇದಾಗಿದೆ. ಸುಮಾರು 3 ಕೋಟಿ ರೂಪಾಯಿಗು ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಹಾಗೂ ಭಾರಿ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆ ಇದೆ.












Click it and Unblock the Notifications