ಒಳಚರಂಡಿ ನಿರ್ಮಾಣ ವಿಫಲ: ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ
ಬೆಂಗಳೂರು ಆಗಸ್ಟ್ 29: ಕರ್ನಾಟಕದ ದುಬಾರಿ ವೆಚ್ಚದ ಹೆದ್ದಾರಿಗಳಲ್ಲಿ ಒಂದಾಗಿರುವ ಬೆಂಗಳೂರು- ಮೈಸೂರು ನಡುವಿನ ಹೆದ್ದಾರಿ ರಸ್ತೆಯು 'ಮಳೆ ಪರೀಕ್ಷೆ'ಯಲ್ಲಿ ವಿಫಲಗೊಂಡಿದೆ. ಮಳೆ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ಒಳಚರಂಡಿ ನಿರ್ಮಿಸದಿರುವುದೇ ಹೆದ್ದಾರಿ ಮುಳುಗಡೆಗೆ ಮತ್ತು ಅಲ್ಲಲ್ಲಿ ರಸ್ತೆ ಹಾಳಾಗಲು ಕಾರಣ ಎನ್ನಲಾಗಿದೆ.
ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಮನಗರ, ಚನ್ನಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಸರ್ವೀಸ್ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಬೆಂಗಳೂರಿನಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೃಹತ್ ಹೆದ್ದಾರಿ ಯೋಜನೆಯಲ್ಲಿ ಕಳಪೆ ಒಳಚರಂಡಿ ಕಾಮಗಾರಿ ನಡೆದಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಶನಿವಾರ ಮೈಸೂರು ರಸ್ತೆ ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ ಬಳಿ ಹೆದ್ದಾರಿಯ ಕೆಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗಲಿಲ್ಲ. ಕೆಲವು ಕಡೆಗಳಲ್ಲಿ ಬದಲಿ ಮಾರ್ಗ ಅನುಸರಿಸಿ ವಾಹನಗಳು ಸಂಚರಿಸಿದ್ದು ಕಂಡು ಬಂತು.

ಕಳಪೆ ಒಳಚರಂಡಿ ನಿರ್ಮಾಣ
ಬೆಂಗಳೂರು -ಮೈಸೂರು ಮಧ್ಯದ ಹೆದ್ದಾರಿ ಮೊದಲ ಹಂತದ ನಿರ್ಮಾಣಕ್ಕೆ 3,501 ಕೋಟಿ ರೂ. ಮತ್ತು ಎರಡನೇ ಹಂತದ ಕಾಮಗಾರಿಗೆ 2,920 ಕೋಟಿ ರೂ.(ಹಂತ 2) ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಂತಹ ಬೃಹತ್ ವೆಚ್ಚದ ರಸ್ತೆಯಲ್ಲಿ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಒಳಚರಂಡಿ ನಿರ್ಮಿಸದಿರುವುದು ಹೆದ್ದಾರಿ ಜಲಾವೃತಕ್ಕೆ ಮೂಲ ಕಾರಣ ಆಗಿದೆ. ಹೀಗಾಗಿಯೇ ಕಿಲೋ ಮಿಟರ್‌ಗಟ್ಟಲೇ ವಾಹನ ದಟ್ಟಣೆ ಉಂಟಾಗಿದೆ. ಲಕ್ಷಾಂತರ ಜನರಿಗೆ ಇದರಿಂದ ಸಮಸ್ಯೆ ಉಂಟಾಗಿದೆ.

ಹೆದ್ದಾರಿಯಲ್ಲಿ ನೀರು ನಿಂತರೆ ಸಂಚಾರಕ್ಕೆ ಸಂಚಕಾರ
ಈ ಕುರಿತು ಸಂಚಾರ ತಜ್ಞ ಶ್ರೀನಿವಾಸ್ ಆರ್ ಅವರು ಪ್ರತಿಕ್ರಿಸಿದ್ದು, ಹೆದ್ದಾರಿಯಲ್ಲಿ ಪ್ರವಾಹದ ಇದೇ ಮೊದಲ ನಿದರ್ಶನವಲ್ಲ. ಕಳೆದ ತಿಂಗಳು ಸುರಿದ ಮಳೆಗೆ ಮದ್ದೂರು ಹಾಗೂ ಮಂಡ್ಯ ಬಳಿಯ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದಂತೆ ರಸ್ತೆಗಳನ್ನು ನಿರ್ಮಿಸಬೇಕು.
ಒಂದೇ ವೇಳೆ ಬಿದ್ದ ನೀರು ಮಳೆ ನೀರು ಹರಿದು ಹೋಗದಿದ್ದರೆ ಆ ರಸ್ತೆಗಳೆಲ್ಲವೂ ಸಂಪೂರ್ಣ ಹಾಳಾಗುತ್ತವೆ. ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ. ಇದು ವಾಹನಗಳ ಸಂಚಾರದ ಮೇಲೆ ಹಾನಿ ಉಂಟು ಮಾಡಲಿದೆ. ಸದ್ಯ ಹಾಳಾಗಿರುವ ಹೆದ್ದಾರಿ ದುರಸ್ತಿ, ಸೂಕ್ತ ಒಳಚರಂಡಿ ವ್ಯವಸ್ಥೆಗೆ ಮತ್ತೆ ಹಣ ವ್ಯಯಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆ ಪರೀಕ್ಷೆಯಿಂದ ಹೆದ್ದಾರಿ ವಸ್ತುಸ್ಥಿತಿ ಬಯಲು
ಒಂದು ಹೆದ್ದಾರಿ ಯೋಜನೆ ಪೂರ್ಣಗೊಂಡರೆ ಸಾರ್ವಜನಿಕರು ಆ ರಸ್ತೆ ಉತ್ತಮವಾಗಿ ಕಾಣುವುದನ್ನು ಮಾತ್ರ ನೋಡುತ್ತಾರೆ. ಆದರೆ, ಮಳೆಗಾಲದಲ್ಲಿ ಆ ರಸ್ತೆಗಳು 'ಮಳೆ ಪರೀಕ್ಷೆ' ಎದುರಿಸಿದ ನಂತರವೇ ಅದರ ನಿಜ ವಸ್ತು ಸ್ಥಿತಿ ಬಯಲಾಗುತ್ತದೆ. ಇದಕ್ಕೀಗ ಬೆಂಗಳೂರು ಮೈಸೂರು ಹೆದ್ದಾರಿ ತಾಜಾ ಉದಾಹರಣೆ ಆಗಿದೆ. ಆದರೆ ಅದೃಷ್ಟವಶಾತ್ ಈಗ ರಸ್ತೆ ಪೂರ್ಣಗೊಳ್ಳುವ ಮೊದಲೇ ಸಮಸ್ಯೆ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಅಧಿಕಾರಿಗಳು ಲೋಪದೋಷ ಸರಿಪಡಿಸಲು ಇದೊಂದು ಸಕಾಲವಾಗಿದೆ ಎಂದು ಮತ್ತೊಬ್ಬ ಸಂಚಾರ ತಜ್ಞ ಆರ್. ಆನಂದ್ ಎಂಬುವವರು ತಿಳಿಸಿದರು.
ಯೋಜನೆಯು ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಯುವ ಹಂತದಲ್ಲಿದೆ ಮತ್ತು ಚರಂಡಿ ಜಾಲಗಳಿಗೆ ರಸ್ತೆಗಳನ್ನು ಜೋಡಿಸುವುದು ಪ್ರಗತಿಯಲ್ಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳು ತಿಳಿಸಿದ್ದಾರೆ. ಚರಂಡಿಗಳು ಸಂಪರ್ಕಗೊಂಡ ನಂತರ ಹೆದ್ದಾರಿಗಳ ಮೇಲೆ ನೀರು ನಿಲ್ಲುವುದು ಕಡಿಮೆ ಆಗಲಿದೆ ಎಂದು ವರದಿಯಾಗಿದೆ.

ಹೆದ್ದಾರಿ ನಿರ್ಮಾಣ ಬಗ್ಗೆ ಚರ್ಚಿಸುತ್ತೇನೆ: ಎಚ್‌ಡಿಕೆ
ರಾಮನಗರಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಂಡಿದ್ದೆ. ಈಗ ಕೇಂದ್ರವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಇದೇ ಸೆಪ್ಟೆಂಬರ್ 5 ರಂದು ನಾನು ನವದೆಹಲಿಗೆ ತೆರಳುತ್ತಿದ್ದೇನೆ. ರಸ್ತೆ ಕಾಮಗಾರಿಗಳ ಕಳಪೆ ಗುಣಮಟ್ಟದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಪ್ರಸ್ತಾಪಿಸುತ್ತೇನೆ. ಕಳೆದ ಒಂದು ತಿಂಗಳಿನಿಂದ, ಹೆದ್ದಾರಿಯಲ್ಲಿ ನೀರು ತುಂಬಿರುವ ವರದಿಗಳು ಆಗಿದ್ದರ ಬಗ್ಗೆ ಮಾಹಿತಿ ಇದೆ. ಇದು ಅವೈಜ್ಞಾನಿಕ ನಿರ್ಮಾಣಕ್ಕೆ ಉತ್ತಮ ಉದಾಹರಣೆಯಾಗಿದೆ. ಮಳೆ ನೀರು ಹೆದ್ದಾರಿಯಲ್ಲಿ ನಿಲ್ಲದಂತೆ ರಸ್ತೆಗಳನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರು ಸೇರಿದಂತೆ ಎರಡು ಮಳೆ ಅಬ್ಬರ
ನೈಋತ್ಯ ಮುಂಗಾರು ಮಾರುತಗಳ ಕರ್ನಾಟಕದಲ್ಲಿ ಸಕ್ರಿಯವಾಗಿವೆ. ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮೈಸೂರು ಭಾಗದಲ್ಲಿ ಸಹ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications