EVM Glitch: ಈ ಜಿಲ್ಲೆಗಳ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಆದರೆ ಕೆಲವು ಜಿಲ್ಲೆಗಳ ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿದೆ. ತಾಂತ್ರಿಕದೋಷ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಮತದಾನಕ್ಕೆ ಬ್ರೇಕ್ ಬಿದ್ದಿದೆ.
ಇಂದು ಶುಕ್ರವಾರ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ಕರ್ನಾಟಕ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಹಳೆ ಮೈಸೂರು ಭಾಗದ ಜಿಲ್ಲೆಯಾದ 'ಮಂಡ್ಯ' ಜಿಲ್ಲೆ ಕೆಆರ್ ಪೇಟೆಯ ಮಾಕವಳ್ಳಿಯ ಮತಗಟ್ಟೆ (ಸಂಖ್ಯೆ 100) ಇಲ್ಲಿ ಮತದಾನವು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು.

ಕೆಲವು ತಾಂತ್ರಿಕ ಕಾರಣಗಳಿಂದ ಸಮಯ ಬೆಳಗ್ಗೆ 7.25 ಆದರೂ ಸಹಿತ ಮತದಾನ ಆರಂಭವಾಗಲಿಲ್ಲ. ನಂತರ ಸಮಸ್ಯೆ ಸರಿಪಡಿಸಿ ಮತದಾನ ಆರಂಭಿಸಲಾಯಿತು.
ಚಿಕ್ಕಮಗಳೂರು ಮತಗಟ್ಟೆಯಲ್ಲಿ ಇವಿಎಂ ತಾಂತ್ರಿಕ ದೋಷ
ಚಿಕ್ಕಮಗಳೂರಿನ ಆರೆನೂರು ಗ್ರಾಮದ ಮತಗಟ್ಟೆ (ಸಂಖ್ಯೆ 53) ಯಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಆದರೆ ಕೆಲವೇ ನಿಮಿಷಗಳಲ್ಲಿ ಮತದಾನ ಸ್ಥಗಿತಗೊಂಡಿದೆ. ಆರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53 ರಲ್ಲಿ ಮತದಾನ ಸ್ಥಗಿತಗೊಂಡಿದ್ದು, ಮತದಾನಕ್ಕಾಗಿ ಮತದಾರರು ಸರದಿಯಲ್ಲಿ ಕಾದು ನಿಂತ ದೃಶ್ಯಗಳು ಕಂಡು ಬಂದವು.
ಮಂಗಳೂರಿನ ಮತಗಟ್ಟೆಯಲ್ಲೂ ಸಮಸ್ಯೆ
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಮತಗಟ್ಟೆಯಲ್ಲಿ (ಬೂತ್ ಸಂಖ್ಯೆ 240) ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದ ಸುಗಮವಾಗಿ ನಡೆಯುತ್ತಿದ್ದ ಮತದಾನಕ್ಕೆ ಅಡ್ಡಿ ಉಂಟಾಯಿತು. ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಮತದಾನ ಕೆಲ ಹೊತ್ತು ಸ್ಥಗಿತಗೊಂಡಿದೆ. ಸದ್ಯ ಮತಯಂತ್ರ ಸರಿಪಡಿಸಿ ಮತದಾನ ಆರಂಭ ಆಗಿದೆ.
ಹಾಸನ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೈ ಕೊಟ್ಟಿದೆ. ಮತದಾನ ಆರಂಭವಾದ ಕೆಲವೇ ಹೊತ್ತಿನಲ್ಲಿ ಹಾಸನ ನಗರದ ಸಂತೇಪೇಟೆಯ ಶಾಲೆಯ ಮತದಾನ (ಬೂತ್ ಸಂಖ್ಯೆ 189) ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸದ್ಯ ಚುನಾವಣಾಧಿಕಾರಿಗಳು ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.












Click it and Unblock the Notifications