ಬೆಂಗಳೂರಿನಲ್ಲಿ ಇಂದು ಕೇಜ್ರಿವಾಲ್: ದಿನದ ರಾಜಕೀಯ ಬೆಳವಣಿಗೆ ಹೀಗಿವೆ
ಬೆಂಗಳೂರು, ಏ.21: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬೆಂಗಳೂರಿಗೆ ಬರಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಪ್ರವಾಸದಲ್ಲಿದ್ದಾರೆ. ದಿನದ ರಾಜಕೀಯ ಬೆಳವಣಿಗೆಗಳು ಈ ರೀತಿಯಾಗಿವೆ.
ಎಎಪಿ:
ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರು ಬೆಂಗಳೂರಿಗೆ ಆಗಮಿಸಿ, ಗುರುವಾರ ನಡೆಯಲಿರುವ ರೈತರು ಹಾಗೂ ಜನಸಾಮಾನ್ಯರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 50,000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಎಎಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವು ನಿವೃತ್ತ ಅಧಿಕಾರಿಗಳು ಮತ್ತು ಇತರೆ ಪಕ್ಷಗಳಿಂದ ಬಂದವರು ಕೇಜ್ರಿವಾಲ್ ಸಮ್ಮುಖದಲ್ಲಿ ಅಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:
ಕಳೆದೆರಡು ದಿನಗಳಿಂದ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಿ.ಸಿ. ಪುರದಲ್ಲಿ ನಡೆಯುವ ಸಚಿವ ಮಾಧುಸ್ವಾಮಿ ಅವರ ಪುತ್ರನ ವಿವಾಹದಲ್ಲಿ ಪಾಲ್ಗೊಂಡು ಬಳಿಕ ಮತ್ತೆ ಹೆಲಿಕಾಪ್ಟರ್‌ನಲ್ಲಿ ಕಲಬುರ್ಗಿಗೆ ತೆರಳಲಿದ್ದಾರೆ. ಇಂದು ಕಲಬುರ್ಗಿಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಸಿದ್ದರಾಮಯ್ಯ:
ಲೇಖಕರಾದ ನಟರಾಜ ಹುಳಿಯಾರ್ ಮತ್ತು ರವಿಕುಮಾರ್ ಬಾಗಿ ಅವರು ಬರೆದಿರುವ ರೈತ ನಾಯಕ ಪ್ರೊ ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆ 'ಬಾರಕೋಲು' ಪುಸ್ತಕವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಳಗ್ಗೆ 9ಕ್ಕೆ ತಮ್ಮ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.

ಬಳಿಕ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಿ.ಸಿ. ಪುರದಲ್ಲಿ ನಡೆಯುವ ಸಚಿವ ಮಾಧುಸ್ವಾಮಿ ಅವರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್:
ಅಸಂಘಟಿತ ಕಾರ್ಮಿಕರ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಸಂಜಯ್ ಗಾಬಾ ಕೆಪಿಸಿಸಿ ಕಚೇರಿಗೆ ಮಧ್ಯಾಹ್ನ 12.30ಕ್ಕೆ ಭೇಟಿ ನೀಡಲಿದ್ದಾರೆ.












Click it and Unblock the Notifications