ನನ್ನ ಹತ್ಯೆಗೆ ಸುಪಾರಿ; ಇದು ರಾಜಕೀಯ ದುರುದ್ದೇಶ: ಶಾಸಕ ಸತೀಶ್ ರೆಡ್ಡಿ
ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ, ಸುಪಾರಿ ಬಗ್ಗೆ ಮಾತಾಡಿರುವವ ಆಡಿಯೋ ಪೊಲೀಸರಿಗೆ ಸಿಕ್ಕಿದೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಈ ಬಗ್ಗೆ ಪಾರದರ್ಶಕ ತನಿಖೆ ಆಗಲಿ ಎಂದು ಸತೀಶ್ ರೆಡ್ಡಿ ಅವರು ಹೇಳಿದರು.
ಬೆಂಗಳೂರು,ಫೆಬ್ರವರಿ15: ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವೇ ಇರೋದು. ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ, ಸುಪಾರಿ ಬಗ್ಗೆ ಮಾತಾಡಿರುವವ ಆಡಿಯೋ ಪೊಲೀಸರಿಗೆ ಸಿಕ್ಕಿದೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಈ ಬಗ್ಗೆ ಪಾರದರ್ಶಕ ತನಿಖೆ ಆಗಲಿ ಎಂದು ಹೇಳಿದರು.
ನಾನು ಪೂರ್ತಿ ರಾಜಕಾರಣದಲ್ಲೇ ಇದ್ದೇನೆ. ಈಗ ಯಾವುದೇ ಉದ್ಯಮದಲ್ಲಿ ನಾನು ಇಲ್ಲ ಉದ್ಯಮ ಕಾರಣ ಸುಪಾರಿ ಹಿಂದೆ ಇಲ್ಲ, ರಾಜಕೀಯ ಕಾರಣವೇ ಸುಪಾರಿ ಹಿಂದೆ ಇದೆ. ನನಗೆ ನಿನ್ನೆ (ಮಂಗಳವಾರ) ಸಂಜೆ ಪೊಲೀಸರು ತಿಳಿಸಿದರು. ಈಗ ಚುನಾವಣೆ ಇದೆ, ರಾಜಕೀಯ ಕಾರಣಗಳೂ ಇರಬಹುದು, ಇದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ.

ಭದ್ರತೆ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನನಗೆ ಭದ್ರತೆ ಬೇಡ ಅಂದಿದೀನಿ. ಇದಕ್ಕೆಲ್ಲಾ ನಾನು ಭಯ ಪಡಲ್ಲ, ಅಕ್ರಮವಾಗಿ ಹಣ ಸಂಪಾದನೆ ಮಾಡೋ ಉದ್ದೇಶವೂ ಇರಬಹುದು. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆರೋಪಿಗಳ ನನ್ನ ಚಲನವಲನ ಮೇಲೆ ಗಮನ ಇಟ್ಟಿದ್ರಂತೆ. ಅವರು ಎಲ್ಲೆಲ್ಲಿ ಓಡಾಡಿದಾರೆ, ಏನೇನು ಮಾಡಿದಾರೆ ಅಂತ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಎರಡು ಕೋಟಿ ರೂಪಾಯಿಗೆ ಸುಪಾರಿ ನೀಡಿದ್ದರು ಎಂಬ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಹೊಳಲ್ಕೆರೆಯಲ್ಲಿ ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ತಂಡ ಶಾಸಕನ ಹತ್ಯೆಗೆ 2 ಕೋಟಿಗೆ ಸುಪಾರಿ ಪಡೆದಿದ್ದರು ಎಂದು ತಿಳಿದು ಬಂದಿದ್ದು, ಬಂಧಿತ ಆರೋಪಿಗಳನ್ನು ಆಕಾಶ್, ಗಗನ್ ಎಂದು ಗುರುತಿಸಲಾಗಿದೆ.
ಇನ್ನೂ ಪ್ರಕರಣದಲ್ಲಿ ಸುಪಾರಿ ಪಡೆದಿದ್ದ ಪ್ರಮುಖ ಆರೋಪಿ ವಿಲ್ಸನ್ ಗಾರ್ಡನ್ ನಾಗನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸುಪಾರಿ ಪಡೆದು ಶಾಸಕ ಸತೀಶ್ ರೆಡ್ಡಿ ಅವರ ಚಲನವಲನದ ಮೇಲೆ ನಿಗಾ ಇಡುತ್ತಿದ್ದ ವೇಳೆಯೇ ವಿಷಯ ಬಹಿರಂಗಗೊಂಡಿದ್ದು, ಆರೋಪಿಗಳನ್ನ ಪೋಲಿಸರು ಬಂದಿಸಿದ್ದಾರೆ.












Click it and Unblock the Notifications