ಡಿಕೆಶಿಗೆ ಬಿಗ್ ಶಾಕ್: ಮುಂದಿನ ಸಿಎಂ ಬಗ್ಗೆ ಹಾಲುಮತದ ಗೊರವಯ್ಯ ಸ್ಫೋಟಕ ಭವಿಷ್ಯ
ಬೆಂಗಳೂರು, ಮಾರ್ಚ್ 27: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗಳು ಆಗುತ್ತಿದ್ದು, ವಿಪಕ್ಷಗಳ ಜೊತೆಗಿನ ರಾಜಕೀಯಕ್ಕಿಂತ ಪಕ್ಷ ಪಕ್ಷದೊಳಗಿನ ಗುದ್ದಾಟಗಳೇ ಹೆಚ್ಚಾಗಿದೆ. ಬಿಜೆಪಿಯಲ್ಲಿ ನಿನ್ನೆ ಮಹತ್ವದ ಬೆಳವಣಿಗೆ ಆಗಿದ್ದು, ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಉಚ್ಛಾಟನೆ ಮಾಡಲಾಗಿದೆ. ಇತ್ತ ಆಡಳಿತಾರೂಢ ಕಾಂಗ್ರೆಸ್‌ನಲ್ಲಿಯೂ ಕೂಡ ಪಕ್ಷದೊಳಗಿನ ಜಟಾಪಟಿ ಜೋರಾಗಿದೆ.
ಸದ್ಯ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆಯುತ್ತಿದ್ದು, ಸಿಎಂ ಬದಲಾವಣೆಯ ಬಗ್ಗೆ ಚರ್ಚೆಗಳು ಜೋರಾಗಿದೆ. ಒಂದು ರೀತಿಯಲ್ಲಿ ಇದು ತಣ್ಣಗಾದದ ವಿಚಾರದಂತಾಗಿದೆ.

ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ರುಚಿ ತೋರಿಸಿ ಕಾಂಗ್ರೆಸ್ ಜಯಸಾಧಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಭಾರೀ ಸಂಚಲನ ಮೂಡಿಸಿತ್ತು. ಕೊನೆಗೆ ಹೈಕಮಾಂಡ್ ನಿರ್ಧಾರದ ಮೇಲೆ, ಪಕ್ಷದ ನಾಯಕರ ಒಪ್ಪಿಗೆ ಮೇರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಇದೀಗ ಸಿದ್ದರಾಮಯ್ಯ ಸಿಎಂ ಆಗಿ ಎರಡು ವರ್ಷಗಳು ಕಳೆಯುತ್ತಿದ್ದಂತೆ ಮತ್ತೆ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಜೋರಾಗಿದೆ.
ಮುಂದಿನ ಸಿಎಂ ಸ್ಥಾನಕ್ಕಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಅನೇಕ ಹಿರಿಯ ನಾಯಕರು ರೇಸ್‌ನಲ್ಲಿದ್ದಾರೆ. ಅವರ ಬೆಂಬಲಿಗರು ಆಗಾಗ ಈ ವಿಚಾರದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅತ್ತ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮುಂದಿನ ದಿನಗಳಿಗೂ ನಾನೇ ಸಿಎಂ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಐದು ವರ್ಷಗಳನ್ನು ಪೂರೈಸಲಿದ್ದು, ಐದು ವರ್ಷದ ಆಡಳಿತಕ್ಕೆ ನಾನೇ ಮುಖ್ಯಮಂತ್ರಿ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೂ ಕೂಡ ಸಿಎಂ ಬದಲಾವಣೆಯ ಚರ್ಚೆಗಳು ನಡೆಯುತ್ತಲೇ ಇರುತ್ತದೆ.
ಸಿಎಂ ಕುರ್ಚಿ ವಿಚಾರ ಚರ್ಚೆಯಲ್ಲಿರುವುದರಿಂದ ಅನೇಕರು ಈ ಬಗ್ಗೆ ಭವಿಷ್ಯ ನುಡಿದಿದ್ದು, ಇದೀಗ ಹಾಲುಮತದ ಗೊರವಯ್ಯ ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರಿಗೆ ಮಾತ್ರವಲ್ಲ ಸಿಎಂ ಸ್ಥಾನದ ನಿರೀಕ್ಷೆಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಂಬಲಿಗರಿಗೂ ಕೂಡ ಶಾಕ್ ಆಗಿದೆ.

ಹೌದು ಹಾಲುಮತದ ಗೊರವಯ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್‌ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಭಾಗ್ಯ ಸಿಗಲಿದೆ ಎಂದು ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ತುಮಕೂರಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮೂವರು ಹಾಲುಮತದ ಗೊರವಯ್ಯ ಆಕಸ್ಮಿಕವಾಗಿ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರದಲ್ಲಿ ಸಿಎಂ ಕುರ್ಚಿಯಿಂದ ಇಳಿದು, ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದು, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾಗಣ್ಣ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಹಾಲುಮತದ ಗೊರವಯ್ಯ ಕಾರ್ಣಿಕ ಭವಿಷ್ಯ ಕೇಳುತ್ತಿದ್ದಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಬೆಂಬಲಿಗರಿಗೆ ಖುಷಿಯಾಗಿದ್ದು, ಸದ್ಯ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.












Click it and Unblock the Notifications