ಅಂತರ ಜಿಲ್ಲಾ ಪೊಲೀಸ್ ವರ್ಗವಣೆಗೆ ಅವಕಾಶ; ಸಚಿವರ ಮಾಹಿತಿ
ಬೆಂಗಳೂರು, ಡಿಸೆಂಬರ್ 15; ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಅಂತರ ಜಿಲ್ಲಾ ವರ್ಗಾವಣೆ ಬಗ್ಗೆ ಕರ್ನಾಟಕ ಸರ್ಕಾರ ಮಾಹಿತಿ ನೀಡಿದೆ. ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಗೃಹ ಸಚಿವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, "ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೇವೆ ಸಲ್ಲಿಸುವ ಸ್ಥಳದಲ್ಲಿ ಒಂದು ವರ್ಷದ ಸೇವಾ ಅವಕಾಶವನ್ನು ನೀಡಲಾಗಿದೆ. ಅಪರಾಧ ಪ್ರಕರಣಗಳ ಪತ್ತೆ ಹಾಗೂ ಅಪರಾಧಿಗಳನ್ನು ಗುರುತಿಸಿ ಕ್ರಮವಹಿಸುವಲ್ಲಿ ಈ ಒಂದು ವರ್ಷ ಸಿಬ್ಬಂದಿಗಳಿಗೆ ಸಾಕಾಗುವುದಿಲ್ಲ. ಅವರ ಪರಿಣಾಮಕಾರಿ ಕರ್ತವ್ಯಕ್ಕೆ ಅನುಕೂಲವಾಗಲು ಕನಿಷ್ಠ ಎರಡು ವರ್ಷಗಳವರೆಗೆ ವರ್ಗಾವಣೆಯಿಂದ ವಿನಾಯಿತಿ ನೀಡಬೇಕು. ಈ ಕುರಿತು ಪೊಲೀಸ್ ಇಲಾಖೆ ನಿಯಮಗಳಿಗೆ ತಿದ್ದುಪಡಿ ತರಬೇಕೆಂದು" ಎಂದರು.
ಸಚಿವರ ಉತ್ತರ; ಸಚಿವರು ಉತ್ತರ ನೀಡಿ, "ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯ ಅವಧಿಯನ್ನು ಒಂದು ವರ್ಷದ ಬದಲಾಗಿ 2 ವರ್ಷಕ್ಕೆ ಹೆಚ್ಚಿಸುವ ಮನವಿಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸುತ್ತಿದ್ದು, ಕ್ರಮವಹಿಸಲಿದೆ" ಎಂದರು.
"ಪೊಲೀಸ್ ಸಿಬ್ಬಂದಿಗಳ ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಈ ಕುರಿತು ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ" ಎಂದು ಹೇಳಿದರು.
ಎರಡು ದಿನಗಳ ಹಿಂದೆ ವಿಧಾನಸಭೆಯಲ್ಲಿ ಮಂಡ್ಯದ ಶಾಸಕ ರವಿಕುಮಾರ ಗೌಡ (ಗಣಿಗ) ಸಹ ಪೊಲೀಸ್ ವರ್ಗಾವಣೆ ಬಗ್ಗೆ ಪ್ರಶ್ನಿಸಿದ್ದರು. ಆಗ ಗೃಹ ಸಚಿವ ಡಾ. ಜಿ. ಪರಮೇಶ್ವರ ಉತ್ತರ ನೀಡಿದ್ದರು. ಶಾಸಕರು ರಾಜ್ಯ ಪೊಲೀಸ್ ಇಲಾಖೆಯಲ್ಲಿ 'ಸಿ' ಮತ್ತು 'ಡಿ' ಗ್ರೂಪಿನ ಸಿಬ್ಬಂದಿಗಳಿಗೆ ಕೆಸಿಎಸ್‌ಆರ್ ನಿಯಮ 16ಎ ಅಂತರ್ ಜಿಲ್ಲಾ ವರ್ಗಾವಣೆ ಮಾಡಲು ನಿಯಮ ಇರುವ ಮಾನದಂಡಗಳೇನು? ಎಂದು ಪ್ರಶ್ನಿಸಿದ್ದರು.
ಸಚಿವರು ಸರ್ಕಾರದ ಅಧಿಸೂಚನೆ ದಿನಾಂಕ 9/3/2023ರಲ್ಲಿ ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ಕ್ಕೆ ನಿಯಮ 16ಎ ಅನ್ನು ಸೇರ್ಪಡೆಗೊಳಿಸಲಾಗಿದೆ. ಅದರ ಪ್ರಕಾರ ಪತಿ-ಪತ್ನಿ ಇಬ್ಬರೂ ಸರ್ಕಾರಿ ಸೇವೆಯಲ್ಲಿ ಇರುವ ಪ್ರಕರಣಗಳಿಗೆ ಮಾತ್ರ ಗುಂಪು ಸಿ ಅಥವಾ ಡಿ ಸೇವೆಗೆ ಸೇರಿದ ಒಬ್ಬ ಸದಸ್ಯರನ್ನು ಮತ್ತು ಈ ಅಡಿಯಲ್ಲಿ ಪತಿ ಅಥವಾ ಪತ್ನಿ ಇವರಲ್ಲಿ ಯಾರಾದರೊಬ್ಬರಿಂದ ಕೋರಿಕೆ ಬಂದಲ್ಲಿ ಹುದ್ದೆಯ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕದಲ್ಲಿನ ಅದೇ ಕೇಡರಿನ ಸಮಾನ ಹುದ್ದೆಗೆ ಷರತ್ತಿಗೆ ಒಳಪಟ್ಟು ವರ್ಗಾವಣೆ ಮಾಡಬಹುದಾಗಿರುತ್ತದೆ. ಆದರೆ ಇದಕ್ಕೆ ಕೆಲವು ಷರತ್ತುಗಳಿವೆ ಎಂದು ಹೇಳಿದ್ದರು.
ಸರ್ಕಾರಿ ನೌಕರನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಕನಿಷ್ಟ 7 ವರ್ಷ ಸೇವೆಯನ್ನು ಪೂರ್ಣಗೊಳಿಸಿರಬೇಕು. ವರ್ಗಾಯಿಸಬೇಕಾದ ಘಟಕ ಅಥವಾ ಸ್ಥಳದಲ್ಲಿ ಮಂಜೂರಾದ ಹುದ್ದೆಯು ಖಾಲಿರತಕ್ಕದ್ದು. ಅಂತಹ ವರ್ಗಾವಣೆಯನ್ನು ಒಂದು ಕೇಡರ್‌ನಿಂದ ಮತ್ತೊಂದು ಕೇಡರಿಗೆ ಮಾಡತಕ್ಕದ್ದಲ್ಲ ಎಂದು ಸಚಿವರು ಷರತ್ತುಗಳ ವಿವರಣೆ ನೀಡಿದ್ದರು.
ವರ್ಗಾವಣೆಯನ್ನು ಸರ್ಕಾರಿ ನೌಕರನ ಕೋರಿಕೆ ಮೇಲೆ ಅವರ ಜೇಷ್ಠತೆಯನ್ನು ಮಾಡಿರುವುದರಿಂದ ವರ್ಗಾವಣೆಗೊಂಡ ಘಟಕದಲ್ಲಿನ ಕೇಡರ್‌ನ ಕೊನೆಯ ವ್ಯಕ್ತಿಯ ಕೆಳಗಿರಿಸತಕ್ಕದ್ದು. ವರ್ಗಾವಣೆಯನ್ನು ಸರ್ಕಾರಿ ನೌಕರನ ಸೇವೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮಾಡತಕ್ಕುದಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದರು.
ಸಚಿವರು ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾದ ವರ್ಗಾವಣೆ ಪೋರ್ಟಲ್‌ನ್ನು ರೂಪಿಸಲಾಗಿರುತ್ತದೆ. ಈ ಪೋರ್ಟಲ್‌ನಲ್ಲಿ ಅಧಿಕಾರಿ/ ಸಿಬ್ಬಂದಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿರುತ್ತದೆ ಎಂದು ಮಾಹಿತಿ ನೀಡಿದ್ದರು.
ಈ ಹಿಂದೆ ಪತಿ-ಪತ್ನಿ ಪ್ರಕರಣದಡಿ ಎರಡೂವರೆ ವರ್ಷ ಖಾಯಂ ಪೂರ್ವ ಸೇವಾ ಪೂರ್ಣಗೊಳಿಸಿದ ಸಿಬ್ಬಂದಿಗಳಿಗೆ ವರ್ಗಾವಣೆ ಮಾಡುವ ನಿಯಮಾವಳಿಯನ್ನು 7 ವರ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಕೇಳಿದ್ದರು.
ಸಚಿವರು ಪತಿ-ಪತ್ನಿ ಪ್ರಕರಣದಡಿ ಈ ಹಿಂದೆ ನಿಗಧಿಪಡಿಸಲಾಗಿದ್ದ ಕನಿಷ್ಠ ಸೇವಾ ಅವಧಿಯನ್ನು 07 ವರ್ಷಗಳಿಗೆ ಹೆಚ್ಚಳ ಮಾಡಿ ನಿಗಧಿಪಡಿಸಿರುವ ಸಂಬಂಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಮತ್ತು ಜನ ಪ್ರತಿನಿಧಿಗಳಿಂದ ಮನವಿಗಳು ಸ್ವೀಕೃತವಾಗಿದ್ದು, ಪರಿಶೀಲಿಸಲಾಗುತ್ತಿರುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದರು.












Click it and Unblock the Notifications