ಡಿಸೆಂಬರ್ ವೇಳೆಗೆ 2 ಲಕ್ಷ ಜಮೀನುಗಳಿಗೆ ಪೋಡಿ ಭಾಗ್ಯ, 30 ಲಕ್ಷ ರೈತರಿಗೆ ಅನುಕೂಲ!
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ರೈತರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ರೈತರಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಸರಳೀಕೃತ ದರ್ಖಾಸ್ತು ಪೋಡಿ "ನನ್ನ ಭೂಮಿ" ಗ್ಯಾರಂಟಿ ಅಭಿಯಾನ ವೇಗ ಪಡೆದುಕೊಂಡಿದ್ದು, ಈವರೆಗೆ ಕೇವಲ 8 ತಿಂಗಳಲ್ಲಿ 1,09,000 ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದೆ. ಮುಂದಿನ ಡಿಸೆಂಬರ್ ಒಳಗಾಗಿ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರು ವರ್ಷಕ್ಕೆ ಕೇವಲ 5,801 ಪ್ರಕರಣಗಳಲ್ಲಿ ಮಾತ್ರ ರೈತರಿಗೆ ಪೋಡಿ ದುರಸ್ತಿ ಮಾಡಿಕೊಡಲಾಗಿತ್ತು. ಆದರೆ, ಪ್ರಸ್ತುತ ಕಳೆದ ಡಿಸೆಂಬರ್‌ನಲ್ಲಿ ನನ್ನ ಭೂಮಿ ಹೆಸರಿನಲ್ಲಿ ಪೋಡಿ ಅಭಿಯಾನ ಕೈಗೊಂಡಿದ್ದು, ಕೇವಲ 9 ತಿಂಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದೆ. ಇನ್ನೂ 50 ರಿಂದ 70 ಸಾವಿರ ಪೋಡಿ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದ್ದು, ಮುಂದಿನ ಡಿಸೆಂಬರ್ ಒಳಗೆ 2 ಲಕ್ಷ ಪ್ರಕರಣಗಳಲ್ಲಿ ರೈತರಿಗೆ ದರ್ಖಾಸ್ತು ಪೋಡಿ ಮಾಡಿಕೊಡಲಾಗುವುದು. ಇದರಿಂದ ಕನಿಷ್ಠ 7 ಲಕ್ಷ ಕುಟುಂಬಗಳಿಗೆ, 30 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಮೂರು-ನಾಲ್ಕು ದಶಕಗಳ ಹಿಂದೆ ರೈತರಿಗೆ ಮಂಜೂರಾಗಿದ್ದ ಜಮೀನಿಗೆ ಈವರೆಗೆ ಪೋಡಿ ಆಗಿಲ್ಲ. ಇದರಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿಯೇ "ನನ್ನ ಭೂಮಿ" ಹೆಸರಿನಲ್ಲಿ ಪೋಡಿ ಅಭಿಯಾನ ಆರಂಭಿಸಲಾಯಿತು. ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಪೋಡಿ ಮಾಡಿಕೊಡುತ್ತಿದೆ. ಹಿಂದೆ ಮಂಜೂರಾಗಿದ್ದ ಜಮೀನಿಗೆ ಪಕ್ಕಾ ದಾಖಲೆಗಳನ್ನು ಅವರ ಕೈಗೆ ಕೊಟ್ಟು ಅವರ ಭೂ ಮಾಲೀಕತ್ವಕ್ಕೆ ಗ್ಯಾರಂಟಿ ನೀಡುವುದು ಈ ಕಾರ್ಯಕ್ರಮದ ವಿಶೇಷ ಎಂದು ವಿವರಿಸಿದ್ದಾರೆ.
1.62 ಲಕ್ಷ ಮಂದಿಗೆ ಹಕ್ಕುಪತ್ರ
ಹಾಡಿ, ಹಟ್ಟಿ, ತಾಂಡಾ, ಮಜರೆ ಗ್ರಾಮಗಳನ್ನ ಕಂದಾಯ ಗ್ರಾಮಗಳಾಗಿ ಘೋಷಿಸದ ಕಾರಣ ದಶಕಗಳಿಂದಲೂ ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಇಂತಹ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಮಾಡಲಾಗುತ್ತಿದೆ. ಹಿಂದಿನ ಅವಧಿಯಲ್ಲಿ ಕೇವಲ 2,626 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿತ್ತು. 1,500 ಗ್ರಾಮಗಳನ್ನು ಮಾತ್ರ ಕಂದಾಯ ಗ್ರಾಮ ಎಂದು ಘೋಷಿಸಲಾಗಿತ್ತು. 2023ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 4,250 ಅರ್ಹ ದಾಖಲೆ ರಹಿತ ಜನ ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಡಿಸೆಂಬರ್ ತಿಂಗಳ ಒಳಗೆ ಇಷ್ಟೂ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ 8,357 ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ದಶಕಗಳಿಂದ ಕಚೇರಿಯೇ ಇರಲಿಲ್ಲ. ಒಂದೆಡೆ ಗ್ರಾಮ ಲೆಕ್ಕಾಧಿಕಾರಿಗಳು (ವಿಎ) ಕೈಗೇ ಸಿಗಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದರೆ, ಮತ್ತೊಂದೆಡೆ ತಮಗೆ ಕಚೇರಿ ಸೌಲಭ್ಯ ಬೇಕು ಎಂದು ವಿಎ ಗಳು ಸಹ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಜೊತೆ ಚರ್ಚಿಸಿ ಕೇವಲ ನಾಲ್ಕು ತಿಂಗಳಿನಲ್ಲಿ 7,405 ವಿಎಗಳಿಗೆ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಕಚೇರಿ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಫೌತಿ ಖಾತೆ ಅಭಿಯಾನಕ್ಕೆ ವೇಗ
ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಮುಂದುವರೆಯುತ್ತಿದೆ. ಇದರಲ್ಲಿ ಯಾವುದೆಲ್ಲ ಸಾಧ್ಯವಿದೆ ಆ ಎಲ್ಲವನ್ನೂ ಫೌತಿ ಖಾತೆ ಅಭಿಯಾನದ ಮೂಲಕ ಈಗಿನ ವಾರಸುದಾರರ ಹೆಸರಿಗೆ ಬದಲಿಸುವ ಪ್ರಕ್ರಿಯೆಗೆ ವೇಗ ತುಂಬುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ. ಹೀಗಾಗಿ ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನ ಮಾದರಿಯಲ್ಲಿ ಫೌತಿ ಖಾತೆ ಮಾಡಿಕೊಡುತ್ತಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಈವರೆಗೆ 2.30 ಲಕ್ಷ ಜಮೀನುಗಳನ್ನು ಫೌತಿ ಖಾತೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ತುಂಬಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇ-ಫೌತಿ ಆಂದೋಲನದಲ್ಲಿ ಪ್ರಗತಿ ಸಾಧಿಸುವ ಗ್ರಾಮಲೆಕ್ಕಿಗರಿಗೆ ಪ್ರತಿ ಫೌತಿ ಪ್ರಕರಣಕ್ಕೆ 6 ರೂಪಾಯಿ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.












Click it and Unblock the Notifications