ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದೀರಾ? ಈ ದಿನ ದೇವರ ದರ್ಶನ ಇರುವುದಿಲ್ಲ...
ಅಕ್ಟೋಬರ್ 28ರಂದು ರಾತ್ರಿ 2023ನೇ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣ ಪ್ರಯುಕ್ತ ಕುಕ್ಕೆ ಸೇರಿದಂತೆ ರಾಜ್ಯದ ಹಲವಾರು ಪ್ರಮುಖ ದೇವಸ್ಥಾನದಲ್ಲಿನ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಅಕ್ಟೋಬರ್ 28-29ರ ಮಧ್ಯರಾತ್ರಿ ಚಂದ್ರಗ್ರಹಣ ಸಂಭವಿಸುತ್ತದೆ. ಅಕ್ಟೋಬರ್ 28 ರಂದು ಮಧ್ಯಾಹ್ನ 2:52ಕ್ಕೆ ಸೂತಕ ಸಮಯ ಆರಂಭವಾಗುತ್ತದೆ. ಅಕ್ಟೋಬರ್ 29ರಂದು ಬೆಳಿಗ್ಗೆ 2:22ಕ್ಕೆ ಸೂತಕ ಸಮಯ ಕೊನೆಗೊಳ್ಳುತ್ತದೆ. ನಂಬಿಕೆಗಳ ಪ್ರಕಾರ ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಧಾರ್ಮಿಕ ಆಚರಣೆಗಳೂ ಇರುವುದಿಲ್ಲ. ದೇವರ ವಿಗ್ರಹಗಳನ್ನು ಮುಟ್ಟುವುದಿಲ್ಲ. ಈ ಅವಧಿಯಲ್ಲಿ ಪೂಜಾ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ. ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಹೀಗಾಗಿ ಕುಕ್ಕೆ ಸೇರಿದಂತೆ ಹಲವಾರು ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಶನಿವಾರದಂದು ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ಮಕ್ತಾಯವಾಗಲಿದೆ. ಅಕ್ಟೋಬರ್ 28ರ ಸಂಜೆ ಶನಿವಾರ ಸಂಜೆ 6.30ರ ಬಳಿಕ ದೇವರ ದರ್ಶನ ಬಂದ್ ಮಾಡಲಾಗುತ್ತದೆ. ಶನಿವಾರ ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಆಗಿರುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಪ್ರಕರಣೆಯಲ್ಲಿ ತಿಳಿಸಿದೆ.
ತಿರುಮಲ ದೇವಸ್ಥಾನ ಮುಚ್ಚುವ ಸಮಯ (ಅಕ್ಟೋಬರ್ 28)
ಚಂದ್ರಗ್ರಹಣ ಪ್ರಯುಕ್ತ ತಿರುಪತಿ ತಿರುಮಲ ದೇವಸ್ಥಾನವನ್ನು ಅಕ್ಟೋಬರ್ 28ರಂದು ಸಂಜೆ 7:05 ಗಂಟೆಗೆ ಮುಚ್ಚಲಾಗುತ್ತದೆ ಅಕ್ಟೋಬರ್ 29ರಂದು ಬೆಳಗ್ಗೆ 3:15ಕ್ಕೆ ತೆರೆಯಲಾಗುತ್ತದೆ.
ಚಂದ್ರಗ್ರಹಣದಲ್ಲಿ ದೇವಾಲಯಗಳನ್ನು ಏಕೆ ಮುಚ್ಚಲಾಗುತ್ತದೆ?
ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ಚಂದ್ರಗ್ರಹಣದ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಗ್ರಹಣ ನಕಾರಾತ್ಮಕ ಶಕ್ತಿ ಹರಡುತ್ತದೆ. ಇದರಿಂದಾಗಿ ದೇವಾಲಯವನ್ನು ಮುಚ್ಚಲಾಗುತ್ತದೆ.

ಗ್ರಹಣದ ಸಮಯದಲ್ಲಿ ಗ್ರಹಗಳು ಅಸಮತೋಲನಗೊಂಡಿರುತ್ತವೆ ಎಂದು ನಂಬಲಾಗುತ್ತದೆ. ಇದು ದೇವಾಲಯದ ಶಕ್ತಿ ಮತ್ತು ಶುದ್ಧತೆಯ ಮೇಲೆ ಪರಿಣಾಮ ಬೀರುತ್ತದೆ. ದೇವಾಲಯಗಳನ್ನು ಭಕ್ತರು ದೇವರು/ದೇವತೆಗಳೊಂದಿಗೆ ಸಂಪರ್ಕಿಸಬಹುದಾದ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ಗ್ರಹಣದ ಸಮಯದಲ್ಲಿ ದೇವಾಲಯದೊಳಗೆ ನಕಾರಾತ್ಮಕ ಶಕ್ತಿ ಹರಡಿ ಅಶುದ್ಧವಾಗುತ್ತದೆ. ಈ ವೇಳೆ ಪೂಜೆಯನ್ನು ಮಾಡಲಾಗುವುದಿಲ್ಲ. ಹಾಗಾಗಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ.
ಮೂಲಭೂತವಾಗಿ ದೇವಾಲಯಗಳು ಕೇವಲ ದೇವರಿಗೆ ಮೀಸಲಾದ ಸ್ಥಳವಲ್ಲ. ಬದಲಾಗಿ ಶುದ್ಧ ಅರಿವನ್ನು ಪ್ರಶಾಂತತೆಯನ್ನು ಅನುಭವಿಸುವ ಸ್ಥಳಗಳಾಗಿವೆ. ಆಳವಾದ ಪ್ರಾರ್ಥನೆಯ ಮೂಲಕ ಜೀವನದಲ್ಲಿ ದೈವಿಕ ಅಂಶವನ್ನು ಪಡೆಯುವ ಸ್ಥಳವಾಗಿದೆ.
ದೇವಸ್ಥಾನ ಕೆಲವು ಸೂಕ್ಷ್ಮ ಶಕ್ತಿಯ ಹರಿವನ್ನು ಸೃಷ್ಟಿಸುತ್ತದೆ. ಇದು ದೇವಾಲಯದ ಒಳಗೆ ಆತ್ಮದೊಳಗಿನ ದೈವತ್ವವನ್ನು ಅನುಭವಿಸಲು ಭಕ್ತರನ್ನು ಶಕ್ತಗೊಳಿಸುತ್ತದೆ. ವಿಧ್ಯುಕ್ತವಾಗಿ ಮತ್ತು ವಿಧಿವತ್ತಾಗಿ ಸ್ಥಾಪಿಸಲಾದ ದೇವಾಲಯದ ವಿಗ್ರಹವು ನಿರಂತರವಾಗಿ ಧನಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ. ಇದಕ್ಕೆ ಗ್ರಹಣ ಅಡ್ಡಿಯನ್ನುಂಟು ಮಾಡುತ್ತದೆ ಎನ್ನುವ ನಂಬಿಕೆ ಇದೆ.












Click it and Unblock the Notifications