7th Pay Commission: ವಿಶೇಷ ಚೇತನ ಸರ್ಕಾರಿ ನೌಕರರಿಗೆ ಭತ್ಯೆಗಳು
ಬೆಂಗಳೂರು, ಅಕ್ಟೋಬರ್ 08: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಅನುಮೋದಿಸಲಾಗಿದೆ. ವರದಿಯಲ್ಲಿ ವಿಶೇಷ ಚೇತನ ನೌಕರರಿಗೆ ಭತ್ಯೆಗಳು ಕುರಿತು ಮಾಹಿತಿ ನೀಡಲಾಗಿದೆ, ಅಲ್ಲದೇ ಹಲವು ಶಿಫಾರಸುಗಳನ್ನು ಸಹ ಮಾಡಲಾಗಿದೆ. ವಿಶೇಷ ಚೇತನ ನೌಕರರಿಗೆ ಸಿಗುವ ವಿವಿಧ ಸೌಲಭ್ಯಗಳ ವಿವರ ಇಲ್ಲಿದೆ.
ದಿನಾಂಕ 31.03.2023ರಲ್ಲಿದ್ದಂತೆ ರಾಜ್ಯ ಸರ್ಕಾರದಲ್ಲಿ 12,520 ವಿಶೇಷ ಚೇತನ ನೌಕರರಿದ್ದಾರೆ. ಪ್ರಸ್ತುತ ವಿಶೇಷ ಚೇತನ ನೌಕರರಿಗೆ ಈ ಭತ್ಯೆಗಳನ್ನು ಮತ್ತು ಸೌಲಭ್ಯಗಳನ್ನು ವಿಸ್ತರಿಸಲಾಗಿದೆ.

* ಅಂಧ ಮತ್ತು ಚಲನ ವಲನ ವೈಕಲ್ಯತೆಯುಳ್ಳ ವಿಶೇಷ ಚೇತನ ನೌಕರರಿಗೆ ವಾಹನ ಭತ್ಯೆ
* ಚಲನ-ವಲನ ವೈಕಲ್ಯತೆಯುಳ್ಳ ವಿಶೇಷ ಚೇತನ ನೌಕರರಿಗೆ ವಿಶೇಷ ಯಾಂತ್ರೀಕೃತ ವಾಹನ/ ಮೋಟಾರ್ ಚಾಲಿತ ವಾಹನಗಳನ್ನು ಖರೀದಿಸಲು ಸಹಾಯಧನ.
* ರಾಜ್ಯ ಸರ್ಕಾರಿ ನೌಕರರ ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಭತ್ಯೆ
ವಿಶೇಷ ಚೇತನ ನೌಕರರ ಸಂಘಗಳಿಂದ ಮತ್ತು ವೈಯಕ್ತಿಕವಾಗಿ ನೌಕರರಿಂದ ಹೆಚ್ಚುವರಿ ಸೌಲಭ್ಯಗಳನ್ನು ಕೋರಿ ಹಲವಾರು ಬೇಡಿಕೆಗಳನ್ನು ಮತ್ತು ಸಲಹೆಗಳನ್ನು ಆಯೋಗವು ಸ್ವೀಕರಿಸಿದ್ದು, ಅವುಗಳಲ್ಲಿ ಹಲವು ಆಯೋಗದ ಪರಿಶೀಲನಾರ್ಹ ಅಂಶಗಳ ವ್ಯಾಪ್ತಿಗೆ ಒಳಪಡದಿದ್ದರೂ ರಾಜ್ಯ ಸರ್ಕಾರದ ಮಾಹಿತಿ ಹಾಗೂ ಗಮನಕ್ಕಾಗಿ ಅವುಗಳನ್ನು ಪಟ್ಟಿ ಮಾಡಲಾಗಿದೆ. ಕೆಲವು ಪ್ರಮುಖ ಬೇಡಿಕೆಗಳು
* ವಾಹನ ಭತ್ಯೆಯನ್ನು ಕೇವಲ ಅಂಧ ಮತ್ತು ಚಲನ-ವಲನ ವೈಕಲ್ಯತೆಯನ್ನು ಹೊಂದಿದವರಿಗೆ ಮಾತ್ರವಲ್ಲದೆ, ಭಾರತ ಸರ್ಕಾರದಲ್ಲಿರುವಂತೆ ಎದ್ದುಕಾಣುವ ಅಂಗವೈಕಲ್ಯವುಳ್ಳ ಎಲ್ಲಾ ವ್ಯಕ್ತಿಗಳಿಗೂ ಈ ಭತ್ಯೆಯನ್ನು ವಿಸ್ತರಿಸುವುದು.
* ವಾಹನ ಭತ್ಯೆಯನ್ನು ಲೆಕ್ಕ ಹಾಕಲು ಮೂಲ ವೇತನಕ್ಕೆ ತುಟ್ಟಿ ಭತ್ಯೆಯನ್ನು ಪರಿಗಣಿಸುವುದು.
* ವಾಹನ ಭತ್ಯೆಯ ಮಂಜೂರಾತಿಯ ವಿಳಂಬವನ್ನು ತಪ್ಪಿಸುವ ಸಲುವಾಗಿ ಇಲಾಖೆಯ ಮುಖ್ಯಸ್ಥರ ಬದಲಾಗಿ ವೇತನ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಯನ್ನು (ಡಿಡಿಓ) ವಾಹನ ಭತ್ಯೆ ಮಂಜೂರು ಮಾಡುವ ಪ್ರಾಧಿಕಾರವನ್ನಾಗಿ ನೇಮಕ ಮಾಡುವುದು.
* ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಿಂದ ವಿಶೇಷ ಚೇತನ ನೌಕರರಿಗೆ ವಿಶಿಷ್ಟ್ಯ ಅಂಗವಿಕಲತೆ ಗುರುತಿನ ಚೀಟಿ (ಯುಡಿಐಡಿ) ಯನ್ನು ನೀಡಿದ ನಂತರ ವಿಶೇಷ ಚೇತನ ನೌಕರರು ತಮ್ಮ ಅಂಗವಿಕಲತೆಯನ್ನು ಸಾಬೀತುಪಡಿಸಲು ಪುನ: ಯಾವುದೇ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಒಳಪಡದೆ ಇರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
* ಕೇಂದ್ರ ಸರ್ಕಾರದಲ್ಲಿರುವಂತೆ ಅಂಗವಿಕಲರಲ್ಲದ ಮಕ್ಕಳನ್ನು ನೋಡಿಕೊಳ್ಳಲು ವಿಶೇಷ ಚೇತನ ಮಹಿಳಾ ನೌಕರರಿಗೆ ವಿಶೇಷ ಭತ್ಯೆಯನ್ನು ವಿಸ್ತರಿಸುವುದು.
* ಆಧಾರ್ ಎನೇಬಲ್ಡ್ ಬಯೋಮೆಟ್ರಿಕ್ ಹಾಜರಾತಿ (AEBA) ಮೂಲಕ ಫ್ಲೆಕ್ಕಿ ಸಮಯವನ್ನು ಪರಿಚಯಿಸುವುದು, ಒಂದು ದಿನದ ಒಟ್ಟು ಕಾರ್ಯ ನಿರ್ವಹಣಾ ಅವಧಿಯನ್ನು ಲೆಕ್ಕ ಹಾಕುವಾಗ ಊಟದ ಸಮಯವನ್ನು ಪರಿಗಣಿಸುವುದು ಹಾಗೂ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಕರ್ತವ್ಯ ನಿರ್ವಹಣಾ ಅವಧಿಯಿಂದ ವಿನಾಯಿತಿ ನೀಡುವುದು.
* AEBA ಬಳಕೆಯಿರುವಲ್ಲಿ ಅಂಧ ನೌಕರರಿಗೆ ಇ ಹಾಜರಾತಿ ಸೌಲಭ್ಯವನ್ನು ಒದಗಿಸುವುದು. ಮಾನ್ಯತೆ ಪಡೆದ ಮತ್ತು ಸರ್ಕಾರದಿಂದ ಅನುದಾನಿತ ವಿಶೇಷ ಚೇತನ ಶಾಲೆಗಳ ಸಿಬ್ಬಂದಿಗೆ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವುದು.
* ಎಲ್ಲಾ ಇಲಾಖೆಗಳಲ್ಲಿ ವಿಶೇಷ ಚೇತನರಿಗಾಗಿ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸುವುದು.
* ವಿಶೇಷ ಚೇತನ ನೌಕರರಿಗಾಗಿ ಮತ್ತು ವಿಶೇಷ ಚೇತನ ಮಕ್ಕಳಿರುವ ನೌಕರರಿಗಾಗಿ ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳಿಗೆ/ ಸಮಾಲೋಚನೆಗೆ/ ಸಹಾಯಕ ಸಾಧನಗಳಿಗೆ ಹೊಂದಿಕೊಳ್ಳುವುದಕ್ಕೆ ಅಗತ್ಯತೆಯ ಆಧಾರದ ಮೇಲೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 4 ದಿನಗಳ ವಿಶೇಷ ರಜೆಯನ್ನು ಅನುಮತಿಸುವುದು.
* ದಿನನಿತ್ಯದ ಕಛೇರಿ ಕೆಲಸಗಳಲ್ಲಿ ಅವರಿಗೆ ಸಹಾಯಕವಾಗುವಂತಹ ಲ್ಯಾಪ್‌ಟಾಪ್‌ಗಳು, ತಾಂತ್ರಿಕ ಸಹಾಯಕಗಳು, ಎಐ ಆಧಾರಿತ ಸ್ಮಾರ್ಟ್ ಗ್ಲಾಸ್‌ಗಳು ಮತ್ತು ಇತರೆ ಉಪಕರಣಗಳನ್ನು ಬಳಕೆ ಮಾಡುವಲ್ಲಿ ಬೇಕಾಗುವ ತರಬೇತಿಗಾಗಿ 3 ತಿಂಗಳವರೆಗಿನ ವೇತನ ಸಹಿತ ರಜೆಯನ್ನು ವಿಸ್ತರಿಸುವುದು.
* ನಿವೃತ್ತಿ ಸೌಲಭ್ಯಗಳನ್ನು ಲೆಕ್ಕ ಹಾಕುವಾಗ ನೇಮಕಾತಿಯ ಸಂದರ್ಭದಲ್ಲಿ ನೀಡಲಾದ ವಯೋಮಿತಿ ಸಡಿಲಿಕೆಯ ಅವಧಿಯನ್ನು ಪರಿಗಣನೆಗೆ ತೆಗೆದುಕೊಳ್ಳುವುದು.
* ಎದ್ದು ಕಾಣುವ ಅಂಗವೈಕಲ್ಯತೆ (Benchmark disability) ಹೊಂದಿರುವ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ಎಲ್‌ಟಿಸಿ ಸೌಲಭ್ಯವನ್ನು ಪಡೆಯುವಾಗ ಎಲ್‌ಟಿಸಿ ನಿಯಮಗಳನ್ನು ಸಡಿಲಿಸಿ ಸ್ವಂತ ವಾಹನವನ್ನು ಬಳಕೆ ಮಾಡಲು ಅನುಮತಿಸುವುದು.
* ಇತರ ನೌಕರರಿಗೆ ಲಭ್ಯವಿರುವ ವರ್ಗಾವಣೆ ಅನುದಾನದ ಒಂದೂವರೆ ಪಟ್ಟು ಸಮನಾದ ಅನುದಾನವನ್ನು ವಿಶೇಷ ಚೇತನ ನೌಕರರಿಗೆ ಅನುಮತಿಸುವುದು.
* ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯದ ಅಡಿಯಲ್ಲಿರುವ ಎದ್ದುಕಾಣುವ ಅಂಗವೈಕಲ್ಯವುಳ್ಳ ವ್ಯಕ್ತಿಗಳಿಗಾಗಿ ಇರುವ ವಿಶೇಷ ಶಾಲೆಗಳಿಗೆ ನೇಮಕಗೊಳ್ಳುವ ಶಿಕ್ಷಕರಿಗೆ ಈ ಹಿಂದೆ ಚಾಲ್ತಿಯಲ್ಲಿದ್ದಂತೆ ವೇತನ ಶ್ರೇಣಿಗಳಲ್ಲಿ ಸಮಾನತೆಯನ್ನು ಪುನರ್ ಸ್ಥಾಪಿಸುವುದು.












Click it and Unblock the Notifications