ಸಕಲೇಶಪುರದಲ್ಲಿ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ
ಸಕಲೇಶಪುರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇಗುಲದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ತೊಡಗಿದ್ದ ಫೋಟೋಗ್ರಾಫರ್‌ಗಳ ತಂಡದ ಮೇಲೆ ಸ್ಥಳೀಯ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಧ್ವಂಸಗೊಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾಸನ ಮೂಲದ ಫೋಟೋಗ್ರಾಫರ್ ನವೀನಂದನ್ ತಮ್ಮ ಸಹೋದ್ಯೋಗಿ ಚೇತನ್ ಮತ್ತು ಮದುವೆಯಾಗಲಿರುವ ಜೋಡಿಯೊಂದಿಗೆ ಬೆಳಿಗ್ಗೆ 7:30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ್ದರು. ಇದೇ ವೇಳೆ ಬೆಂಗಳೂರಿನಿಂದ ಬಂದಿದ್ದ ಅಭಿಷೇಕ್ ಮತ್ತು ಯಶ್ವಂತ್ ಅವರ ತಂಡವೂ ಅಲ್ಲಿಗೆ ತಲುಪಿತ್ತು. ಈ ಸಂದರ್ಭದಲ್ಲಿ ಮರುಬೈಲು ಗ್ರಾಮದ ಅಭಿ ಎಂಬಾತ ಸಣ್ಣ ವಿಷಯಕ್ಕೆ ಬೆಂಗಳೂರಿನ ತಂಡದ ಜೊತೆ ಕಿರಿಕ್ ತೆಗೆದು, ಯಶ್ವಂತ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.

ನಂತರ ವಿವಾದ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಆರೋಪಿ ಅಭಿ ತನ್ನ 7-8 ಸಹಚರರೊಂದಿಗೆ ಎರಡು ಕಾರುಗಳಲ್ಲಿ ಸ್ಥಳಕ್ಕೆ ಮರಳಿದ್ದಾನೆ. ಪ್ರಶಾಂತ್, ರಕ್ಷಯ್, ಅರವಿಂದ್, ಉಚಿತ್, ಪ್ರಜ್ವಲ್ ಮತ್ತು ನಿಶಾಂತ್ ಎಂಬುವವರನ್ನೊಳಗೊಂಡ ಈ ಗ್ಯಾಂಗ್, ಮರದ ದೊಣ್ಣೆ ಮತ್ತು ಕಲ್ಲುಗಳಿಂದ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ನಡೆಸಿದೆ. ಅವರು ನನ್ನ ಕುತ್ತಿಗೆ ಪಟ್ಟಿ ಹಿಡಿದು ಉಸಿರುಗಟ್ಟಿಸಲು ಪ್ರಯತ್ನಿಸಿದರು ಮತ್ತು ನನ್ನ ಚಿನ್ನದ ಸರವನ್ನು ಕಿತ್ತುಕೊಂಡರು. ಅಷ್ಟೇ ಅಲ್ಲದೆ, ನನ್ನ ಬಳಿಯಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ನೆಲಕ್ಕೆ ಅಪ್ಪಳಿಸಿ ಪುಡಿಪುಡಿ ಮಾಡಿದರು ಎಂದು ನವೀನಂದನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರಿಂದ ಕೇಸ್ ದಾಖಲು
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಫೋಟೋಗ್ರಾಫರ್‌ಗಳು ಸದ್ಯ ಸಕಲೇಶಪುರ ಸರ್ಕಾರಿ ಆಸ್ಪತ್ರೆ ಹಾಗೂ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನುಬಾಹಿರ ಗುಂಪು ಸೇರುವಿಕೆ, ಗಲಭೆ, ಹಲ್ಲೆ, ಪ್ರಾಣ ಬೆದರಿಕೆ ಹಾಗೂ ಆಸ್ತಿ ಹಾನಿ ಸೇರಿದಂತೆ ಹಲವು ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆಯು ಸ್ಥಳೀಯ ಹಾಗೂ ರಾಜ್ಯದ ಫೋಟೋಗ್ರಾಫರ್‌ಗಳ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರವಾಸಿ ತಾಣಗಳಲ್ಲಿ ಫೋಟೋಗ್ರಾಫರ್‌ಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಫೋಟೋಗ್ರಾಫರ್‌ಗಳ ಸಂಘ ಒತ್ತಾಯಿಸಿದೆ.
ರಾಜಕೀಯ ತಿರುವು
ಹಲ್ಲೆ ಪ್ರಕರಣವು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಲ್ಲೆ ನಡೆಸಿದ ಆರೋಪಿಗಳ ಪರವಾಗಿ ಕೆಲವು ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಬೆಂಬಲಕ್ಕೆ ನಿಂತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಹಾಗೂ ಸ್ಥಳೀಯ ಮೂಲಗಳ ಪ್ರಕಾರ, ಈ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಸಂತ್ರಸ್ತ ಫೋಟೋಗ್ರಾಫರ್‌ಗಳ ಮೇಲೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಸುಮಾರು 10ರಿಂದ 15 ಲಕ್ಷ ರೂಪಾಯಿಗಳ ಹಣದ ಆಮಿಷವನ್ನೂ ಒಡ್ಡಲಾಗಿದೆ ಎಂದು ವರದಿಯಾಗಿದೆ.

ಹಲ್ಲೆ ನಡೆಸಿದ ತಂಡದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ತಾವು ಬಿಜೆಪಿ, ಆರ್‌ಎಸ್‌ಎಸ್ (RSS) ಹಾಗೂ ಬಜರಂಗದಳದ ಕಾರ್ಯಕರ್ತರು ಎಂದು ಹೇಳಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಷಯವನ್ನು ದೊಡ್ಡದು ಮಾಡಬೇಡಿ, ಸಂಘಟನೆಯ ಹಿತದೃಷ್ಟಿಯಿಂದ ಇಲ್ಲೇ ಇತ್ಯರ್ಥ ಮಾಡಿಕೊಳ್ಳೋಣ ಎಂದು ಹಲ್ಲೆಗೊಳಗಾದವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ ಎನ್ನಲಾಗಿದೆ. ಹಣದ ಆಸೆ ತೋರಿಸಿ ಪ್ರಕರಣ ಮುಚ್ಚಿಹಾಕಲು ಹೊರಟಿರುವವರಿಗೆ ಮಾನವೀಯತೆ ಇಲ್ಲವೇ? ಅಂದು ಹಲ್ಲೆ ನಡೆಸುವಾಗ ನಮ್ಮವರ ಜೀವ ಹೋಗಿದ್ದರೆ ಅದಕ್ಕೆ ಯಾರು ಹೊಣೆ ಹೊರುತ್ತಿದ್ದರು? 15 ಲಕ್ಷ ಕೊಟ್ಟರೆ ಹೋದ ಜೀವ ಮರಳಿ ಬರುವುದೇ? ಎಂದು ಫೋಟೋಗ್ರಾಫರ್‌ಗಳ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಈ ರಾಜಕೀಯ ಒತ್ತಡದ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಒತ್ತಡಕ್ಕೆ ಮಣಿಯದೆ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸದ್ಯ ಈ ಪ್ರಕರಣವು ಜಿಲ್ಲೆಯಲ್ಲಿ ಕಿಚ್ಚು ಹೊತ್ತಿಸಿದೆ.












Click it and Unblock the Notifications