Liquor & Bar: "ಬಾರ್ ಬ್ಯಾಡ್ರಿ" ಎಂದ ಮಂದಿ, ಕಾರಣ ಮಾತ್ರ ವಿಚಿತ್ರ
ಮನೆಗೊಂದು ಮರ, ಊರಿಗೊಂದು ವನ ಎನ್ನುವುದು ಹಳೆಯ ಮಾತು. ಈಗೆಲ್ಲ ಊರಿಗೆ ಒಂದೆರಡು ಬಾರ್ ಎನ್ನುವುದು ಕಾಮನ್ ಎನ್ನುವಂತೆ ಇದೆ. ಬೆಂಗಳೂರಿನ ಯಾವುದೇ ಗಲ್ಲಿಗೋದರೂ ಒಂದಾದರೂ ಬಾರ್ ಸಿಗುತ್ತವೆ. ರಾಜ್ಯದ ಬಹುತೇಕ ಭಾಗದಲ್ಲಿ ಇದೇ ಪರಿಸ್ಥಿತಿ ಇದೆ. ಆದರೆ, ಧಾರವಾಡ್‌ದಾಗ ಮಂದಿ ನಮಗ್ ಬಾರ್ ಬ್ಯಾಡ್ರಿ ಅಂತ ಧರಣಿ ಕುಂತಾರಂತೆ. ಊರ್ ಊರ್‌ನಾಗ ಇನ್ನೊಂದು ನಾಕ್ ಬಾರ್ ಇದ್ರೆ ಚಲೋ ಅನ್ನೋಟೈಮ್‌ನಲ್ಲಿ ಇಲ್ಲಿನ ಮಂದಿ ಬಾರ್ ಇಲ್ಲಿ ಬ್ಯಾಡೇ ಬ್ಯಾಡ್ರಿ ಅಂತ ಪ್ರತಿಭಟನೆ ಮಾಡಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಧಾರವಾಡದ ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಬಾರ್ ಪ್ರಾರಂಭಿಸಬಾರದು ಎಂದು ಆಗ್ರಹಿಸಿ, ಇಲ್ಲಿನ ಜನ ಪ್ರತಿಭಟನೆ ನಡೆಸಿದ್ದಾರೆ. ಹೊಸದಾಗಿ ಮದ್ಯದ ಅಂಗಡಿ ಪ್ರಾರಂಭಿಸುವ ಉದ್ದೇಶದಿಂದ ಹೋಮ್ ನಡೆಸುವಾಗಲೇ ಲೋಟಸ್ ಲಿಕ್ಕರ್ಸ್ ಬಂದ್ ಮಾಡಿ ಎಂದು ಇಲ್ಲಿನ ಜನ ಆಗ್ರಹಿಸಿದ್ದಾರೆ. ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಧಾರವಾಡ ತಾಲ್ಲೂಕಿನ ಹೆಗ್ಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸೋಮವಾರ ಹೆಗ್ಗೆರಿ ಗ್ರಾಮದ ಮಹಿಳೆಯರು ನಮಗ ಇಲ್ಲಿ ಬಾರ್ ಬ್ಯಾಡ್ರಿ ಅಂತ ಪ್ರೊಟೆಸ್ಟ್ ಮಾಡಿದ್ದಾರೆ. ಮದ್ಯದ ಅಂಗಡಿ ಮುಂದೆ ಸೇರಿದ ಮಹಿಳೆಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದ ಬೇಲೂರು ಕೈಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಹೆಗ್ಗೆರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಾರಾಯಣ ಕಲಾಲ ಎನ್ನುವವರು ಲೋಟಸ್ ಲಿಕ್ಕರ್ ಹೆಸರಿನ ಮದ್ಯದ ಅಂಗಡಿ ತೆಗೆಯುವುದಕ್ಕೆ ಮುಂದಾಗಿದ್ದಾರೆ. ಆದರೆ, ಇದಕ್ಕೆ ಇಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರದೇಶದ ಸುತ್ತಮುತ್ತ ಬೇಲೂರು ಕೈಗಾರಿಕೆ ಪ್ರದೇಶ ಹಾಗೂ ಐಐಟಿ ಸೇರಿದಂತೆ ಪ್ರಮುಖ ಕಂಪನಿಗಳಿವೆ. ಇಲ್ಲಿ ಬಾರ್ ಒಪನ್ ಮಾಡಿದ್ರೆ ವ್ಯಾಪಾರದ ದೃಷ್ಟಿಯಿಂದ ಅನುಕೂಲ ಆಗುತ್ತೆ ಎನ್ನುವುದು ಬಾರ್ ಒನರ್ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ.
ಮದ್ಯದ ಅಂಗಡಿಯ ಮಾಲೀಕ ಬಾರ್ ಒಪನ್ ಮಾಡುವುದಕ್ಕೂ ಮುಂಚೆ ಹೋಮ ಹವನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯ ಗ್ರಾಮಸ್ಥರು ಹಾಗೂ ಮಹಿಳೆಯರು ರೊಚ್ಚಿಗೆದ್ದು ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆಗೆಯಬಾರದು ಎಂದು ಪ್ರತಿಭಟನೆ ಮಾಡಿದ್ದಾರೆ. ಈ ರೀತಿ ಪ್ರತಿಭಟನೆ ಮಾಡಲು ಮುಂದಾದ ಮಹಿಳೆಯರನ್ನು ಸಮಾಧಾನ ಮಾಡಲು ಅಂಗಡಿ ಮಾಲೀಕರು ಹರಸಾಹಸ ಪಟ್ಟಿದ್ದು, ಕಂಡುಬಂತು. ಆದರೆ, ಅಂಗಡಿ ಮಾಲೀಕನ ಮಾತಿಗೆ ಯಾರೂ ಕ್ಯಾರೇ ಎನ್ನಲಿಲ್ಲ.
ನಗರ ಪ್ರದೇಶಗಳಲ್ಲಿ ನಾಯಿಕೊಡೆಯಂತಿರುವ ಮದ್ಯದ ಅಂಗಡಿಗಳು ಈಗ ಗ್ರಾಮೀಣ ಭಾಗದಲ್ಲಿ ತೆಲೆ ಎತ್ತುತ್ತಿರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆಯೇ ಅಂಗಡಿ ಮಾಲೀಕ ಕಂಗಾಲಾಗಿದ್ದಾರೆ.

ಬಾರ್ ಮುಂದೆಯೇ ದಾಟಬೇಕು: ಹೆಗ್ಗೇರಿ ಗ್ರಾಮದಲ್ಲಿ ಎಲ್ಲಿಯೂ ಬಾರ್ ಎನ್ನುವುದೇ ಬೇಡ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಹೆಗ್ಗೇರಿ ಗ್ರಾಮದ ಬ್ರಿಡ್ಜ್ ಸಮೀಪದಲ್ಲೇ ಬಾರ್ ಇದೆ. ಸಣ್ಣ ಮಕ್ಕಳು ಬ್ರಿಡ್ಜ್ ದಾಟಿಕೊಂಡೇ ಶಾಲೆಗೆ ಹೋಗುತ್ತಾರೆ. ನಾವೆಲ್ಲ ಸಂತೆಗೂ, ಧಾರವಾಡಕ್ಕೂ ಇಲ್ಲಿಂದಲೇ ಹೋಗಬೇಕು. ಇಂಡಸ್ಟ್ರಿ ಏರಿಯಾ ಬೇರೆ ಬೇರೆ ಊರಿಂದ ಜನ ಇಲ್ಲಿಗೆ ಬಂದಿದ್ದಾರೆ. ಯುವಕರಿಗೂ ಮದ್ಯ ಚಟ ಹಬ್ಬಿಸುವ ಸಾಧ್ಯತೆ ಇದೆ ಎಂದು ಗ್ರಾಮದ ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications