ನರೇಗಾ ಕೆಲಸಕ್ಕೆ ಚಕ್ಕರ್, ಚುನಾವಣಾ ಪ್ರಚಾರಕ್ಕೆ ಹಾಜರ್!
ಬೆಂಗಳೂರು, ಮೇ 02; ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರ ಕಣ ರಂಗೇರಿದೆ. ವಿವಿಧ ಪಕ್ಷಗಳು ಮೇ 10ರಂದು ನಡೆಯುವ ಚುನಾವಣೆಗೆ ಪ್ರಚಾರವನ್ನು ಬಿರುಸುಗೊಳಿಸಿವೆ. ಮೇ 8ರ ತನಕ ಬಹಿರಂಗ ಪ್ರಚಾರ ಮಾಡಲು ಅವಕಾಶವಿದೆ. ಚುನಾವಣಾ ಪ್ರಚಾರಕ್ಕೆ ಆಗಮಿಸುವ ಜನರಿಗೆ ಭಾರೀ ಬೇಡಿಕೆ ಇದೆ. ಆದರೆ ಇದು ಅಧಿಕಾರಿಗಳಿಗೆ ತಲೆನೋವು ತಂದಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆಯಲ್ಲಿ ಜನರು ಉದ್ಯೋಗ ಅರಸಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದರು. ಆದರೆ ಈ ಬಾರಿ ಚುನಾವಣಾ ಕಾವು ಏರಿರುವುದರಿಂದ ಯಾರೂ ಸಹ ಗುಳೆ ಹೋಗಿಲ್ಲ. ಪಕ್ಷಗಳ ಪರವಾಗಿ ಪ್ರಚಾರ ನಡೆಸಲು ಹೋಗುತ್ತಿದ್ದಾರೆ. ಪ್ರಚಾರ ಕಾರ್ಯ ಮುಗಿಯುವ ತನಕ ಸಿಗುವಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಯೋಜನೆ ಅವರ ಗ್ರಾಮದಲ್ಲಿಯೇ ಜನರಿಗೆ ಉದ್ಯೋಗದ ಖಾತರಿ ನೀಡುತ್ತದೆ. ಈ ಯೋಜನೆ ಹಲವಾರು ಗ್ರಾಮಗಳಲ್ಲಿ ಜನರಿಗೆ ಅನುಕೂಲವಾಗಿದೆ. ಆದರೆ ಚುನಾವಣಾ ಸಮಯದಲ್ಲಿ ಜನರು ನರೇಗಾ ಕೂಲಿಗೆ ಚಕ್ಕರ್ ಹಾಕಿ, ಪ್ರಚಾರಕ್ಕೆ ಹೋಗುತ್ತಿದ್ದು, ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.
ನರೇಗಾ ಕೂಲಿಗೆ ಚಕ್ಕರ್; ಏಪ್ರಿಲ್ ತಿಂಗಳ ವರದಿಯಂತೆ ಕರ್ನಾಟಕದಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿ ಕೊಪ್ಪಳ ಜಿಲ್ಲೆ ಇದೆ. ಉಳಿದಂತೆ ರಾಯಚೂರು, ಬಳ್ಳಾರಿ, ಗದಗ, ವಿಜಯನಗರ ಜಿಲ್ಲೆಗಳಿವೆ. ನರೇಗಾ ಯೋಜನೆ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗ ಖಾತರಿ ನೀಡುತ್ತಿದೆ. ಅದರಲ್ಲೂ ಬೇಸಿಗೆಯ ಸಂದರ್ಭದಲ್ಲಿ ಸ್ಥಳೀಯವಾಗಿಯೇ ಉದ್ಯೋಗ ನೀಡಿದೆ.

2023ರ ಏಪ್ರಿಲ್ 1ರಿಂದ ನರೇಗಾ ಕೂಲಿ ಮೊತ್ತವು 316 ರೂ.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸವನ್ನು ನೀಡಲಾಗುತ್ತಿದೆ. ಆದರೆ ಕೆಲಸಕ್ಕೆ ನೋಂದಣಿ ಮಾಡಿಕೊಂಡವರು ಗೈರಾಗುತ್ತಿದ್ದಾರೆ. ಆದರೆ ಅವರು ಗ್ರಾಮ ಬಿಟ್ಟು ಗುಳೆ ಹೋಗಿಲ್ಲ. ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಹೋದರೆ ಪ್ರತಿದಿನ 500 ರಿಂದ 700 ರೂ. ತನಕ ಸಿಗುತ್ತಿದೆ. ಅಲ್ಲದೇ ಕೆಲವು ಪಕ್ಷದವರು ಊಟ, ಮದ್ಯ ನೀಡುತ್ತಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಾವೇಶಗಳಿಗೆ ಗ್ರಾಮಕ್ಕೆ ಬಂದು ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ನರೇಗಾ ಯೋಜನೆಯ 316 ರೂ.ಗಿಂತ ಅಧಿಕ ಹಣ ಸಿಗುತ್ತದೆ ಎಂದು ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಳವಾಗಿರುವ ಕಾರಣ ಜನರು ನರೇಗಾ ಕೆಲಸ ಬಿಟ್ಟು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಕೂಲಿಗಾಗಿ ನೋಂದಣಿ ಮಾಡಿಸಿದ ಜನರನ್ನು ಹುಡುಕುವುದು ಸಹ ಅಧಿಕಾರಿಗಳಿಗೆ ಸವಾಲಾಗಿದೆ.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಹಳೆ ಕಲ್ಯಾಣಿಗಳಿಗೆ ಪುನರ್ಜನ್ಮ ನೀಡಲು ಸಾಧ್ಯವಾಗಿದೆ. ಪ್ರತಿ ಗ್ರಾಮದಲ್ಲಿ ಕನಿಷ್ಟ ಒಂದು ಕೆರೆ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಯೋಜನೆಯಡಿ ಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಸಹ ಕೈಗೊಳ್ಳಬಹುದಾಗಿದೆ.
ಗ್ರಾಮ ಪಂಚಾಯಿತಿ ಕೆರೆ, ಬದು, ಇಂಗು ಗುಂಡಿಗಳ ನಿರ್ಮಾಣ, ತಡೆಗೋಡೆ ನಿರ್ಮಾಣ, ಹೊಲಕ್ಕೆ ಹೋಗಲು ಸಣ್ಣ ರಸ್ತೆಗಳ ನಿರ್ಮಾಣ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಸಿಗಳನ್ನು ನೆಡುವ ಯೋಜನೆ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಹಲವು ಕೆಲಸಗಳನ್ನು ಯೋಜನೆಯಡಿ ಕೈಗೊಳ್ಳುತ್ತಿದೆ.
ಚುನಾವಣಾ ಆಯೋಗ ಪ್ರಚಾರಕ್ಕೆ ಜನರನ್ನು ಹಣ ಕೊಟ್ಟು ಕರೆತರುವುದು ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ಕಣ್ಗಾವಲು ಇಟ್ಟಿದೆ. ಆದರೆ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದ್ದು, ಕೇವಲ ಆರು ದಿನ ಬಾಕಿ ಇರುವುದರಿಂದ ಜನರು ಹೆಚ್ಚಿನ ಹಣಕ್ಕಾಗಿ ಕೂಲಿ ಬಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.
ಕೊಪ್ಪಳ ಜಿಲ್ಲಾಡಳಿತ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಜನರಿಗೆ ಅಲ್ಲಿಯೇ ಮತಯಂತ್ರದ ಕುರಿತು ಮಾಹಿತಿ ನೀಡಿ, ಮತದಾನ ಜಾಗೃತಿ ಮೂಡಿಸುತ್ತಿದೆ. ಅಲ್ಲದೇ ಮೇ 10ರಂದು ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡುತ್ತಿದೆ.











Click it and Unblock the Notifications