ಪಿಂಚಣಿ ಪಡೆಯಲು ಎನ್‍ಪಿಸಿಐ ಲಿಂಕ್ ಕಡ್ಡಾಯ, ವಿವರಗಳು
ಬೆಂಗಳೂರು, ನವೆಂಬರ್ 09; ವಿವಿಧ ಯೋಜನೆಯಡಿ ಪಿಂಚಣಿಗಳನ್ನು ಪಡೆಯುವ ಫಲಾನುಭವಿಗಳಿಗೆ ಸೂಚನೆಯೊಂದಿದೆ. ಫಲಾನುಭವಿಗಳ ಬ್ಯಾಂಕ್/ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್‍ಪಿಸಿಐ ಲಿಂಕ್ ಮಾಡಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ (ಡಿಬಿಟಿ) ಯೋಜನೆ ಮೂಲಕ ಪಾವತಿಸಲಾಗುತ್ತಿದೆ. ಇದಕ್ಕಾಗಿ ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್/ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್‍ಪಿಸಿಐ ಲಿಂಕ್ ಮಾಡಬೇಕು.

ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ; ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಡಿಬಿಟಿ ಮೂಲಕ ಪಾವತಿಸಲು ಸರ್ಕಾರ ನಿರ್ಧರಿಸಿದೆ.
ಆದ್ದರಿಂದ ಬ್ಯಾಂಕ್/ ಅಂಚೆ ಖಾತೆಗೆ ಎನ್‍ಪಿಸಿಐ ಲಿಂಕ್ ಆಗದ ಫಲಾನುಭವಿಗಳ ಪಟ್ಟಿಯು ಆಧಾರ್ ಗ್ರಾಮ ಆಡಳಿತಾಧಿಕಾರಿ (ವಿಎ) ಕಚೇರಿಯಲ್ಲಿರುತ್ತದೆ. ಫಲಾನುಭವಿಗಳು ವಿಎ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಲು ಮನವಿ ಮಾಡಲಾಗಿದೆ.
ಒಂದು ವೇಳೆ ನಿಮ್ಮ ಖಾತೆಯು ಎನ್‍ಪಿಸಿಐ ಲಿಂಕ್ ಆಗದಿದ್ದಲ್ಲಿ ಕೂಡಲೇ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್ ಪುಸ್ತಕದೊಂದಿಗೆ ಸಂಬಂಧಿಸಿದ ಬ್ಯಾಂಕ್/ ಅಂಚೆ ಇಲಾಖೆಗೆ ಭೇಟಿ ನೀಡಿ ಲಿಂಕ್ ಮಾಡಿಸಬೇಕಿದೆ.
ನವೆಂಬರ್ ಅಂತ್ಯದೊಳಗೆ ಎನ್‍ಪಿಸಿಐ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಎನ್‍ಪಿಸಿಐ ಲಿಂಕ್ ಮಾಡದಿದ್ದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಈಗಾಗಲೇ ಸರ್ಕಾರ ಪಿಂಚಣಿದಾರರು ವರ್ಷಕ್ಕೊಮ್ಮೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು ಕಡ್ಡಾಯಗೊಳಿಸಿದೆ. ಅಕ್ಟೋಬರ್ 1 ರಿಂದ ನವೆಂಬರ್ 30, 2023ರವರೆಗೆ ಈ ವರ್ಷದಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗಿನ ದಿನಾಂಕ 29/11/2022ರ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಪಿಂಚಣಿದಾರರು ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಸಾಧ್ಯವಾಗುವಂತೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನವರು, ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯವನ್ನು 70 ರೂ. ಶುಲ್ಕದೊಂದಿಗೆ ಪಡೆಯಬಹುದಾಗಿದೆ.
ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಪಡೆಯಲು ಪೋಸ್ಟ್ ಮ್ಯಾನ್/ ಗ್ರಾಮೀಣ ಅಂಚೆ ಸೇವಕರನ್ನು ಸಂಪರ್ಕಿಸಿ ಅಥವಾ ಪೋಸ್ಟ್ ಇನ್ಪೋ ಅಪ್ಲಿಕೇಶನ್‌ನಲ್ಲಿ ವಿನಂತಿಯನ್ನು ಸಲ್ಲಿಸಬಹುದಾಗಿದೆ.












Click it and Unblock the Notifications