Lok Sabha Election 2024: ಪಿಡಿಒಗಳಿಗೆ ಆಯೋಗದಿಂದ ಸಿಹಿಸುದ್ದಿ
ಬೆಂಗಳೂರು, ಮಾರ್ಚ್ 13: ಲೋಕಸಭಾ ಚುನಾವಣೆ 2024ರ ಘೋಷಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ/ ಸಿಬ್ಬಂದಿಗಳ ಪಟ್ಟಿ ಮಾಡಿ, ತರಬೇತಿಯನ್ನು ನೀಡಲಾಗುತ್ತಿದೆ.
ಚುನಾವಣಾ ಕಾರ್ಯದಲ್ಲಿ ತೊಡಗುವ ಗ್ರಾಮ ಪಂಚಾಯಿತಿ ಮಟ್ಟದ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ರಾಜ್ಯ ಚುನಾವಣಾ ಆಯೋಗ ಸಿಹಿಸುದ್ದಿ ನೀಡಿದೆ. ಪಿಡಿಒಗಳಿಗೆ ಚುನಾವಣಾ ಕಾರ್ಯಗಳಿಂದ ಸ್ವಲ್ಪ ಬಿಡುವು ದೊರೆಯಲಿದೆ.

ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದರು. ಪಿಡಿಒಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡುವ ಕುರಿತಂತೆ ಪತ್ರದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಈ ಪತ್ರಕ್ಕೆ ಸ್ಪಂದಿಸಿದ್ದಾರೆ. ಪಿಡಿಒಗಳನ್ನು ಚುನಾವಣಾ ಕಾಯಂ ಸ್ವರೂಪದ ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಏನು ಮನವಿ ಮಾಡಲಾಗಿತ್ತು?: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಚುನಾವಣಾ ಅಕ್ರಮ ತಡೆಗೆ ಚೆಕ್‌ಪೋಸ್ಟ್ ರಚನೆ ಮಾಡಲಾಗುತ್ತದೆ. ಈ ಚೆಕ್ ಪೋಸ್ಟ್‌ಗಳಿಗೆ ಪಿಡಿಒಗಳ ಬದಲು ಬೇರೆ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು.
ಕರ್ನಾಟಕದಲ್ಲಿ ಬಾರಿ ಭೀಕರ ಬರ ಆವರಿಸಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ, ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ (Ground Truthing) ವರದಿಯನ್ವಯ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪಿಡೀತ ತಾಲ್ಲೂಕುಗಳೆಂದು ಸರ್ಕಾರವು ಘೋಷಣೆ ಮಾಡಿದೆ.
ಸರ್ಕಾರದ ಸೂಚನೆ ಅನ್ವಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಸೇರಿದಂತೆ ಬರ ಪರಿಹಾರ ಕೆಲಸಗಳಲ್ಲಿಯೂ ತೊಡಗಬೇಕಿದೆ. ಇಂತಹ ಸಂದರ್ಭದಲ್ಲಿಯೇ ಚುನಾವಣೆ ಎದುರಾಗಿದೆ. ಪಿಡಿಒಗಳನ್ನು ಚುನಾವಣಾ ಕಾಯಂ ಕಾರ್ಯಕ್ಕೆ ನಿಯೋಜನೆ ಮಾಡಿದರೆ ಬರ ಕಾಮಗಾರಿಗಳು ವಿಳಂಬವಾಗಲಿದೆ. ಆದ್ದರಿಂದ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಲಾಗಿತ್ತು.
ಸದ್ಯದ ಮಾಹಿತಿ ಪ್ರಕಾರ ಲೋಕಸಭಾ ಚುನಾವಣೆ ದಿನಾಂಕ ಮಾರ್ಚ್ 15ರಂದು ಘೋಷಣೆಯಾಗಲಿದೆ. ವೇಳಾಪಟ್ಟಿ ಘೋಷಣೆಯಾದ ತಕ್ಷಣ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಬಳಿಕ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಚುನಾವಣಾ ಆಯೋಗದ ಸೂಚನೆ ಅನ್ವಯ ಕಾರ್ಯ ನಿರ್ವಹಣೆ ಮಾಡಬೇಕಿದೆ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಕೂಡಲೇ ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧೆಡೆ ಅಳವಡಿಸಲಾಗಿರುವ ಜಾಹೀರಾತು, ಪ್ರಕಟಣೆ, ಬ್ಯಾನರ್‌ಗಳನ್ನು ತೆರವುಗೊಳಿಸಬೇಕಿದೆ. ಆಗ ಪಿಡಿಒಗಳನ್ನು ಸಹ ಚುನಾವನಾ ಕಾರ್ಯಕ್ಕಾಗಿ ಚೆಕ್ ಪೋಸ್ಟ್ ಸೇರಿದಂತೆ ವಿವಿಧ ಕಡೆ ನಿಯೋಜನೆ ಮಾಡಲಾಗತ್ತದೆ. ಆಗ ಬರ ಕಾಮಗಾರಿಗಳು ವಿಳಂಬವಾಗುವ ಕಾರಣ ಅವರನ್ನು ಕೆಲಸ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಮನವಿ ಮಾಡಲಾಗಿದೆ.
ಚುನಾವಣಾ ಸಂದರ್ಭದಲ್ಲಿ ಚೆಕ್‍ಪೋಸ್ಟ್‌ಗಳು 24 ಗಂಟೆ ಕಾರ್ಯ ನಿರ್ವಹಣೆ ಮಾಡಬೇಕಿದೆ. ವಾಹನಗಳ ತಪಾಸಣೆ ಮಾಡಬೇಕು. ಹಣ, ಮದ್ಯ ಸಿಕ್ಕಿಬಿದ್ದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಳ್ಳಬೇಕು. ಮೊಬೈಲ್ ಅಪ್ಲಿಕೇಶನ್ ಮೂಲಕ ಜಿಲ್ಲಾ ಚುನಾವಣಾ ವಿಭಾಗಕ್ಕೆ ಮಾಹಿತಿ ನೀಡಬೇಕು.
ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಚುನಾವಣೆ ಘೋಷಣೆಯಾಗುವ ದಿನದಿಂದಲೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಚುನಾವಣಾ ವೆಚ್ಚ ಹಾಗೂ ಇತರೆ ವಿಷಯಗಳ ಕುರಿತು ಗಮನ ಹರಿಸಬೇಕಿದೆ.
ಚುನಾವಣೆ ದಿನಾಂಕ ಘೋಷಣೆಯಾದ ನಂತರ 24, 48 ಹಾಗೂ 72 ಗಂಟೆಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೂರು ವಿವಿಧ ಭಾಗಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 24 ಗಂಟೆಯೊಳಗೆ ಸರ್ಕಾರದ ಜಾಹೀರಾತುಗಳು, ಎರಡನೇ ಹಂತದಲ್ಲಿ 48 ಗಂಟೆಯೊಳಗೆ ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳು ಹಾಗೂ ಮೂರನೇ ಹಂತದಲ್ಲಿ 72 ಗಂಟೆಯೊಳಗೆ ಖಾಸಗಿ ವಲಯದಲ್ಲಿ ನೀತಿ ಸಂಹಿತೆಗೆ ವಿರುದ್ದವಾದ ಜಾಹೀರಾತುಗಳನ್ನು ತೆಗೆಯಬೇಕಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಚುನಾವಣಾ ಕಾರ್ಯದ ಜೊತೆ ಬರ ಪರಿಹಾರ ಕಾರ್ಯವನ್ನು ಸಹ ಕೈಗೊಳ್ಳಬೇಕಿದೆ.












Click it and Unblock the Notifications