ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪಿಸಿಎಂಬಿ ಕೋರ್ಸ್ ಆರಂಭ, ಆದೇಶ
ಬೆಂಗಳೂರು, ಜುಲೈ 22: ಕರ್ನಾಟಕ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪದವಿ ಪೂರ್ವ (PCMB) ಶಿಕ್ಷಣವನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಆದೇಶ ಹೊರಡಿಸಿದ್ದಾರೆ. 2024-25ನೇ ಸಾಲಿನ ಆಯವ್ಯಯ ಭಾಷಣದ ಘೋಷಿಸಿರುವಂತೆ ಸ್ವಂತ ಕಟ್ಟಡವನ್ನು ಹೊಂದಿರುವ 25 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪದವಿ ಪೂರ್ವ (PCMB) ಶಿಕ್ಷಣವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಸ್ವಂತ ಕಟ್ಟಡವನ್ನು ಹೊಂದಿರುವ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪ್ರಾರಂಭಿಸಲಾಗುವುದು. 2024-25ನೇ ಸಾಲಿನಲ್ಲಿ ಆಯವ್ಯಯ ಭಾಷಣದ ಕಂಡಿಕೆ-184ರಲ್ಲಿ ಘೋಷಿಸಿರುವಂತೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 25 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2024-25ನೇ ಸಾಲಿನಿಂದ 60 ಸಂಖ್ಯಾಬಲದ ವಿಜ್ಞಾನ ವಿಭಾಗವನ್ನು (PCMB/ PCMC) ಹಾಗೂ 2025-26ನೇ ಸಾಲಿನಿಂದ 60 ಸಂಖ್ಯಾಬಲದ ವಾಣಿಜ್ಯ ವಿಭಾಗದೊಂದಿಗೆ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಲಾಗಿದೆ.
ಅಗತ್ಯ ಹುದ್ದೆಗಳನ್ನು ಸೃಜಿಸಿ ಹಾಗೂ ಸದರಿ ಹುದ್ದೆಗಳ ಭರ್ತಿಯಾಗುವವರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ವಯ ಅತಿಥಿ ಉಪನ್ಯಾಸಕರುಗಳನ್ನು ಹಾಗೂ ಉಳಿದ ಇತರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ನೀಡಲು ಹಾಗೂ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ ಇವರು ಮೇಲೆ ಏಕಕಡತಗಳಲ್ಲಿ ಕೋರಿರುತ್ತಾರೆ.
ದಿನಾಂಕ 10/06/2024ರಂದು ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿರುವಂತೆ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಜನಪ್ರತಿ ನಿಧಿಗಳ ಬೇಡಿಕೆ, ಜಿಲ್ಲಾ ಕಛೇರಿಗಳ ವರದಿ ಹಾಗೂ ಇತರ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಗಣನಗೆ ತೆಗೆದುಕೊಂಡು ಸ್ವಂತ ಕಟ್ಟಡ ಹೊಂದಿರುವ 25 ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಉನ್ನತೀಕರಿಸಿ, ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸಿಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಪುಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸ್ವಂತ ಕಟ್ಟಡವನ್ನು ಹೊಂದಿರುವ 25 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಿ.ಸಿ.ಎಂ.ಬಿ (PCMB) ವಿಭಾಗದೊಂದಿಗೆ ಪ್ರಾರಂಭಿಸಲು ಸರ್ಕಾರದ ಮಂಜೂರಾತಿ ನೀಡಿದೆ.
ಮುಂದುವರೆದು, ಶಾಲೆಗೆ 7 ಹುದ್ದೆಗಳಂತೆ 25 ಶಾಲೆಗಳಿಗೆ ಒಟ್ಟು 175 ಹುದ್ದೆಗಳನ್ನು ಸೃಜಿಸಿದೆ. ಸದರಿ ಹುದ್ದೆಗಳ ಎದುರಾಗಿ 175 ಅತಿಥಿ ಉಪನ್ಯಾಸಕರನ್ನು ಪಡೆದು ಕೆಲಸ ನಿರ್ವಹಿಸತಕ್ಕದ್ದು ಎಂದು ಆದೇಶ ಹೇಳಿದೆ.
ಭೌತಶಾಸ್ತ್ರ ಉಪನ್ಯಾಸಕರು ಪ್ರತಿ ಶಾಲೆಗೆ 1 ಹುದ್ದೆ, ಒಟ್ಟು 25 ಹುದ್ದೆಗಳು. ರಸಾಯನಶಾಸ್ತ್ರ ಉಪನ್ಯಾಸಕರು 1, ಗಣಿತ ಉಪನ್ಯಾಸಕರು 1, ಜೀವಶಾಸ್ತ್ರ ಉಪನ್ಯಾಸಕರು 1, ಕನ್ನಡ ಉಪನ್ಯಾಸಕರು 1, ಆಂಗ್ಲ ಉಪನ್ಯಾಸಕರು 1, ಉರ್ದು ಉಪನ್ಯಾಸಕರು 1. ಒಟ್ಟು ಹುದ್ದೆಗಳು 7, ಒಟ್ಟು ಹುದ್ದೆಗಳು 175.












Click it and Unblock the Notifications