ಪೇಸಿಎಂ ಅಭಿಯಾನ: ವಕೀಲರಿಬ್ಬರ ವಿರುದ್ಧದ ಎಫ್‌ಐಆರ್ ರದ್ದು
ಬೆಂಗಳೂರು, ಅ.22: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದ್ದ ಪೇ ಸಿಎಂ ಅಭಿಯಾನಕ್ಕೆ ಸಂಬಂಧಿಸಿದಂತೆ ಇಬ್ಬರು ವಕೀಲರ ವಿರುದ್ಧ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. ಹಾಗಾಗಿ ಇಂತಹುದೇ ಪ್ರಕರಣಗಳಲ್ಲಿ ರಾಜ್ಯದಲ್ಲಿ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ನಿರಾಳರಾಗುವಂತೆ ಮಾಡಿದೆ.
ಪೇಸಿಎಂ ಅಭಿಯಾನಕ್ಕೆ ಕರೆಕೊಟ್ಟ ಆರೋಪದಲ್ಲಿ ನೆಲಮಂಗಲದ ವಕೀಲರಿಬ್ಬರ ವಿರುದ್ಧ ಹೂಡಲಾಗಿದ್ದ ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯಿದೆ ಹಾಗೂ ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ 290ರಅಡಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ನೆಲಮಂಗಲ ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ, ವಕೀಲ ಜೆ.ಎಸ್.ನಾರಾಯಣ ಗೌಡ ಹಾಗೂ ಕಾನೂನು ಘಟಕದ ಮುಖ್ಯಸ್ಥ ವಕೀಲ ವಿ. ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳನ್ನು ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಜತೆಗೆ, ಈ ಆದೇಶದಲ್ಲಿಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಅರ್ಜಿದಾರರ ವಿರುದ್ದದ ಪ್ರಕರಣಕ್ಕೆ ಮಾತ್ರ ಸೀಮಿತವಾಗಿದ್ದು, ಇದೇ ಪ್ರಕರಣದ ಇತರ ಯಾವುದೇ ಆರೋಪಿಗಳ ವಿರುದ್ಧದ ತನಿಖೆಯ ಮೇಲೆ ಈ ಆದೇಶ ಪರಿಣಾಮ ಬೀರುವುದಿಲ್ಲವೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹೈಕೋರ್ಟ್ ಏನು ಹೇಳಿದೆ?: ''ಅರ್ಜಿದಾರರು ಮೊಬೈಲ್ ಮೂಲಕ ಪೋಸ್ಟರ್ ಅಥವಾ ಭಿತ್ತಿಪತ್ರಗಳನ್ನು ಅಂಟಿಸುವಂತೆ ಇತರರಿಗೆ ಸೂಚಿಸಿದ್ದಾರೆಂದ ಮಾತ್ರಕ್ಕೆ ಅವರು ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯಿದೆ ಮತ್ತು ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪ ಕಾಯಿದೆಯ ನಿಯಮಗಳ ಪ್ರಕಾರ ಅಪರಾಧಿಗಳಾಗುವುದಿಲ್ಲ. ಕಾಯಿದೆಯ ಅಡಿ ಅಪರಾಧವಾಗುವಂತಹ ಯಾವುದೇ ಕೃತ್ಯವನ್ನು ಅರ್ಜಿದಾರರು ಎಸಗಿಲ್ಲ'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಿರುದ್ದ ನೆಲಮಂಗಲ ಟೌನ್ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ನೆಲಮಂಗಲ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿಹೇಳಿದೆ.
ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರಾದ ಜೆ.ಎಸ್. ನಾರಾಯಣಗೌಡ ಹಾಗೂ ವಿ. ರಾಮಕೃಷ್ಣ ಅವರ ಸೂಚನೆ ಮೇರೆಗೆ ನೆಲಮಂಗಲ ಪಟ್ಟಣದ ಹಲವೆಡೆ ಮುಖ್ಯಮಂತ್ರಿಗಳ ಭಾವಚಿತ್ರವಿರುವ ಕ್ಯೂಆರ್ ಕೋಡ್ ಹೊಂದಿದ್ದ ಭಿತ್ತಿಪತವನ್ನು ಎಲ್.ಎನ್. ವರುಣ್ ಕುಮಾರ್, ಕೃಷ್ಣ ಪವಾರ್ ಮತ್ತು ಸಿ.ಅಶೋಕ್ ಕುಮಾರ್ ಅಂಟಿಸುತ್ತಿದ್ದರು. ಅದರಲ್ಲಿ ಪೇಸಿಎಂ ಶೇ.40 (ಲಂಚ) ಇಲ್ಲಿಸ್ವೀಕರಿಸಲಾಗುವುದು, ಶೇ. 40 ಸರಕಾರದ ಭ್ರಷ್ಟಾಚಾರ ಬಯಲು ಮಾಡಲು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಉಲ್ಲೇಖಿಸಲಾಗಿತ್ತು.
ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸಹಾಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೆ.ಆರ್. ನಾರಾಯಣ್ ರಾವ್, ಈ ರೀತಿಯ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸಾರ್ವಜನಿಕ ಸ್ಥಳಗಳ ಸೌಂದರ್ಯ ಹಾಳು ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಈ ದೂರು ಆಧರಿಸಿ ಅರ್ಜಿದಾರರೂ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅದನ್ನು ರದ್ದು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications