ಮೈಸೂರು, ಪಟ್ಟದಲ್ಲು, ಜೋಗ, ಹಂಪಿಯಲ್ಲಿ ಯೋಗ ದಿನಾಚರಣೆ
ಬೆಂಗಳೂರು, ಜೂನ್ 7: ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಸಾಮೂಹಿಕ ಯೋಗ ಮಾಡಲು ಕೇಂದ್ರ ಸರ್ಕಾರ ಕರ್ನಾಟಕದ ಹೆಮ್ಮೆಯ ಪಟ್ಟದಕಲ್ಲು ಸ್ಥಳವನ್ನು ಆಯ್ಕೆ ಮಾಡಿದೆ. ಈ ಬಾರಿಯ ಯೋಗದಿನದಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲು ದೇಶಾದ್ಯಂತ 75 ಪರಾಂಪರಿಕ ಸ್ಥಳಗಳನ್ನು ಗುರುತಿಸಲಾಗಿದೆ. ಕ್ರಿ.ಶ. 7 ನೇ ಮತ್ತು 8 ನೇ ಶತಮಾನದ ಮಹತ್ವದ ಚಾಲುಕ್ಯ ಸ್ಮಾರಕಗಳನ್ನು ಹೊಂದಿರುವ ಜಿಲ್ಲೆಯ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಕೂಡ ಕೇಂದ್ರ ಸರ್ಕಾರದ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ಮತ್ತು ವಿಜಯನಗರ ಜಿಲ್ಲೆಯ ಹಂಪಿಗಳನ್ನು ಸಾಂಸ್ಕೃತಿಕ ಪರಂಪರೆಯ ಸ್ಥಳಗಳನ್ನಾಗಿ ಆಯ್ಕೆ ಮಾಡಿದೆ.
ಪ್ರವಾಸೋದ್ಯಮ ಇಲಾಖೆಯು ತನ್ನ ಜಿಲ್ಲಾ ಕಚೇರಿಗಳಿಗೆ ಸಾಮೂಹಿಕ ಯೋಗ ಪ್ರದರ್ಶನವನ್ನು ಆಯೋಜಿಸಲು ಮತ್ತು ಅದರ ವೀಡಿಯೊ ಮತ್ತು ಛಾಯಾಚಿತ್ರಗಳನ್ನು ಸಲ್ಲಿಸುವಂತೆ ಆದೇಶ ನೀಡಿದೆ. ಕಾರ್ಯಕ್ರಮಕ್ಕಾಗಿ ಆಯುಷ್ ಇಲಾಖೆ ಸಿಬ್ಬಂದಿ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಸ್ವಯಂಸೇವಕರನ್ನು ನಿಯೋಜಿಸಲು ಸೂಚಿಸಲಾಗಿದೆ. ಯೋಗ ಕಾರ್ಯಕ್ರಮ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ವಿದ್ಯಾರ್ಥಿಗಳು ಮತ್ತು ಉತ್ಸಾಹಿಗಳಿಗೆ ಯೋಗ ಮಾಡಲು ಅನುಕೂಲವಾಗುವಂತೆ ಸಿದ್ಧತೆ ನಡೆಯುತ್ತಿವೆ.
"ಕಾರ್ಯಕ್ರಮ ಯಶಸ್ವಿಗೊಳಿಸಲು ಬಾಗಲಕೋಟೆ ಜಿಲ್ಲಾಡಳಿತ ವಿವಿಧ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಲಿದೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ" ಎಂದು ಜಿಲ್ಲಾ ಆಯುಷ್ ಅಧಿಕಾರಿ (ಪ್ರಭಾರ) ಅಕ್ಕಮಹಾದೇವಿ ಗಾಣಿಗೇರ್ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಯೋಗ ಮಾಡಲಿರುವ ಮೋದಿ
ಈ ಬಾರಿ ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗ ಕಾರ್ಯಕ್ರಮ ನಿಗದಿಯಾಗಿದೆ. ಮೈಸೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಯೋಗಾಭ್ಯಾಸ ಮಾಡಲಿದ್ದಾರೆ. ವಿಶ್ವ ವಿಖ್ಯಾತ ಪರಂಪರೆಯ ತಾಣ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಯೋಗ ಕಾರ್ಯಕ್ರಮ ಆಯೋಜನೆಗೆ ಸಕಲ ಸಿದ್ಥತೆ ಮಾಡಿಕೊಳ್ಳಲಾಗುತ್ತಿದೆ.
ಮೋದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಆದರೆ ಇನ್ನು ಎಷ್ಟು ಜನರಿಗೆ ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನ ಮಾಡಿಲ್ಲ. ಜೂನ್ 12ರ ನಂತರ ಎಷ್ಟು ಜನಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.

ಪ್ರತಿ ವರ್ಷ ಜೂನ್ 21 ರಂದು ಯೋಗದಿನಾಚಣೆ
2014 ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು ಭಾರತದ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ಭಾರತದ ಪ್ರಸ್ತಾವನೆಗೆ ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಯೋಗ ದಿನಾಚರಣೆಗೆ ಅನುಮೋದನೆ ನೀಡಿದ್ದವು.
2015 ಜೂನ್ 21ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಯೋಗ ದಿನವನ್ನು ದೆಹಲಿಯ ರಾಜಪಥದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಜೂನ್ 21 ರಂದು ಯೋಗ ದಿನಾಚರಣೆ ಆಚರಿಸಲಾಗುತ್ತಿದೆ.

ಜೂನ್ 21ರಂದೇ ಆಚರಣೆ ಯಾಕೆ
ಜೂನ್ 21 ವರ್ಷದ ಅತಿ ದೀರ್ಘವಾದ ದಿನವಾಗಿದೆ ಎಂದು ಹೇಳಲಾಗುತ್ತದೆ ಅಂದರೆ ಈ ದಿನ ದೀರ್ಘಕಾಲ ಹಗಲು ಇರುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಮತ್ತೊಂದು ನಂಬಿಕೆಯ ಪ್ರಕಾರ ದೇವರಾದ ಶಿವ ಈ ದಿನ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದ ಎಂದು ನಂಬಲಾಗಿದೆ. ಶಿವ ಯೋಗದ ಆದಿ ಗುರು ಆದ ದಿನ ಎಂದು ಹೇಳಲಾಗುತ್ತದೆ.

ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಯೋಗ
ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗ ಎಂದರೆ ಬರಿ ವ್ಯಾಯಾಮ ಮಾತ್ರವಲ್ಲ ಎನ್ನಲಾಗಿದೆ. ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ಯೋಗ ನೆರವಾಗುತ್ತದೆ. ಉತ್ತಮ ದೈಹಿಕ ಆರೋಗ್ಯ ಕಾಪಾಡಲು ಯೋಗ ಸಹಕಾರಿ, ಯೋಗದ ಕೆಲವು ಮುದ್ರೆಗಳು ದೇಹದ ಜೊತೆಗೆ ಮನಸ್ಸಿನ ಆರೋಗ್ಯಕ್ಕೂ ಸಹಕಾರಿ.
ಪ್ರತಿನಿತ್ಯ ಯೋಗಕ್ಕಾಗಿ ನಿಗದಿತ ಸಮಯ ಮೀಸಲಿಡಬೇಕು, ಸೂರ್ಯೋದಯಕ್ಕೂ ಮೊದಲು ಸೂರ್ಯಾಸ್ತದ ಸಮಯದಲ್ಲಿ ಯೋಗ ಮಾಡಿದರೆ ಪ್ರಯೋಜನ ಹೆಚ್ಚು ಎನ್ನುತ್ತಾರೆ ಯೋಗ ತಜ್ಞರು.












Click it and Unblock the Notifications