ಹೆಣ್ಣು ಮಗು ಕೊಂದು, ಬೆಂಕಿ ಹಚ್ಚಿದ ಪೋಷಕರು
ರಾಮನಗರ, ಏ. 18 : ತಂದೆ-ತಾಯಿ ಸೇರಿ ಒಂದೂವರೆ ವರ್ಷದ ಹೆಣ್ಣುಮಗುವನ್ನು ಕೊಂದು ಬೆಂಕಿ ಹಚ್ಚಿ ಪರಾರಿಯಾಗಿರುವ ಅಮಾನವೀಯ ಘಟನೆ ಚನ್ನಪಟ್ಟಣ ತಾಲೂಕಿನ ದೊಡ್ಡಮಾಳೂರು ಗ್ರಾಮದಲ್ಲಿ ನಡೆದಿದೆ. ಪರಾರಿಯಾಗಿರುವ ಪೋಷಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗುರುವಾರ ಮಧ್ಯಾಹ್ನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ದೊಡ್ಡಮಾಳೂರು ಗ್ರಾಮದ ಹಳೆಯ ಶಾಲಾ ಕಟ್ಟಡದ ಶೌಚಾಲಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿದಾಗ ಮಗುವಿಗೆ ಬೆಂಕಿ ಹಚ್ಚಿದ್ದು ತಿಳಿದುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಆರಿಸಿರುವ ಪೊಲೀಸರು ಮಗುವಿನ ಅರೆಬೆಂದ ಶವವನ್ನು ವಶಕ್ಕೆ ಪಡೆದಿದ್ದಾರೆ. ಮಗುವಿನ ಪೋಷಕರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದಿಬಂದಿಲ್ಲ.
ಅಮಾನವೀಯ ಘಟನೆ : ಇಬ್ಬರು ಮಕ್ಕಳೊಂದಿಗೆ ಮೂರು ದಿನಗಳ ಹಿಂದೆ ದೊಡ್ಡಮಾಳೂರು ಗ್ರಾಮಕ್ಕೆ ಆಗಮಿಸಿದ ಹಕ್ಕಿಪಿಕ್ಕಿ ಜನಾಂಗದ ಇವರು ಹಳೆಯ ಶಾಲಾ ಆವರಣದಲ್ಲಿ ವಾಸ್ತವ್ಯ ಹೂಡಿದ್ದರು. ಇವರಿಗೆ ಎಂಟು ವರ್ಷದ ಗಂಡು ಮಗು ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ ದಂಪತಿಗಳ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಜಗಳದ ಸಮಯದಲ್ಲಿಯೇ ಮಗುವನ್ನು ಕೊಲೆ ಮಾಡಿರಬೇಕೆಂದು ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ. ಮಧ್ಯಾಹ್ನ ಗ್ರಾಮಸ್ಥರ ಬಳಿ ಹಾರೆ ಗುದ್ದಲಿ ಕೊಡುವಂತೆ ದಂಪತಿಗಳು ಕೇಳಿದ್ದಾರೆ. ಆದರೆ, ಯಾರೂ ಕೊಟ್ಟಿರಲಿಲ್ಲ.
ಗ್ರಾಮಸ್ಥರು ಹಾರೆ ಕೊಡದಿದ್ದಾಗ, ಹಳೆಯ ಶಾಲೆಯ ಶೌಚಾಲಯದಲ್ಲಿದ್ದ ಟೈರುಗಳನ್ನು ಹಾಕಿ ಮಗುವಿನ ಶವಕ್ಕೆ ಬೆಂಕಿ ಹಚ್ಚಿದ್ದಾರೆ. ನಂತರ ಗಂಡು ಮಗುವನ್ನು ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಶಾಲೆಯಲ್ಲಿ ಹೊಗೆಯಾಡುತ್ತಿರುವುದನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ಗ್ರಾಮಾಮತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ದೂರು ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ದಂಪತಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಹಕ್ಕಿಪಿಕ್ಕಿ ಜನಾಂಗದವರು ಅಲೆಮಾರಿಗಳಾಗಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಾಗಿದೆ.












Click it and Unblock the Notifications