ಕಾಂಗ್ರೆಸ್ ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ : ಆರಗ ಜ್ಞಾನೇಂದ್ರ ಮನವಿ
ಬೆಂಗಳೂರು, ಜ. 12: ಪಾದಯಾತ್ರೆ ಕರೋನಾ ಯಾತ್ರೆ ಆಗುವುದು ಬೇಡ. ನಿಮ್ಮ ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮ ಕೈಬಿಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ, ಅರಂಭದಲ್ಲಿ ಇವರು ಪಾದಯಾತ್ರೆ ಅರಂಭಿಸಿದಾಗ ನಮಗೆ ಸಾರ್ವಜನಿಕರ ಅರೋಗ್ಯದ ಮೇಲೆ ಬೀರಬಹುದಾದ ಅಡ್ಡ ಪರಿಣಾಮದ ಬಗ್ಗೆ ಅತಂಕ ಇತ್ತು. ಅ ಕಾರಣದಿಂದ ನಾವು ಪಾದಯಾತ್ರೆ ಮುಂದಕ್ಕೆ ಹಾಕಿಕೊಳ್ಳಿ ಎಂದು ಮನವಿ ಮಾಡಿದ್ದೆವು. ನಮ್ಮ ಆತಂಕ ನಿಜವಾಗಿದೆ. ಕೊರೊನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿ ವಿತಂಡ ವಾದ ಮಂಡಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ತೊಡಗಿದ್ದ ಕೆಲವು ನಾಯಕರಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.
ಆ ಕಾರಣದಿಂದಲೇ ಮತ್ತೊಮ್ಮೆ ನಾನು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮ ನಿರ್ಧಾರವನ್ನು ಬದಲಿಸಿ. ಸಾರ್ವಜನಿಕರ ಅರೋಗ್ಯ ರಕ್ಷಣೆ ದೃಷ್ಟಿಯಿಂದ ಪಾದಯಾತ್ರೆಯನ್ನು ಕೈಬಿಡಿ. ಕೊರೊನಾ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಸಮಾಜದ ಎಲ್ಲಾ ಜನರು, ಶ್ರಮಿಕರು ಆತಂಕಕ್ಕೀಡಾಗಿದ್ದಾರೆ. ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ಕೊರೊನಾ ಯಾತ್ರೆ ಮಾಡಬೇಡಿ. ಈಗಾಗಲೇ ನೀವು ಜನತೆಯ ಅಕ್ರೋಶಕ್ಕೆ ಗುರಿಯಾಗಿದ್ದು, ಜನರ ಕ್ಷಮೆ ಯಾಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಮುಂದುವರೆದ ಪಾದಯಾತ್ರೆ:
ಕೊರೊನಾ ಸೋಂಕು ನಡುವೆಯೂ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಮುಂದುವರೆದಿದೆ. ಇನ್ನು ಡಿ.ಕೆ. ಶಿವಕುಮಾರ್ ಸೇರಿದಂತೆ 60 ಕಾಂಗ್ರೆಸ್ ನಾಯಕರ ವಿರುದ್ಧ ಕನಕಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದಕ್ಕೂ ಮೊದಲು ಸಾತನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು. ಶಾಲಾ ಮಕ್ಕಳನ್ನು ಪಾದಯಾತ್ರಿ ನಾಯಕರು ಭೇಟಿ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಇದರ ನಡುವೆಯೂ ಕಾಂಗ್ರೆಸ್ ಪಾದಯಾತ್ರೆ ಮುಂದುವರೆದಿದೆ.
ಕೊರೊನಾ ಸೋಂಕು:
Recommended Video
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಸ್ಫೋಟಿಸಿದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಜತೆಗೆ ನೈಟ್ ಕರ್ಫ್ಯೂ ಕೂಡ ಜಾರಿಗೆ ತಂದಿದೆ. ಇದರ ನಡುವೆಯೂ ಕೊರೊನಾ ಮಾರಿ ಹೆಚ್ಚುತ್ತಿದ್ದು, ಮತ್ತಷ್ಟು ಬಿಗಿ ನಿಯಮ ಜಾರಿಗೆ ಸರ್ಕಾರ ಮುಂದಾಗಿದೆ. ಇನ್ನೆರಡು ದಿನದಲ್ಲಿ ಮತ್ತಷ್ಟು ಬಿಗಿ ನಿಯಮ ಜಾರಿ ಗೊಳಿಸಲು ಸರ್ಕಾರ ಚಿಂತನೆ ನಡೆಸಿದ್ದು, ಇದರ ನಡುವೆಯೂ ಕಾಂಗ್ರೆಸ್ ಪಾದಯಾತ್ರೆ ಮುಂದುವರೆಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications