Karnataka Elections: 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಓವೈಸಿ ನೇತೃತ್ವದ ಎಐಎಂಐಎಂ ಸಿದ್ದತೆ- ಜೆಡಿಎಸ್ ಜೊತೆ ಮೈತ್ರಿ ಸಾಧ್ಯತ
ಬೆಂಗಳೂರು, ಏಪ್ರಿಲ್ 04: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Elections 2023 ) ಅಸಾದುದ್ದೀನ್ ಓವೈಸಿ ( Asaduddin Owaisi ) ನೇತೃತ್ವದ ಎಐಎಂಐಎಂ ( AIMIM ) ಸುಮಾರು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜಾತ್ಯತೀತ ಜನತಾದಳದ ( JDS ) ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಒಸ್ಮಾನ್ ಘನಿ ಮಂಗಳವಾರ ಹೇಳಿದ್ದಾರೆ.
ಸುದ್ದಿಸಂಸ್ಥೆ 'ಪಿಟಿಐ' ಜೊತೆ ಮಾತನಾಡಿದ ಪಕ್ಷದ ಮುಖ್ಯಸ್ಥ ಓವೈಸಿ, 'ಇಲ್ಲಿಯವರೆಗೆ, ನಾವು ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ನಾವು ಮೈತ್ರಿಗೆ ಮುಕ್ತವಾಗಿದ್ದೇವೆ. ನಾವು ಖಂಡಿತವಾಗಿಯೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ನಾವು ಮೈತ್ರಿ ಮಾಡಿಕೊಳ್ಳುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಾವು ಕಾಯ್ದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿ(ಎಸ್) ಜೊತೆ ಮೈತ್ರಿ ಮಾಡಿಕೊಳ್ಳಲು ಪಕ್ಷವು ಮಾತುಕತೆ ನಡೆಸುತ್ತಿದೆ. ಆದರೆ ಈ ಪ್ರಸ್ತಾಪಕ್ಕೆ ಪಕ್ಷವು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ರಾಜ್ಯ ಘಟಕದ ಮುಖ್ಯಸ್ಥ ಘನಿ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 25 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಎಐಎಂಐಎಂ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿತ್ತು. ಆದರೆ, ಯಾವುದೇ ಅಭ್ಯರ್ಥಿಗಳನ್ನು ಎಐಎಂಐಎಂ ಕಣಕ್ಕಿಳಿಸಿರಲಿಲ್ಲ.
ಎಐಎಂಐಎಂ ಮೈತ್ರಿಗೆ ಮುಕ್ತವಾಗಿರುವ ಪಕ್ಷಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಹೈದರಾಬಾದ್ ಲೋಕಸಭಾ ಸದಸ್ಯ ಓವೈಸಿ ಅವರು ಪ್ರತಿಕ್ರಿಯಿಸಿದ್ದಾರೆ. 'ಕಾಂಗ್ರೆಸ್ ಪಕ್ಷವು ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಅವರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ. ಆದ್ದರಿಂದ ನಾವು ಕಾದು ನೋಡುತ್ತೇವೆ' ಎಂದು ಹೇಳಿದ್ದಾರೆ.

ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಬಸವರಾಜ ಬೊಮ್ಮಾಯಿ ಸರ್ಕಾರದ ಇತ್ತೀಚಿನ ನಿರ್ಧಾರವನ್ನು 'ಸಂಪೂರ್ಣ ಕಾನೂನುಬಾಹಿರ' ಎಂದು ಒವೈಸಿ ಕರೆದಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, 'ಯಾಕೆ ಪ್ರತಿಭಟನೆಗಳು ನಡೆಯಲಿಲ್ಲ? ಸೆಕ್ಯುಲರ್ ಎಂದು ಕರೆದುಕೊಳ್ಳುವ ಜನರೇಕೆ ಹೇಳಿಕೆಗಳನ್ನು ನೀಡಲಿಲ್ಲ. ಜಾತ್ಯತೀತ ನಾಯಕರು ಹಾಗೂ ಅವರ ಪಕ್ಷಗಳು ಏಕೆ ಮೌನವಾಗಿವೆ' ಎಂದು ಪ್ರಶ್ನಿಸಿದ್ದಾರೆ.
ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಮುಸ್ಲಿಂ ಮತಗಳ 'ವಿಭಜನೆ'ಗೆ ಕಾರಣವಾಗುತ್ತದೆ ಎಂದು ಕೆಲವು ಪಕ್ಷಗಳು ಪದೇ ಪದೇ ಟೀಕೆ ಮಾಡುತ್ತಿವೆ. ಅಂತಹ ಪ್ರಶ್ನೆಯನ್ನು ಇತರ ಸಮುದಾಯಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರಿಗೆ ಏಕೆ ಕೇಳಲಾಗುತ್ತಿಲ್ಲ ಎಂದು ಒವೈಸಿ ಅವರು ಆಶ್ಚರ್ಯ ಪಡಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಆದರೆ, ಅಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆಯದಿದೆ ಎಂದು ಒವೈಸಿ ಸ್ಮರಿಸಿದ್ದಾರೆ. 'ಇದು ಮುಸ್ಲಿಂ ಮತಗಳ ವಿಭಜನೆಯಿಂದಾಗಿ ನಡೆಯಿತೇ? ಅಥವಾ ಬಿಜೆಪಿಗೆ ಬಹುಸಂಖ್ಯಾತರ ಮತಗಳು ಬಂದಿದ್ದರ ಪರಿಣಾಮವೇ?' ಎಂದು ಒವೈಸಿ ಪ್ರಶ್ನಿಸಿದ್ದಾರೆ.
2019 ರಲ್ಲಿ ಕಾಂಗ್ರೆಸ್‌ನಿಂದ ವಲಸೆ ಹೋದ ಪಕ್ಷಾಂತರಿಗಳ ಸಹಾಯದಿಂದ ಬಿಜೆಪಿ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಿತು ಎಂದು ಎಐಎಂಐಎಂ ನಾಯಕ ಹೇಳಿದ್ದಾರೆ.
ಕರ್ನಾಟಕದ ವಿಧಾನಸಭೆ ಚುನಾವಣೆಗೆ ಒಂದೇ ದಿನ ನಡೆಯಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬರಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಮುಂದಿನ ವಾರ ಬಿಡುಗಡೆ ಮಾಡಲಿದೆ.












Click it and Unblock the Notifications