224 ಶಾಸಕರಿಗೂ ಸಿಎಂ ಆಗಬೇಕು ಎಂಬ ಆಸೆ ಇರುತ್ತೆ: ಕೆ ಹೆಚ್ ಮುನಿಯಪ್ಪ
ಮೈಸೂರು, ನವೆಂಬರ್ 08: 224 ಶಾಸಕರಿಗೂ ಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ನಮ್ಮಲ್ಲಿ 136 ಸ್ಥಾನ ಇದ್ದೇವೆ, ಎಲ್ಲರಿಗೂ ಆಸೆಗಳು ಸಹಜ. 136 ಸ್ಥಾನ ಇದ್ದಾಗ ಸರ್ಕಾರಕ್ಕೆ ಅಭದ್ರತೆ ಎಂಬ ಪ್ರಶ್ನೆಯೇ ಅಸಂಬಂಧವಾದದ್ದು, ಸರ್ಕಾರವೂ ಭದ್ರವಾಗಿದೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,ನಮ್ಮ ಮುಖ್ಯಮಂತ್ರಿ ಕೂಡ ಬಂದೋಬಸ್ತ್ ಆಗಿದ್ದಾರೆ. ಸಿದ್ದರಾಮಯ್ಯ ತಮ್ಮದೇ ಆದ ಚಾಕಚಕ್ಯತೆಯಿಂದ ಆಡಳಿತ ನಡೆಸುತ್ತಿದ್ದಾರೆ.
ಉತ್ತಮ ಬಜೆಟ್ ಕೊಟ್ಟು ಒಳ್ಳೆಯ ಸರ್ಕಾರ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪರ ಸಚಿವ ಕೆ ಹೆಚ್ ಮುನಿಯಪ್ಪ ಬ್ಯಾಟ್ ಬೀಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ರೀತಿಯ ಅಪಾಯವಿಲ್ಲ, ನಾನು ಬೇರೆ ರೀತಿಯ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ನನಗೆ ಬಡವರಿಗೆ ಅಕ್ಕಿ ಕೊಡುವ ಜವಾಬ್ದಾರಿ ಕೊಟ್ಟಿದ್ದಾರೆ, ಆ ಜವಾಬ್ದಾರಿಯನ್ನು ಮಾಡುತ್ತಿದ್ದೇನೆ. ಈ ಸಂಧರ್ಭದಲ್ಲಿ ಬೇರೆ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದರು.
ರಾಜ್ಯದ ಆಯಾಯ ಭಾಗದ ಜಿಲ್ಲೆಗಳ ಜನರ ಆಹಾರ ಪದ್ದತಿಗೆ ಅನುಗುಣವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅಕ್ಕಿಯ ಜೊತೆಗೆ ರಾಗಿ ವಿತರಣೆ ಮಾಡಿದರೆ, ಮತ್ತೆ ಕೆಲವೆಡೆ ಜೋಳ ವಿತರಣೆ ಮಾಡಲಾಗುತ್ತಿದೆ, ಹತ್ತು ಕೆ ಜಿ ಉಚಿತ ಅಕ್ಕಿ ವಿತರಣೆ ಮಾಡುವ ಗುರಿಯಿದೆ. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಹಾಗಾಗಿ 5 ಕೆ ಜಿ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ. ಶೀಘ್ರದಲ್ಲೇ 10 ಕೆ ಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಆಂಧ್ರ, ತೆಲಂಗಾಣ, ಛತ್ತೀಸ್ ಘಡ ರಾಜ್ಯಗಳಿಂದ ಅಕ್ಕಿ ಪಡೆಯಲು ಮುಂದಾಗಿದ್ದೇವೆ.
ಇನ್ನೂ ಈ ವೇಳೆ ಸಚಿವ ಬೈರತಿ ಸುರೇಶ್ ಮಾತನಾಡಿ, ಶೀಘ್ರದಲ್ಲೆ ಮೈಸೂರು ಮಹನಗರ ಪಾಲಿಕೆಗೆ ಚುನಾವಣೆ ಮಾಡುತ್ತೇವೆ. ಚುನಾವಣೆ ಮುಂದೂಡುವ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ. ಮುಖ್ಯಮಂತ್ರಿ ಮತ್ತು ನಾನು ಚುನಾವಣೆ ನಡೆಸಲು ಉತ್ಸೂಕರಾಗಿದ್ದೇವೆ. ಲೋಕಸಭ ಚುನಾವಣೆಗು ಪಾಲಿಕೆ ಚುನಾವಣೆ ನಡೆಸುವುದಕ್ಕು ಯಾವುದೇ ಸಂಬಂಧ ಇಲ್ಲ, ಲೋಕಸಭ ಚುನಾವಣೆ ಇರುವುದು ಏಪ್ರಿಲ್ ನಲ್ಲಿ. ಪಾಲಿಕೆ ಚುನಾವಣೆ ಮೀಸಲಾತಿ ಬಗ್ಗೆಯು ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ನಮಗೆ ಚುನಾವಣೆ ಪ್ರಕ್ರಿಯೆ ನಡೆಸಲು 15 ದಿನ ಸಾಕು, ನಾವು ಚುನಾವಣೆ ಮಾಡೇ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ಮತ್ತು ಡಿಸಿಎಂ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಹೇಳಿಕೆ ವಿಚಾರವಾಗಿ ಉತ್ತರಿಸಿ, ಪ್ರಧಾನಿ ಹೇಳಿಕೆಗೆ ಉತ್ತರ ಕೊಡುವ ದೊಡ್ಡ ವ್ಯಕ್ತಿ ನಾನ್ನಲ್ಲ. ಆದರೂ ಕೆಲವು ಸತ್ಯ ಹೇಳುತ್ತೇನೆ ಕೇಳಿ. ದೇಶದಲ್ಲಿ ಭ್ರಷ್ಟಾಚಾರದ ಪಿತಮಾಹಾರೇ ಬಿಜೆಪಿಯವರು. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಬಿಜೆಪಿ. ಅವರು ಭ್ರಷ್ಟಾಚಾರ ಮಾಡಿ ಈಗ ಅದನ್ನು ನಮ್ಮ ಮೇಲೆ ಹೇಳುತ್ತಾರೆ, ಇಡೀ ರಾಜ್ಯದ ಜನರೇ ಹೇಳುತ್ತಿದ್ದಾರೆ ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಅಂಥ ಎಂದು ಹೇಳಿದರು.
ಬೆಳಗಾವಿಯಲ್ಲಿ ಗುತ್ತಿಗೆದಾರ ಪ್ರತಿಭಟನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಗುತ್ತಿಗೆದಾರರು ನೇರವಾಗಿ ನನ್ನ ಹೆಸರು ಹೇಳಿದ್ದಾರಾ ಎಂದ ಗರಂ ಆದ ಸಚಿವ ಬೈರತಿ ಸುರೇಶ್ ಅವರು ಗುತ್ತಿಗೆ ವಿಚಾರಕ್ಕೂ ನನಗೂ ಏನು ಸಂಬಂಧ? ಅವೆಲ್ಲವು ಇ-ಪ್ರಕ್ಯೂರ್‌ಮೆಂಟ್ ಮೂಲಕ ನಡೆಯುವ ಪ್ರಕ್ರಿಯೆ. ಅದರಲ್ಲಿ ನಮ್ಮವರನ್ನು ಹೇಗೆ ಸೇರಿಸಲು ಸಾಧ್ಯ. ಸುಖಸುಮ್ಮನೆ ಇಂತಹ ಆರೋಪಗಳು ಅಧಿಕಾರದಲ್ಲಿದ್ದಾಗ ಕೇಳಿ ಬರುತ್ತದೆ. ಯಾರು ಟೆಂಡರ್‌ನಲ್ಲಿ ಭಾಗವಹಿಸುತ್ತಾರೆ ಅಂತವರಿಗೆ ಟೆಂಡರ್ ಸಿಗುತ್ತದೆ. ಬೆಳಗಾವಿ ಗುತ್ತಿಗೆದಾರರ ಪ್ರತಿಭಟನೆ ವಿಚಾರ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.












Click it and Unblock the Notifications