ಹಿಂಬಡ್ತಿ ಭೀತಿಯಲ್ಲಿರುವ ನೌಕರರಿಗಾಗಿ ಸುಗ್ರೀವಾಜ್ಞೆ
ಬೆಂಗಳೂರು, ಆ.08 : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತಕಾಯಲು ಸರ್ಕಾರ ಮುಂದಾಗಿದೆ. ಹಿಂಬಡ್ತಿ ಭೀತಿಯಲ್ಲಿರುವ ನೌಕರರಿಗಾಗಿ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಕೈಗೊಂಡಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆ ಬಳಿಕ ಈ ಕುರಿತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದರು.

'೨೦೦೨ರ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದೆ. ಇದರಿಂದ ಹಿಂಬಡ್ತಿಯ ಆತಂಕದಲ್ಲಿರುವ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ನೀರಾವರಿ, ಲೋಕೋಪಯೋಗಿ ಮತ್ತು ಇಂಧನ ಇಲಾಖೆಯಲ್ಲಿರುವ ನೌಕರರಿಗೆ ಸುಗ್ರೀವಾಜ್ಞೆಯಿಂದ ಅನುಕೂಲವಾಗಲಿದೆ' ಎಂದು ಸಚಿವರು ಹೇಳಿದರು.
'ಬಡ್ತಿ ಮೀಸಲಾಯಿ ಕಾಯ್ದೆ ಅನ್ವಯ ಸೌಲಭ್ಯ ಪಡೆದ ನೌಕರರ ಹಿತ ಕಾಪಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ನೀಡಿದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ' ಎಂದು ಸಚಿವರು ವಿವರಿಸಿದರು.
ಏನಿದು ವಿವಾದ? : ಬಡ್ತಿಯಲ್ಲಿ ಎಸ್‌ಸಿ/ಎಸ್‌ಟಿ ನೌಕರರಿಗೆ ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರ ಮತ್ತು ಇತರರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 2017ರ ಫೆಬ್ರವರಿಯಲ್ಲಿ ತೀರ್ಪು ನೀಡಿದ ಕೋರ್ಟ್ ಬಡ್ತಿ ಮೀಸಲಾತಿ ಕಾಯ್ದೆಯನ್ನು ರದ್ದುಪಡಿಸಿತ್ತು.
ಮೇ 9ರೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಆಗಸ್ಟ್ 9ರೊಳಗೆ ಹೊಸ ಪಟ್ಟಿ ಅನ್ವಯ ಬಡ್ತಿ ನೀಡಿ ಹಿಂದೆ ಆಗಿರುವ ಪ್ರಮಾದ ಸರಿಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.












Click it and Unblock the Notifications