ವಿಪಕ್ಷ ನಾಯಕನ ಆಯ್ಕೆ ಬೆಂಗಳೂರಿಗೆ ಶಿಫ್ಟ್; ಇಬ್ಬರು ವೀಕ್ಷಕರ ಆಗಮನ!
ಬೆಂಗಳೂರು, ಜುಲೈ 03: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿ ಭೇಟಿ ವೇಳೆಯಲ್ಲಿ ಕರ್ನಾಟಕದ ವಿರೋಧ ಪಕ್ಷದ ನಾಯಕನ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ವಿಪಕ್ಷ ನಾಯಕನ ಆಯ್ಕೆ ಕಸರತ್ತು ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದಕ್ಕಾಗಿಯೇ ಕೇಂದ್ರದ ಇಬ್ಬರು ವೀಕ್ಷಕರು ಆಗಮಿಸುತ್ತಿದ್ದಾರೆ.
ಭಾನುವಾರ ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕವೂ ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಒಮ್ಮತ ಮೂಡಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ನಡೆದ ಸರಣಿ ಸಭೆಗಳ ಬಳಿಕವು ಯಾವುದೇ ಘೋಷಣೆಯಾಗಿಲ್ಲ.

ಕರ್ನಾಟಕದಲ್ಲಿ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕನೇ ಇಲ್ಲದೇ ಪ್ರತಿಪಕ್ಷ ಬಿಜೆಪಿ ಕಲಾಪವನ್ನು ಎದುರಿಸಲಿದೆ. ಸಂಜೆಯ ವೇಳೆಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಯಡಿಯೂರಪ್ಪ ಹೇಳಿದ್ದೇನು?; ಭಾನುವಾರ ರಾತ್ರಿ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಕೇಂದ್ರ ಚುನಾವಣಾ ಸಮಿತಿ ಸದಸ್ಯರೂ ಆಗಿರುವ ಬಿ. ಎಸ್. ಯಡಿಯೂರಪ್ಪ. "ನಾಳಿನ (ಸೋಮವಾರ) ಕಲಾಪಕ್ಕೆ ವಿರೋಧ ಪಕ್ಷದ ನಾಯಕರು ಇರುವುದಿಲ್ಲ" ಎಂದು ಹೇಳಿದರು.
"ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಸೋಮವಾರ ಕೇಂದ್ರದಿಂದ ವೀಕ್ಷಕರಾದ ವಿನೋದ್ ತಾವ್ಡೆ, ಮನ್ಸುಖ್ ಮಾಂಡವೀಯ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ" ಎಂದು ಹೇಳಿದರು.
ಭಾನುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಆದರೆ ಶನಿವಾರ ರಾತ್ರಿ ಸಭೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಅಲ್ಲದೇ ಹೈಕಮಾಂಡ್ ನಾಯಕರು ಬಿ. ಎಸ್. ಯಡಿಯೂರಪ್ಪಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರು.
ಇಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆ ಇದೆ. ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ವಿರೋಧ ಪಕ್ಷದ ನಾಯಕನ ಘೋಷಣೆ ಇಂದು ಆಗುತ್ತದೆಯೇ? ಅಥವ ದೆಹಲಿಯಲ್ಲಿ ಆಗುತ್ತದೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೆಸರು ಕೇಳಿ ಬರುತ್ತಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ವಿಪಕ್ಷ ನಾಯಕ ಮಾಡಬೇಕು ಎಂಬ ಬೇಡಿಕೆಯೂ ಇದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ, ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ವಿಜಯೇಂದ್ರ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವ ಸಾಧ್ಯತೆ ಕಡಿಮೆ ಇದೆ.
ಕಾಂಗ್ರೆಸ್‌ಗೆ ತಿರುಗೇಟು; ಕರ್ನಾಟಕ ಕಾಂಗ್ರೆಸ್ ವಿಪಕ್ಷ ನಾಯಕನ ವಿಚಾರದಲ್ಲಿ ಬಿಜೆಪಿಯನ್ನು ಲೇವಡಿ ಮಾಡುತ್ತಿದೆ. ಇದಕ್ಕೆ ಭಾನುವಾರ ತಿರುಗೇಟು ನೀಡಿದ್ದ ಬಿಜೆಪಿ ಟ್ವೀಟ್ ಮಾಡಿ, 'ನಮ್ಮ ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ಸದನ ಪ್ರಾರಂಭಕ್ಕಿಂತಲೂ ಮೊದಲೆ, ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತಲೆ ಕೆರೆದುಕೊಳ್ಳುವುದನ್ನು ಬಿಟ್ಟು, ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿರುವ ನಮ್ಮ ಪಕ್ಷದ ಶಾಸಕರನ್ನು ಹೇಗೆ ಎದುರಿಸಬೇಕೆಂದು ತಮ್ಮ ಸರಕಾರಕ್ಕೆ ಸಲಹೆ ನೀಡಲಿ' ಎಂದು ಹೇಳಿತ್ತು.












Click it and Unblock the Notifications