ಡಿಕೆಶಿ, ಬೇಗ್ ಸೇರ್ಪಡೆಗೆ ವಿಪಕ್ಷಗಳ ವಿರೋಧ!
ಬೆಂಗಳೂರು, ಜ. 1 : ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ನಿರ್ಧಾರಕ್ಕೆ ಸ್ವತಃ ಕಾಂಗ್ರೆಸ್ ಶಾಸಕರು ಮತ್ತು ವಿರೋಧ ಪಕ್ಷದ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಆರೋಪಗಳನ್ನು ಎದುರಿಸುತ್ತಿರುವ ಡಿಕೆ ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬುಧವಾರ ಸಂಜೆ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ವಿರೋಧ ಪಕ್ಷ ಬಿಜೆಪಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಹಲವಾರು ಜನ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. [ಎಸ್.ಎಂ.ಕೃಷ್ಣ ಮನೆ ತಲುಪಿದ ಕಾಂಗ್ರೆಸ್ ಬಂಡಾಯ]
ಸಂಪುಟ ವಿಸ್ತರಣೆಗೆ ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ, ರಾಣೆ ಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಯಾರು ಏನು ಹೇಳಿದರು ನೋಡೋಣ

ಇದು ಖಂಡನೀಯ
ಸಿಎಂ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಪುನಃ ಭ್ರಷ್ಟರನ್ನು ಕರೆತರುವ ಪ್ರಯತ್ನ ನಡೆದಿದೆ. ಸಂತೋಷ್ ಲಾಡ್ ವಿಚಾರದಲ್ಲಿ ನಾವು ಸಿಎಂಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿದ್ದೆವು. ನಂತರ ಸಿದ್ದರಾಮಯ್ಯ ಅವರನ್ನು ಕೈ ಬಿಟ್ಟರು. ಸದ್ಯ ಇಬ್ಬರು ಕಳಂಕಿತರನ್ನು ಆ ಹುದ್ದೆಗೆ ತರಲು ಚಿಂತಿಸುತ್ತಿದ್ದಾರೆ ಇದು ಖಂಡನೀಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಂಪುಟ ವಿಸ್ತರಣೆಯನ್ನು ಖಂಡಿಸಿದ್ದಾರೆ.

ಸಂಪುಟ ವಿಸ್ತರಣೆ ಮುಂದೂಡಿ
ಅನುಭವಿ ಮತ್ತು ಹಿರಿಯ ಶಾಸಕರನ್ನು ಕಡೆಗಣಿಸಿ ಸಂಪುಟ ವಿಸ್ತರಣೆ ಮಾಡುವುದು ಸರಿಯಲ್ಲ. ಕೂಡಲೇ ಇಂದು ನಿಗದಿಯಾಗಿರುವ ಮುಹೂರ್ತವನ್ನು ಮುಂದೂಡುವಂತೆ ಅಫ್ಜಜಲ್ ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಶಾಸಕರ ಸಾಮರ್ಥ್ಯದ ಸಮಗ್ರ ಮಾಹಿತಿ ಪಡೆದು ನಂತರ ಅರ್ಹರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಹಿರಿಯ ಶಾಸಕರನ್ನು ಕಡೆಗಣಿಸಲಾಗುತ್ತಿದೆ. ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಪುಟದಲ್ಲಿ ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ಸಚಿವರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹೋರಾಟ ಮಾಡುತ್ತೇವೆ
ಕಳಂಕಿತ ಶಾಸಕ ಡಿಕೆ ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಡಿಕೆಶಿ ಸಂಪುಟ ಸೇರ್ಪಡೆಗೆ ಕಾಂಗ್ರೆಸ್‌ನಲ್ಲಿ ಒತ್ತಡವಿತ್ತು. ವರಿಷ್ಠರ ಮಾತಿನಂತೆ ಸಿದ್ದರಾಮಯ್ಯ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಸಿಎಂ ಎಚ್ಚರವಹಿಸಬೇಕು
ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಇಬ್ಬರೂ ಕಳಂಕಿತರಾಗಿದ್ದು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಬಿಜೆಪಿ ವತಿಯಿಂದ ಹೋರಾಟ ಮಾಡುವುದಾಗಿ ಪಕ್ಷದ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ. ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮುನ್ನ ಮುಖ್ಯಮಂತ್ರಿಗಳು ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಅಪಹಾಸ್ಯಕ್ಕೆ ಕಾರಣವಾದೀತು ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಿ
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕದ ಭಾಗದ ಶಾಸಕರಿಗೆ ಆದ್ಯತೆ ನೀಡಬೇಕು ಎಂದು ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ಒತ್ತಾಯಿಸಿದ್ದಾರೆ ಸಚಿವ ಸಂಪುಟ ವಿಸ್ತರಣೆ ಮಾಡುವ ನಿರ್ಧಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಣಾಮ ಎದುರಿಸಬೇಕಾಗುತ್ತದೆ
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಪರಿಗಣಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಣೆ ಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಎಚ್ಚರಿಕೆ ನೀಡಿದ್ದಾರೆ. ತಮಗೆ ಅವಕಾಶ ನೀಡದಿದ್ದರೆ ಅದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.












Click it and Unblock the Notifications