ಬಿಜೆಪಿ ಸೇರಿದ ಕಿರಣ್ ಬೇಡಿ ಅವರಿಗೆ ಬಹಿರಂಗ ಪತ್ರ!
ಬೆಂಗಳೂರು, ಜ.17 : ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರಿರುವುದು ದೆಹಲಿ ವಿಧಾನಸಭೆ ಚುನಾವಣೆಯ ದಿಕ್ಕನ್ನೇ ಬದಲಿಸಿದೆ. ಆಮ್ ಆದ್ಮಿ ಪಕ್ಷದ ಅಭಿಮಾನಿಯೊಬ್ಬರು ಬಿಜೆಪಿ ಸೇರಿರುವ ಕಿರಣ್ ಬೇಡಿ ಅವರಿಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು ಬಹಿರಂಗವಾದ ಪತ್ರ ಬರೆದಿದ್ದಾರೆ.
ಬಿಜೆಪಿ ಸೇರಿರುವ ನಿಮ್ಮ ನಿರ್ಧಾರ ನಮಗೆ ಅಚ್ಚರಿಯನ್ನು ಉಂಟುಮಾಡಿಲ್ಲ. ನೀವು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ನಿಮ್ಮ ಸ್ನೇಹಿತ ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಲು ಆರಂಭಿಸಿದಾಗಲೇ ನೀವು ಬಿಜೆಪಿ ಸೇರಬಹುದು ಎಂಬ ನಿರೀಕ್ಷೆ ನಮಗೆ ಇತ್ತು. [ನಿನ್ನೆ ಕಿರಣ್ ಬೇಡಿ, ಇಂದು ಶಾಜಿಯಾ ಇಲ್ಮಿ ಬಿಜೆಪಿಗೆ ಭರ್ತಿ]

ಐಪಿಎಸ್ ಅಧಿಕಾರಿಯಾಗಿದ್ದಾಗ ನೀವು ಕಾರ್ಯನಿರ್ವಹಿಸುತ್ತಿದ್ದ ರೀತಿಯ ಕಥೆಗಳನ್ನು ಕೇಳುತ್ತಾ ಬೆಳೆದವರು ನಾವು. ನಿಮ್ಮ ಧೈರ್ಯ, ಸಾಹಸಗಳನ್ನು ಪೋಷಕರು ನಮಗೆ ಹೇಳುತ್ತಿದ್ದರು. ನೋ ಪಾರ್ಕಿಂಗ್‌ನಲ್ಲಿ ನಿಂತ ಕಾರುಗಳ ವಿರುದ್ಧ ನೀವು ಮಾಡಿದ ಅಭಿಯಾನದ ಬಗ್ಗೆ ನಮಗೆ ಚಿಕ್ಕಂದಿನಲ್ಲಿಯೇ ಕಥೆಗಳನ್ನು ಹೇಳುತ್ತಿದ್ದರು.
ಅಣ್ಣಾ ಹಜಾರೆ ಅವರ ಹೋರಾಟದಿಂದ ನಿಮ್ಮ ವಿಚಾರಗಳನ್ನು ಗೌರವಿಸುತ್ತಾ ಬಂದ ನಮಗೆ ನಿಮ್ಮ ಈ ಪರಿವರ್ತನೆಗೆ ಕಾರಣವೇನು? ಎಂಬುದು ತಿಳಿಯುತ್ತಿಲ್ಲ. ದೆಹಲಿ ಮುಖ್ಯಮಂತ್ರಿ ಹುದ್ದೆಗೇರುವ ಉತ್ಸಾಹದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿದ್ದೀರೆನೋ?. [ದೆಹಲಿಯಲ್ಲಿ ಬಿಜೆಪಿ ಸರ್ಕಾರ, ಇದು ಓದುಗರ ತೀರ್ಪು]
ಸದ್ಯ ನೀವು ಬಿಜೆಪಿ ಸೇರಿಕೊಂಡಾಗಿದೆ. ಆದರೆ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
* ಬಿಜೆಪಿ ಜನಲೋಕಪಾಲ್ ಮಸೂದೆಗೆ ಒಪ್ಪಿಗೆ ನೀಡುತ್ತದೆಯೇ?
* ನೀವು ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರೊಂದಿಗೆ ಸಂತಸದಿಂದ ಕೆಲಸ ಮಾಡುವಿರೇ?
* ರಾಜಕೀಯಕ್ಕೆ ಬರುವುದಾದದರೆ ಆಪ್‌ಅನ್ನು ಏಕೆ ಸೇರಲಿಲ್ಲ, ದೇಶಕ್ಕಿಂತ ನಿಮ್ಮ ಪ್ರತಿಷ್ಠೆ ಮುಖ್ಯವಾಗಿತ್ತೆ?
* ನಿಮ್ಮ ಕಳೆದ ವರ್ಷದ ಬೇಡಿಕೆಯಂತೆ ಬಿಜೆಪಿ ಆರ್‌ಟಿಐ ವ್ಯಾಪ್ತಿಗೆ ಒಳಪಡಲು ಒಪ್ಪಿಗೆ ನೀಡುತ್ತದೆಯೇ?
ನಿಮ್ಮ ಮುಂದಿನ ರಾಜಕೀಯ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇವೆ. ಬಿಜೆಪಿ ಪಕ್ಷದಲ್ಲಿಯೂ ನಿಮ್ಮ ಸಿದ್ಧಾಂತಗಳಿಗೆ ಧಕ್ಕೆ ಉಂಟಾದರೆ ಅದನ್ನು ಕಠೋರವಾಗಿ ಖಂಡಿಸಲಿದ್ದೀರಿ ಎಂದು ನಾವು ದೃಢವಾಗಿ ನಂಬಿದ್ದೇವೆ












Click it and Unblock the Notifications