ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ

By ರವಿ ಮಿರಸ್ಕರ್
|
Google Oneindia Kannada News

ಬೆಂಗಳೂರು, ಮಾರ್ಚ್ 28 : ಒಂದು ಪ್ರದೇಶ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆ ಅಭಿವೃದ್ಧಿಯ ಸೂಚಕವಾಗಿದೆ. ರಸ್ತೆಗಳ ಅಭಿವೃದ್ಧಿಯಾದಂತೆ ರಸ್ತೆ ಅಪಘಾತಗಳ ಪ್ರಮಾಣವೂ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.

ವೇಗದ ಭರಾಟೆಯಲ್ಲಿ ಮೆಟ್ರೋ ನಗರಗಳು ಸೇರಿದಂತೆ ನಗರ, ಪಟ್ಟಣಗಳಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಆಗಬಹುದಾದ ವಿಳಂಬ, ತತ್‍ಕ್ಷಣದಲ್ಲಿ ಗಾಯಾಳುಗಳು ನೆರವಿಗೆ ಯಾರು ಮುಂದೆ ಬಾರದಿರುವುದು, ಚಿಕಿತ್ಸೆಯ ವೆಚ್ಚ ಭರಿಸಲು ಹಣಕಾಸಿನ ಸಮಸ್ಯೆ, ಕಾನೂನಿನ ತೊಡಕುಗಳು ಮುಂತಾದ ಕಾರಣಗಳಿಂದಾಗಿ ಗಾಯಾಳುಗಳಿಗೆ ಅಪಘಾತದ ನಂತರ ಸರಿಯಾದ ಚಿಕಿತ್ಸೆ ಲಭ್ಯವಾಗದೇ ಸಾವನ್ನಪ್ಪುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

santwana harish yojana

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ವೆಬ್‍ಸೈಟ್ ಆಧರಿಸಿದ ಅಂಕಿ-ಸಂಖ್ಯೆ ಪ್ರಕಾರ 2014ರಲ್ಲಿ ಕರ್ನಾಟಕದಲ್ಲಿ 43,694 ರಸ್ತೆ ಅಫಘಾತಗಳು ಸಂಭವಿಸಿದ್ದು, ಈ ಸಾಲಿನಲ್ಲಿ ದೇಶಕ್ಕೆ ಹೋಲಿಸಿದಾಗ ರಾಜ್ಯವು ರಸ್ತೆ ಅಪಘಾತ ಪ್ರಕರಣಗಳಲ್ಲಿ 4ನೇ ಸ್ಥಾನದಲ್ಲಿತ್ತು. 2013ರಲ್ಲಿ ಎರಡನೇ ಸ್ಥಾನದಲ್ಲಿತ್ತು. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

ನೂತನ ಯೋಜನೆ ಆರಂಭ : ಕರ್ನಾಟಕ ರಾಜ್ಯ ಸರ್ಕಾರ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸೂಕ್ತ ಸಹಾಯ ಹಾಗೂ ತತ್‍ಕ್ಷಣದ ಚಿಕಿತ್ಸೆ ಲಭ್ಯವಾದಲ್ಲಿ ಬಹಳಷ್ಟು ಪ್ರಾಣಗಳನ್ನು ಉಳಿಸಿಕೊಳ್ಳಬಹುದು ಎಂಬ ಮಾನವೀಯ ಉದ್ದೇಶದೊಂದಿಗೆ ಇಡೀ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ 'ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್' ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದೆ.

ರಾಜ್ಯದ ವ್ಯಾಪ್ತಿಯೊಳಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುವ ಗಾಯಾಳುಗಳಿಗೆ ಅವರ ಪೂರ್ವಾಪರ ವಿಚಾರಿಸದೆ ತುರ್ತಾಗಿ ನಗದು ರಹಿತ ಉನ್ನತ ಗುಣಮಟ್ಟದ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಕ್ಕೆ ತಂದಿರುವ ಈ ಯೋಜನೆ ಇದಾಗಿದೆ. [ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ]

siddaramaiah

ಯೋಜನೆಗೆ ಹರೀಶ್ ಹೆಸರು : 2016ರ ಫೆಬ್ರವರಿ 16ರಂದು ಬೆಂಗಳೂರಿನ ನೆಲಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತುಮಕೂರಿನ ಯುವಕ ಹರೀಶ್ ಸಾಯುವ ಮುನ್ನ ತನ್ನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದರಿಂದ ಸರ್ಕಾರ ಈ ಯೋಜನೆಗೆ ಹರೀಶ್ ಹೆಸರಿಡುವ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ.

ರಾಜ್ಯದಲ್ಲಿ ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ ಮತ್ತು ಜ್ಯೋತಿ ಸಂಜೀವಿನಿ ಎಂಬ ಯೋಜನೆಗಳು ಜಾರಿಯಲ್ಲಿದ್ದು, ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ಯೋಜನೆಗಳ ವ್ಯಾಪ್ತಿಗೆ ಒಳಪಡುತ್ತಿದ್ದಾನೆ.

ಸಹಾಯವಾಣಿ ಸಂಖ್ಯೆ : ಕರ್ನಾಟಕ ರಾಜ್ಯದ ಗಡಿ ವ್ಯಾಪ್ತಿಯೊಳಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಅಪಘಾತಕ್ಕೆ ಒಳಗಾಗುವ ಯಾವುದೇ ವ್ಯಕ್ತಿ/ಸಂತ್ರಸ್ತರು ರಸ್ತೆ ಅಪಘಾತದಲ್ಲಿ ಗಾಯಗೊಂಡಾಗ ವ್ಯಕ್ತಿ ಅಥವಾ ಸ್ಥಳದಲ್ಲಿದ್ದಂತಹ ಸಾರ್ವಜನಿಕರು ಸರ್ಕಾರಿ ಆಂಬುಲೆನ್ಸ್ 108 ಅಥವಾ ಸಹಾಯವಾಣಿ 104 ಸಂಖ್ಯೆಗೆ ಕರೆ ಮಾಡಿದಲ್ಲಿ ಅಂಬುಲೆನ್ಸ್ ವಾಹನ ಘಟನಾ ಸ್ಥಳಕ್ಕೆ ಬಂದು ಸ್ಥಳದಲ್ಲಿ ಗಾಯಾಳುವಿಗೆ ವೈದ್ಯಕೀಯ ಸಹಾಯಕರು ಪ್ರಥಮ ಚಿಕಿತ್ಸೆ ನೀಡಿ ನಂತರ ಸಂತ್ರಸ್ತನ ಮುಂದಿನ ಚಿಕಿತ್ಸೆಗೆ ಗಾಯದ ತೀವ್ರತೆಯ ಆಧಾರದ ಮೇಲೆ ಗುರುತಿಸಲ್ಪಟ್ಟ ಹತ್ತಿರದ ಅಥವಾ ಸೂಕ್ತ ಆಸ್ಪತ್ರೆಗೆ ಸಾಗಿಸುವರು.

road accident

ಅಲ್ಲದೇ ಆಸ್ಪತ್ರೆಗೆ ಖಾಸಗಿ ವಾಹನ/ಆಂಬ್ಯುಲೆನ್ಸ್‌ನಲ್ಲಿಯೂ ಹೋಗಿ ರೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ಗಾಯಾಳು ವ್ಯಕ್ತಿ ಯಾವುದೇ ದಾಖಲಾತಿ ಹಾಜರುಪಡಿಸಬೇಕಾಗಿಲ್ಲ. ಆಸ್ಪತ್ರೆಗೆ ಸೇರ್ಪಡೆಯಾದ ತಕ್ಷಣ ಗಾಯಾಳು ವ್ಯಕ್ತಿಯ ವಿವರವನ್ನು ಆಸ್ಪತ್ರೆಯಿಂದ ಟ್ರಸ್ಟಿನ ಕಾಲ್ ಸೆಂಟರ್‌ ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ನಂತರ ಕ್ಷಣಾರ್ಧದಲ್ಲಿ ಕಾಲ್ ಸೆಂಟರಿನಿಂದ ಎಸ್.ಎಂ.ಎಸ್. ಮೂಲಕ ಒಂದು ನಿರ್ದಿಷ್ಟ ಸಂಖ್ಯೆ ಆಸ್ಪತ್ರೆಗೆ ರವಾನೆಯಾದ ಬಳಿಕ ಚಿಕಿತ್ಸೆ ಆರಂಭಗೊಳ್ಳುತ್ತದೆ.

25 ಸಾವಿರದ ತನಕ ಉಚಿತ ಚಿಕಿತ್ಸೆ : ಚಿಕಿತ್ಸೆ ಆರಂಭದ ಮೊದಲ 48 ಗಂಟೆ ಅವಧಿಗೆ 25000 ರೂ. ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ 1000 ರೂ. ಗಳಿಂದ 25000 ರೂ. ವರೆಗಿನ ಸೇವೆಗಳು ಸೇರಿವೆ. ಗಾಯದ ತೀವ್ರತೆಯನ್ನು ಸ್ಥಿರಗೊಳಿಸುವುದು, ಹೊಲಿಗೆ ಹಾಕುವುದು ಮತ್ತು ಡ್ರೆಸ್ಸಿಂಗ್ ಮಾಡುವುದು, ತೀವ್ರ ನಿಗಾ ಘಟಕ ಹಾಗೂ ವಾರ್ಡ್ ಆಧಾರಿತ ಚಿಕಿತ್ಸೆ, ಮುರಿತಗಳು, ತಲೆ, ಬೆನ್ನು ಮತ್ತು ಸುಟ್ಟ ಗಾಯಗಳಿಗೆ ಚಿಕಿತ್ಸೆ, ರಕ್ತ ವರ್ಗಾವಣೆದಂತಹ ಚಿಕಿತ್ಸಾ ಸೌಲಭ್ಯ ಸೇರಿದಂತೆ ತಜ್ಞರ ತಂಡ ನಿರ್ಧರಿಸಿರುವ ಸುಮಾರು 25 ಬಗೆಯ ಪ್ಯಾಕೇಜ್(ಸೇವೆಗಳು) ಇದರಲ್ಲಿವೆ. ಮೊದಲ 48 ಗಂಟೆ ಅವಧಿಯ 25000 ರೂ. ನಂತರದ ಚಿಕಿತ್ಸೆಯ ಹಣವನ್ನು ರೋಗಿ ಭರಿಸಬೇಕಾಗುತ್ತದೆ ಎನ್ನುತ್ತಾರೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ಎನ್.ಹೆಚ್.ಹಾದಿಮನಿ.

ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಸರ್ಕಾರಿ ಆಸ್ಪತ್ರೆಗಳು, ಸಾರ್ವಜನಿಕ, ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜೊತೆ ಈಗಾಗಲೇ ವಿವಿಧ ಯೋಜನೆಯಡಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಯ ಪರಿಣಾಮಕಾರಿ ಹಾಗೂ ತ್ವರಿತ ಅನುಷ್ಠಾನಕ್ಕಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಒಪ್ಪಂದ ಮಾಡಿಕೊಂಡ ಆಸ್ಪತ್ರೆಯೊಂದಿಗೆ ಅನುಷ್ಠಾನದ ಎಲ್ಲ ಪ್ರಕ್ರಿಯೆಗಳನ್ನು ಇಂಪ್ಲಿಮೆಂಟ್ ಸಪೋರ್ಟ್ ಎಜೆನ್ಸಿಯೂ ಎಂ.ಎಸ್.ಎಸ್. ಅಪ್ಲಿಕೇಷನ್ ಇ-ತಂತ್ರಜ್ಞಾನ ಮೂಲಕ ವ್ಯವಹಾರ ನಡೆಸುತ್ತದೆ.

ಕಾಲಕಾಲಕ್ಕೆ ಒಡಂಬಡಿಕೆ ಮಾಡಿಕೊಳ್ಳುವ ಆಸ್ಪತ್ರೆಗಳ ವಿವರ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ವೆಬ್‍ಸೈಟ್ www.mss.kar.nic.in ಮತ್ತು ಟೋಲ್ ಫ್ರೀ ಸಂಖ್ಯೆ 1800-425-8330ನ್ನು ಸಂಪರ್ಕಿಸಬಹುದಾಗಿದೆ.

ಲೇಖಕರು : ರವಿ ಮಿರಸ್ಕರ್
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಕಲಬುರಗಿ

English summary
Karnataka Chief Minister Siddaramaiah on March 8, 2016 launched Mukhyamantri Santwana Harish Yojana. Under the scheme road accident victims will be given free treatment for the first 48 hours at any hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X