ಬಿಸಿಲು ಜಾಸ್ತಿಯಾಗಿರುವಾಗ ಐಸ್ ಕ್ರೀಂ ಸೇರಿದಂತೆ ಈ ಆಹಾರಗಳನ್ನು ಯಾವ ಕಾರಣಕ್ಕೂ ಸೇವಿಸಬಾರದು!
ಬೇಸಿಗೆಯಲ್ಲಿ ತಾಪಮಾನ ಹೆಚ್ಚುತ್ತಿರುವಂತೆ, ತಾಪಮಾನದಿಂದ ಉಂಟಾಗುವ ಕಾಯಿಲೆಗಳು ಕೂಡಾ ಜಾಸ್ತಿಯಾಗುತ್ತಿವೆ. ಈ ರೋಗಗಳಿಂದ ಮುನ್ನೆಚ್ಚರಿಕೆ ವಹಿಸಲು ಮತ್ತು ದೇಹದಲ್ಲಿನ ನೀರಿನಂಶವನ್ನು ಕಾಪಾಡಿಕೊಳ್ಳಲು ಹಲವಾರು ಮಾರ್ಗಗಳಿವೆ. ದೇಹ ಮತ್ತು ಕರುಳನ್ನು ತಂಪಾಗಿ ಮತ್ತು ಆರೋಗ್ಯಕರವಾಗಿಡುವಲ್ಲಿ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ಇನ್ನು ಕೆಲವು ಆಹಾರಗಳು ಡಿ ಹೈಡ್ರೇಶನ್‌ಗೆ ಕಾರಣವಾಗಬಹುದು. ಜೊತೆಗೆ ಜೀರ್ಣಕಾರಿ ಸಮಸ್ಯೆಗಳನ್ನು ಕೂಡಾ ಉಂಟುಮಾಡಬಹುದು. ಹೀಗಾಗುವಾಗ ಹೆಚ್ಚುತ್ತಿರುವ ತಾಪಮಾನವನ್ನು ನಿಭಾಯಿಸುವುದು ದೇಹಕ್ಕೆ ಕಷ್ಟವಾಗಬಹುದು. ಆದ್ದರಿಂದ, ಬೇಸಿಗೆಯಲ್ಲಿ ಕೆಲವು ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು.

ಐಸ್ ಕ್ರೀಂ:
ಯಾವತ್ತೋ ಒಂದು ಸಲ ಐಸ್ ಕ್ರೀಂ ತಿನ್ನುವುದು ಸರಿ.ಆದರೆ ಬೇಸಿಗೆ ಬಿಸಿ ಜಾಸ್ತಿ, ಬೇಸಿಗೆಯಿಂದ ಪರಿಹಾರ ಪಡೆಯುವ ಸಲವಾಗಿ ಐಸ್ ಕ್ರೀಂ ತಿನ್ನುತ್ತಿದರೆ ನೀವು ಬಹಳ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದೇ ಅರ್ಥ. ಐಸ್ ಕ್ರೀಂ ನಿಮ್ಮ ಬಾಯಿಯನ್ನು ಮಾತ್ರ ತಂಪಾಗಿಸುತ್ತದೆ ಹೊರತು ದೇಹವನ್ನು ಖಂಡಿತಾ ಅಲ್ಲ.

ಕಾಫಿ:
ನಮ್ಮಲ್ಲಿ ಅನೇಕರಿಗೆ ಚಹಾ ಅಥವಾ ಕಾಫಿ ಇಲ್ಲ ಎಂದಾದರೆ ದಿನ ಬೆಳಗಾಗುವುವೇ ಇಲ್ಲ. ಇನ್ನು ಕೆಲವರಿಗೆ ಗಂಟೆಗೊಮ್ಮೆ ಚಹಾ ಅಥವಾ ಕಾಫಿ ಹೀರುವ ಅಭ್ಯಾಸ ಇರುತ್ತದೆ. ಬೇಸಿಗೆ ಬೇಗೆ ಜೋರಾಗಿರುವ ಕಾಲದಲ್ಲಿ ಕೆಫಿನ್ ಅಧಿಕವಾಗಿರುವ ಚಹಾ ಮತ್ತು ಕಾಫಿ ಕುಡಿಯುವುದರಿಂದ ಡಿ ಹೈಡ್ರೇಶನ್ ಸಮಸ್ಯೆ ಕಾಡಬಹುದು.
ಉಪ್ಪು ಜಾಸ್ತಿಯಿರುವ ಸಂಸ್ಕರಿಸಿದ ಆಹಾರ:
ಇನ್‌ಸ್ಟಂಟ್ ನ್ಯೂಡೆಲ್ಸ್, ಮಿಕ್ಸರ್, ಸಂಸ್ಕರಿಸಿದ ಮಾಂಸಾಹಾರ, ರೆಡಿ ಟು ಈಟ್ ಸ್ನಾಕ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುತ್ತದೆ. ಇದು ಬಾಯಾರಿಕೆಯ್ನು ಜಾಸ್ತಿ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೇ ಹೋದಲ್ಲಿ ಡಿಹೈಡ್ರೇಶನ್‌ಗೆ ಕಾರಣವಾಗುತ್ತದೆ.

ಎಣ್ಣೆಯಲ್ಲಿ ಕರಿದ ತಿನಿಸುಗಳು:
ಸಮೋಸಾ, ಬೋಂಡಾ, ಬಜ್ಜಿ, ಪಕೋಡಾ, ಚಿಪ್ಸ್, ಚಿಕನ್ ಮುಂತಾದ ಆಹಾರಗಳು ನಾಲಗೆಗೆ ರುಚಿ ನೀಡಬಹುದು. ಆದರೆ ಇದರ ಜೀರ್ಣಕ್ರಿಯೆ ಬಹಳ ನಿಧಾನವಾಗುವುದು. ಈ ರೀತಿ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾದಾಗ ದೇಹದ ಉಷ್ಣತೆ ಹೆಚ್ಚಾಗಬಹುದು.
ಬಿರಿಯಾನಿ ಮತ್ತು ಗ್ರೇವಿಗಳು:
ಅತಿಯಾದ ಎಣ್ಣೆ ಬಳಸಿ ತಯಾರಿಸಲ್ಪಟ್ಟ ಅನ್ನ, ಬಿರಿಯಾಣಿ, ಕ್ರೀಂ ಬಳಸಿ ತಯಾರಿಸಿದ ಚಿಕನ್ ಬೇಸಿಗೆ ಕಾಲದಲ್ಲಿ ಸೂಕ್ತ ಅಲ್ಲವೇ ಅಲ್ಲ. ತುಂಬಾ ಆಸೆ ಎಂದಿದ್ದರೆ ಇದನ್ನು ರಾತ್ರಿ ಭೋಜನಕ್ಕೆ ಬಳಸಬಹುದು. ಆದರೆ ಮಧ್ಯಾಹ್ನದ ಊಟಕ್ಕೆ ಮಾತ್ರ ತಿನ್ನಲೇ ಬಾರದು.
ಅತಿಯಾದ ಖಾರ ಪದಾರ್ಥಗಳು:
ಬಹಳ ಖಾರವಾಗಿರುವ ಆಹಾರ ಪದಾರ್ಥ ಅಥವಾ ತಿಂಡಿ ತಿನಿಸುಗಳನ್ನು ಬೇಸಿಗೆಯಲ್ಲಿ ಸೇವಿಸಲೇ ಬಾರದು.ಇದು ಬೆವರುವುದನ್ನು ಜಾಸ್ತಿ ಮಾಡಬಹುದು. ಇದು ಡಿಹೈಡ್ರೇಶನ್‌ಗೂ ಕಾರಣವಾಗಬಹುದು. ಒಂದು ವೇಳೆ ನಿಮಗೆ ಖಾರ ಇಷ್ಟ ಎಂದಾದರೆ ಬೇಸಿಗೆಯಲ್ಲಿ ಖಾರವನ್ನು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು.
ಸೋಡಾ ಸೇರಿದಂತೆ ತಂಪು ಪಾನೀಯ : ಕೋಲ್ಡ್ ಸೋಡಾ ಐದು ನಿಮಿಷಗಳವರೆಗೆ ಬಾಯಿಯನ್ನು ತಂಪು ಮಾಡಬಹುದು. ಆದರೆ ಇದರಲ್ಲಿ ಅತಿಯಾಗಿ ಸಕ್ಕರೆ ಬಳಸಿರುತ್ತದೆ. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದಕ್ಕೆ ಕಾರಣವಾಗಬಹುದು.

ಅಲ್ಕೋಹಾಲ್:
ಬಿಯರ್, ಕಾಕ್‌ಟೇಲ್, ಸ್ಪಿರಿಟ್ ಇದು ದೇಹದಲ್ಲಿ ನೀರಿನ ಅಭಾವಕ್ಕೆ ಕಾರಣವಾಗಬಹುದು. ಮೊದಲೇ ಹೊರಗಡೆ ತಾಪಮಾನ ಮಿತಿ ಮೀರಿರುವಾಗ ಮತ್ತೆ ದೇಹದ ಉಷ್ಣಾಂಶ ಹೆಚ್ಚಿಸುವ ಅಲ್ಕೋಹಾಲ್ ಸೇವನೆ ಆರೋಗ್ಯವನ್ನು ಬಿಗಡಾಯಿಸಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications