NWKRTC: ಕೊಡೆ ಹಿಡಿದು ಬಸ್ ಚಾಲನೆ ವಿಡಿಯೋ ವೈರಲ್: ಚಾಲಕ & ನಿರ್ವಾಹಕ ಅಮಾನತು
ಬೆಂಗಳೂರು, ಮೇ 25: ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿರುವ ಕರ್ನಾಟಕ ಸಾರಿಗೆಯಲ್ಲಿ ಲೋಪದೋಷದ ವಿಡಿಯೋ ವೈರಲ್ ಆಗಿದೆ. ಕರ್ನಾಟಕದಲ್ಲಿರುವ ನಾಲ್ಕು ವಿಭಾಗದ ಸಾರಿಗೆ ಪೈಕಿ ಉತ್ತರ ಕರ್ನಾಟಕ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ನಲ್ಲಿ ಕೊಡೆದು ಹಿಡಿದು ಚಾಲಕ ಬಸ್ ಚಾಲನೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಬಸ್‌ನ ಡ್ರವೈರ್ ಇದ್ದ ಮೇಲ್ಛಾವಣೆ ಮಳೆ ಸೋರುತ್ತಿದೆ ಎಂದು ಕೊಡೆ ಹಿಡಿದು ಬಸ್ ಚಾಲನೆ ಮಾಡಿದ್ದ ಚಾಲಕ ಮತ್ತು ವಿಡಿಯೋ ಮಾಡಿದ್ದ ನಿರ್ವಾಹಕಿಯನ್ನು ರಾಜ್ಯ ಸಾರಿಗೆ ಸಂಸ್ಥೆ (NWKRTC) ಧಾರವಾಡದ ವಿಭಾಗಾಧಿಕಾರಿಗಳು ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಜೊತೆಗೆ ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಸಾರಿಗೆ ಇಲಾಖೆ ವಿಡಿಯೋ ಕುರಿತು ಅಮಾನತು ಆದೇಶದಲ್ಲಿ, ಧಾರವಾಡ ಗ್ರಾಮಾಂತರ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. 23-05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಮಾಡಿದೆ.
ವಿಡಿಯೋಗೆ ಸಾರಿಗೆ ಇಲಾಖೆ ಸ್ಪಷ್ಟನೆ
ಈ ವೇಳೆ ಆ ಬಸ್ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಶ್ರೀಮತಿ ಅನಿತಾ ಎಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 16:30 ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಈ ವಿಡಿಯೋ ಅನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ.
ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ ಎಂದು ತಿಳಿದುಬಂದಿರುತ್ತದೆ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ.
ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಅಧಿಕಾರಿಗಳಿಂದ ಪರಶೀಲನೆ ಮಾಡಲಾಗಿ ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ಕುರಿತು ಸದರಿ ಚಾಲನಾ ಸಿಬ್ಬಂದಿಗಳಿಂದ ಸ್ಪಷ್ಟೀಕರಣ ಪಡೆಯಲಾಗಿದೆ. ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಸಾರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ ಅಮಾನತು ಆದೇಶ ಹೊರಡಿಸಿದೆ.
ತಕ್ಷಣದಿಂದಲೇ ಅಮಾನತು ಆದೇಶ ಜಾರಿ
ಬಸ್ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಎಚ್. ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ನಡತೆ ಮತ್ತು ಶಿಸ್ತು) ನಿಬಂಧನೆಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇದು ಶಿಕ್ಷಾರ್ಹ ಅಪರಾಧ ಎಂದಿರುವ ಇಲಾಖೆಯು ಇವರಿಬ್ಬರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಶುಕ್ರವಾರ ಆದೇಶಿಸಲಾಗಿದೆ.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳಕೆ ಮಾಡಿ ಬಿಟ್ಟಿರುವ ಹಳೆಯ ಬಸ್‌ಗಳನ್ನು ಒದಗಿಸಲಾಗುತ್ತದೆ. ಸಾರಿಗೆ ಸೌಲಭ್ಯ ವಿಚಾರದಲ್ಲೂ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಲೇ ಇವೆ.
ಹಾವೇರಿ, ಧಾರವಾಡ, ಗದಗ ಸೇರಿದಂತೆ ವಿವಿಧ ಭಾಗಗಳಲ್ಲಿ ಓಡಾಡುವ ಕೆಲವು ಬಸ್‌ಗಳಲ್ಲಿ ಸೋರಿಕೆ ಬಗ್ಗೆ ಹಲವು ಭಾರಿ ಕೇಳಿದ್ದೇವೆ. ಇದೀಗ ಅಂತದ್ದೆ ಘಟನೆ ನಡೆದಿದೆ. ಬಸ್ ಮೇಲ್ಛಾವಣೆ ಮಳೆಗೆ ಸೋರಿಕೆ ಆಗಿದೆ. ಇದರಿಂದಲೇ ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ್ದಾರೆ. ಇದೆಲ್ಲವು ಈ ಭಾಗದ ಬಸ್‌ಗಳಲ್ಲಿ ಅನಿವಾರ್ಯ ಮತ್ತು ಸಹಜ. ಹೀಗಿದ್ದರೂ ಸ್ಪಷ್ಟನೆ ನೀಡಿ ಅಮಾನತು ಆದೇಶ ಮಾಡಿರುವುದು ಖಂಡನೀಯ ಎಂದು ಸಾರ್ವಜನಿಕರು ಅಭಿಪ್ರಾಯ ಹೊರ ಹಾಕಿದ್ದಾರೆ.
ಅಲ್ಲದೇ ವೈರಲ್ ಆದ ಈ ಬಸ್ ವಿಡಿಯೋ, ಸರ್ಕಾರದ ಆಡಳಿತ, ಸಾರಿಗೆ ಸೌಲಭ್ಯ, ಉತ್ತರ ಕರ್ನಾಟಕದ ಕಡೆಗಣನೆಯನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಹಾಗೂ ಸರ್ಕಾರದ ಮೇಲೆ ಬಿಜೆಪಿ ನಾಯಕರು ಮುಗಿ ಬೀಳಲು ಕಾರಣವಾಗಿದೆ.












Click it and Unblock the Notifications