BREAKING: ಬಳ್ಳಾರಿ ಜೈಲಿಂದ ಬಿಡುಗಡೆ ಆಗಿದ್ದ ನಟೋರಿಯಸ್ ರೌಡಿ 'ಬಚ್ಚಾಖಾನ್' ಬಂಧನ
ಬೆಂಗಳೂರು, ಸೆಪ್ಟಂಬರ್ 04: ನಟ ದರ್ಶನ್ ಅವರ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ವೇಳೆ ಕುಖ್ಯಾತ ರೌಡಿ ಹೆಸರು ಕೇಳಿ ಬಂದಿತ್ತು. ನಟೋರಿಯಸ್ ರೌಡಿ ಬಚ್ಚಾ ಖಾನ್ ಇದ್ದ ಸೆಲ್‌ಗೆ ನಟ ದರ್ಶನ್ ಅವರನ್ನು ಸ್ಥಳಾಂತರಿಸಲಾಗುತ್ತದೆ ಎಂಬ ಮಾತು ಕೇಳಿ ಬಂದಿದೆ. ಆ ನಟೋರಿಯಸ್ ರೌಡಿ ಬಚ್ಚಾ ಖಾನ್ ಪೆರೋಲ್ ಮೇಲೆ ಹೊರಗಿದ್ದ, ಇದೀಗ ಆತನನ್ನು ಬೆಂಗಳೂರಿನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೌದು, ಬಳ್ಳಾರಿ ಜೈಲಿನಲ್ಲಿ ವಿಐಪಿ ಸೆಲ್‌ನಲ್ಲಿ ಇದ್ದ ಈತ ಇತ್ತೀಚೆಗೆ ಪೆರೋಲ್ ಪಡೆದು ಹೊರ ಬಂದಿದ್ದ. ಕೊಲೆ ಸಂಚು ಆರೋಪದಲ್ಲಿ ನಟೋರಿಯಸ್ ರೌಡಿ ಬಚ್ಚಾ ಖಾನ್ ಹಾಗೂ ಆತನ ಗ್ಯಾಂಗ್ ಅನ್ನು ರಾಜಧಾನಿಯಲ್ಲಿ ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈ ಬಚ್ಚಾಖಾನ್ ಅನ್ನು ಬಳ್ಳಾರಿಯ ವಿಐಪಿ ಬ್ಯಾರೆಕ್ ನಲ್ಲಿ ಇರಿಸಲಾಗಿತ್ತು. ಆತ ಪೆರೋಲ್ ಪಡೆದು ಹೊರ ಬಂದು ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ಹುಬ್ಬಳ್ಳಿಯಲ್ಲಿ ಮತ್ತೊಬ್ಬರಿಗೆ ಈ ಬಚ್ಚಾಖಾನ್ ಹಾಗೂ ಆತನ ಗ್ಯಾಂಗ್ ಹತ್ಯೆ ಬೆದರಿಕೆ ಹಾಕಿತ್ತು. ಆತನ ಹುಡುಕಾಟದಲ್ಲಿದ್ದ ಹುಬ್ಬಳ್ಳಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ 2020ರಲ್ಲಿ ಫ್ರೂಟ್ ಇರ್ಫಾನ್ ಎಂಬುವವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೌಡಿಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಜೈಲು ಸೇರಿದ್ದ ಈತ ಪೆರೋಲ್ ಮೇಲೆ ಹೊರಗಿದ್ದ. ಇದೀಗ ಮತ್ತೆ ಕೊಲೆ ಬೆದರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ.
ಬಚ್ಚಾಖಾನ್ ಬಂಧಿಸಲು ಇದೇ ಕಾರಣ: ಕಮಿಷನರ್
ಬಚ್ಚಾಖಾನ್ ಬಂಧನ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯಿಸಿ, ಜಮೀನು ವ್ಯವಹಾರಕ್ಜೆ ಸಂಬಂಧಿಸಿದಂತೆ ಬಚ್ಚಾ ಖಾನ್ ಸಹಚರರ ತಂಡವು ನಗರದ ವ್ಯಕ್ತಿಯೋರ್ವನಿಗೆ ನಿರಂತರವಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಸಿಸಿಬಿ ಪೊಲೀಸರು ನಟೋರಿಸ್ ರೌಡಿ ಬಚ್ಚಾ ಖಾನ್ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ.
ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಖರೀದಿಗಾರರು ಹಾಗೂ ಮಾರಾಟಗಾರರ ನಡುವೆ ವ್ಯವಹಾರಕ್ಕೆ ಸಂಬಂಧಿಸಿ ವಿವಾದಯುಂಟಾದ ಹಿನ್ನಲೆಯಲ್ಲಿ ಬಚ್ಚಾಖಾನ್ ಸಹಚರರ ತಂಡವು ಜಮೀನು ಮಾರಾಟಗಾರರಿಗೆ ಕೋಟ್ಯಾಂತರ ರೂ. ಕೊಡುವಂತೆ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಆರೋಪಿಗಳ ಪತ್ತೆಗಾಗಿ 3 ತಂಡ ರಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾದ 7 ಜನರು ಬಂಧಿಸಲಾಗಿದ್ದು, ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಬಚ್ಚಾಖಾನ್ ನನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications