'ಮುಖ್ಯಮಂತ್ರಿ ಸ್ಥಾನ ಸಂತೆಯಲ್ಲಿ ಬದನೆಕಾಯಿ ಕೊಂಡಂತಲ್ಲ'
ಬೆಂಗಳೂರು, ಮಾ.11 : 'ಮುಖ್ಯಮಂತ್ರಿ ಸ್ಥಾನ ಬದನೆಕಾಯಿ ಕೊಂಡಂತಲ್ಲ, ದಲಿತ ಜನಾಂಗ ಮತ್ತು ಸರ್ಕಾರದ ನಡುವೆ ಸಂಘರ್ಷ ಉಂಟು ಮಾಡಲು ಕೆಲವು ಕುತಂತ್ರಿಗಳು ದಲಿತ ಸಿಎಂ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ' ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು, 'ದಲಿತರಿಗೆ ಮುಖ್ಯಮಂತ್ರಿ ಪದವಿ ನೀಡುವ ಚರ್ಚೆ ಸದ್ಯಕ್ಕೆ ಅಪ್ರಸ್ತುತ. 2018ರ ತನಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ' ಎಂದರು. [ದಲಿತ ನಾಯಕರು ಮುಖ್ಯಮಂತ್ರಿ : ಯಾರು, ಏನು ಹೇಳಿದರು?]
'ಮುಖ್ಯಮಂತ್ರಿ ಸ್ಥಾನ ಎಂಬುದು ಸಂತೆಯಲ್ಲಿ ಬದನೆಕಾಯಿ ಕೊಂಡಂತಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ಅದರದ್ದೇ ಆದ ಘನತೆ ಇರುತ್ತದೆ. ಕೆಲವರ ಕುತಂತ್ರದಿಂದಾಗಿ ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡುವ ಚರ್ಚೆ ನಡೆಯುತ್ತಿದೆ' ಎಂದು ಹೇಳಿದರು. [ದಲಿತರಿಗೆ ಸಿಎಂ ಪಟ್ಟ, ಮೌನ ಮುರಿದ ಪರಮೇಶ್ವರ]

ಸಿಎಂ ಸ್ಥಾನ ಖಾಲಿ ಇಲ್ಲ : 'ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ 2018 ರವರೆಗೆ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ದಲಿತರು ಮತ್ತು ಹಿಂದುಳಿದ ವರ್ಗದ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ' ಎಂದು ತಿಳಿಸಿದರು.
ಕೆಲವು ದಿನಗಳಿಂದ ಕರ್ನಾಟಕದಲ್ಲಿ ದಲಿತ ಸಿಎಂ ಚರ್ಚೆ ಎದ್ದಿದೆ. ದಲಿತ ಸಂಘಟನೆಗಳು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ದಲಿತ ಸಂಘಟನೆಗಳು ಜನಾಂದೋಲನವನ್ನು ಆರಂಭಿಸಿವೆ.












Click it and Unblock the Notifications