ಹೈ-ಕರ್ನಾಟಕ ಭಾಗದ ನೌಕರರಿಗೆ 10 ವರ್ಷ ವರ್ಗಾವಣೆ ಇಲ್ಲ
ಬೆಂಗಳೂರು, ಜೂನ್ 27 : ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು 10 ವರ್ಷಗಳ ಕಾಲ ವರ್ಗಾವಣೆ ಮಾಡದಂತೆ ಸೂಚನೆ ನೀಡಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ವರ್ಗಾವಣೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈ ಕುರಿತು ನಿರ್ದೇಶನ ನೀಡಿದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕೆಲಸ ಮಾಡುವ ಅಧಿಕಾರಿಗಳ ನೇಮಕದ ದಿನದಿಂದ 10 ವರ್ಷಗಳ ಕಾಲ ವರ್ಗಾವಣೆ ಮಾಡಬಾರದು ಎಂದು ಹೇಳಿದೆ.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ಬರೆದಿದ್ದರು. ಹೈದರಾಬಾದ್-ಕರ್ನಾಟಕ ಭಾಗದಲ್ಲಿನ ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ ಎಂದು ಹೇಳಿದ್ದರು.

ಕಲಬುರಗಿ ಜಿಲ್ಲೆಯಲ್ಲಿಯೇ 76 ಪ್ರಮುಖ ಹುದ್ದೆಗಳು ವರ್ಗಾವಣೆ ಕಾರಣದಿಂದಾಗಿ ಖಾಲಿ ಇವೆ. ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಉಂಟಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದರು.
ಆದ್ದರಿಂದ ಹೈದರಾಬಾದ್-ಕರ್ನಾಟಕ ಭಾಗದ ವ್ಯಾಪ್ತಿಗೆ ಬರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು 10 ವರ್ಷ ವರ್ಗಾವಣೆ ಮಾಡದಂತೆ ಸೂಚನೆ ನೀಡಲಾಗಿದೆ.
ಹೈದರಾಬಾದ್-ಕರ್ನಾಟಕ ಭಾಗಕ್ಕೆ ನೇಮಕವಾದ ಅಧಿಕಾರಿಗಳು ಸ್ಪಲ್ಪ ಸಮಯ ಇಲ್ಲೇ ಕೆಲಸ ಮಾಡುವಂತೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು. ಜೂನ್ 20ರಂದು ಇಲಾಖೆ ಹತ್ತು ವರ್ಷ ವರ್ಗಾವಣೆ ಮಾಡದಂತೆ ಸೂಚನೆ ಕೊಟ್ಟಿದೆ.












Click it and Unblock the Notifications