ಸಿಇಟಿ ಪರೀಕ್ಷೆಗೆ ಬರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಸೂಚನೆ
ಬೆಂಗಳೂರು, ಜುಲೈ 21 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಹೊರ ರಾಜ್ಯದಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಸ್ಪಷ್ಟನೆಯೊಂದನ್ನು ನೀಡಿದೆ.
Recommended Video
ಹೊರ ರಾಜ್ಯದಿಂದ ಬರುವ ಜನರಿಗೆ ಕರ್ನಾಟಕದಲ್ಲಿ ಸಾಂಸ್ಥಿಕ ಮತ್ತು ಹೋಂ ಕ್ವಾರಂಟೈನ್ ನಿಯಮ ಜಾರಿಯಲ್ಲಿದೆ. ಆದರೆ, ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
ಸಿಇಟಿ ಪರೀಕ್ಷೆ ನಡೆಸುವ ಕುರಿತು ವಿವರವಾದ ಕಾರ್ಯಾಚರಣೆ ವಿಧಾನ (ಎಸ್‌ಓಪಿ)ಯನ್ನು ಆರೋಗ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಮಾತ್ರ ಇರಬೇಕು. ಹೊರ ರಾಜ್ಯ, ದೇಶದಿಂದ ಬರುವ ವಿದ್ಯಾರ್ಥಿಗಳು ಮತ್ತು ಅವರ ಜೊತೆಗಿರುವ ಸಹಾಯಕರ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪರಿವೀಕ್ಷಕರು ಮತ್ತು ಮೇಲ್ವಿಚಾರಕರಿಗೆ ಕೈಗವಸು ಮತ್ತು ವೈದ್ಯಕೀಯ ಮಾಸ್ಕ್ ಒದಗಿಸಬೇಕು. ಕಂಟೈನ್ಮೆಂಟ್ ಝೋನ್‌ಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇರಬಾರದು ಎಂದು ಎಸ್‌ಓಪಿಯಲ್ಲಿ ತಿಳಿಸಲಾಗಿದೆ.
ಮೂರು ದಿನ ಮೊದಲು ಪರೀಕ್ಷಾ ಕೇಂದ್ರವನ್ನು ಸೋಂಕು ನಾಶಕದಿಂದ ಸ್ವಚ್ಛಗೊಳಿಸಬೇಕು. ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಪೋಷಕರು, ಜೊತೆಯಲ್ಲಿ ಬಂದವರು ಗುಂಪು ಗೂಡಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications